ನವದೆಹಲಿ: ಹಿಂಗಾರು ಹಂಗಾಮಿನಲ್ಲಿ ಕೇಂದ್ರದಿಂದ ಕುಚ್ಚಲಕ್ಕಿ ಖರೀದಿ ಕುರಿತು ಸರ್ಕಾರದ ಉತ್ತರದಿಂದ ತೃಪ್ತರಾಗದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಸದಸ್ಯರು ರಾಜ್ಯಸಭೆಯಲ್ಲಿ ಶುಕ್ರವಾರ ಸಭಾತ್ಯಾಗ ಮಾಡಿದರು.
ಇದಕ್ಕೂ ಮುನ್ನ ಟಿಆರ್‌ಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಸೇರಿ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಬಳಿಕ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರ ಕೋರಿಕೆಯಂತೆ ತಮ್ಮ ಸ್ಥಾನಕ್ಕೆ ಮರಳಿದ್ದರು.
ಬಳಿಕ ಪ್ರಶ್ನೋತ್ತರ ಅವಧಿಯಲ್ಲಿಯೂ ಈ ವಿಷಯ ಪ್ರತಿಧ್ವನಿಸಿತು. ತೆಲಂಗಾಣದಿಂದ ಎಲ್ಲ ರೀತಿಯ ಅಕ್ಕಿ ಖರೀದಿಸಲು ಕೇಂದ್ರ ಸಿದ್ಧವಿದೆಯೇ ಎಂದು ಟಿಆರ್‌ಎಸ್ ಸದಸ್ಯ ಕೆ.ಕೇಶವರಾವ್, ಸಚಿವ ಪೀಯೂಶ್ ಗೋಯಲ್ ಅವರಿಗೆ ಪ್ರಶ್ನಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಯಲ್ ಅವರು, ‘ನಮ್ಮದು ಜವಾಬ್ದಾರಿಯುತವಾದ ಸರ್ಕಾರ. ಅಕ್ಕಿ ಖರೀದಿ ಪ್ರಮಾಣವನ್ನು ಕೇಂದ್ರ ಹೆಚ್ಚಿಸುತ್ತಿದೆ. ಅಕ್ಕಿ ಖರೀದಿ ಒಪ್ಪಂದದಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.
ಈ ಸಂದರ್ಭದಲ್ಲಿ ನಿಖರ ಉತ್ತರ ನೀಡಲು ಸದಸ್ಯರು ಪಟ್ಟುಹಿಡಿದರು. ತೆಲಂಗಾಣ ಸರ್ಕಾರದ ಪತ್ರವೊಂದನ್ನು ಉಲ್ಲೇಖಿಸಿದ ಗೋಯಲ್ ಅವರು, ರಾಜ್ಯವು ಭವಿಷ್ಯದಲ್ಲಿ ಭಾರತ ಆಹಾರ ನಿಗಮಕ್ಕೆ ಕುಚ್ಚಲಕ್ಕಿ ಪೂರೈಕೆ ಮಾಡಲಾಗದು ಎಂದು ಹೇಳಿದರು.
ಸಚಿವರ ಉತ್ತರದಿಂದ ಸದಸ್ಯರು ತೃಪ್ತರಾಗಲಿಲ್ಲ. ಉಪಾಧ್ಯಕ್ಷ ಹರಿವಂಶ ಅವರು ಪೂರಕ ಪ್ರಶ್ನೆ ಕೇಳಲೂ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಸರ್ಕಾರದ ನಿಲುವು ವಿರೋಧಿಸಿ ಟಿಆರ್‌ಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.