ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19; ಆತಂಕ ಪೂರ್ಣ ಮರೆಯಾಗಿಲ್ಲ: ಕೇಂದ್ರ ಸರ್ಕಾರ

40 ಕೋಟಿ ಜನರಿಗೆ ಪ್ರತಿಕಾಯ ಶಕ್ತಿ ಕಡಿಮೆ; ಪೂರ್ಣ ತೃಪ್ತಭಾವ ಇಲ್ಲ: ಐಸಿಎಂಆರ್‌ ಸಮೀಕ್ಷೆ
Last Updated 20 ಜುಲೈ 2021, 16:03 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಮೂರನೇ ಎರಡರಷ್ಟು ಜನರು ಕೋವಿಡ್‌ ಪ್ರತಿಕಾಯ ಶಕ್ತಿಯನ್ನು ಹೊಂದಿದ್ದಾರೆ. ಆದರೆ, ಉಳಿದಂತೆ ಇನ್ನೂ 40 ಕೋಟಿ ಜನರು ಸೋಂಕು ಬಾಧಿತರಾಗುವ ಆತಂಕವಿದೆ.

ಆರು ವರ್ಷ ಮೀರಿದವರಲ್ಲಿ ಪ್ರತಿಕಾಯ ಶಕ್ತಿ ಕುರಿತು ದೇಶವ್ಯಾಪಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಈ ಕಾರಣದಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೃಪ್ತಭಾವ ಹೊಂದುವ ಸ್ಥಿತಿ ಇಲ್ಲ ಎಂದು ಕೇಂದ್ರ ಹೇಳಿದೆ.

ಐಸಿಎಂಆರ್‌ನ 4ನೇ ರಾಷ್ಟ್ರೀಯ ಕೋವಿಡ್ ಪರಿಸ್ಥಿತಿ ಸಮೀಕ್ಷೆ ಪ್ರಕಾರ, ಒಟ್ಟಾರೆಯಾಗಿ ಆಶಾದಾಯಕ ಸ್ಥಿತಿ ಇದ್ದರೂ ಪೂರ್ಣ ತೃಪ್ತ ಸ್ಥಿತಿಯೂ ಇಲ್ಲ. ಕೋವಿಡ್‌ ಮಾರ್ಗಸೂಚಿಗಳ ಪಾಲನೆ ಅಗತ್ಯ ಎಂದು ಸರ್ಕಾರ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜೂನ್‌ ಮತ್ತು ಜುಲೈ ತಿಂಗಳಲ್ಲಿ ಈ ಸಮೀಕ್ಷೆ ನಡೆಸಿದೆ. 28,975 ಮಂದಿ ಸಾರ್ವಜನಿಕರು, 7,252 ಆರೋಗ್ಯ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ನಾಲ್ಕನೇ ಸುತ್ತಿನ ಈ ಸಮೀಕ್ಷೆಯು 21 ರಾಜ್ಯಗಳ 70 ಜಿಲ್ಲೆಗಳಲ್ಲಿ ನಡೆದಿತ್ತು.

ಹಿರಿಯ ಅಧಿಕಾರಿಯೊಬ್ಬರು, ‘ಅಂಕಿ ಅಂಶದ ಪ್ರಕಾರ ಶೇ 85 ಆರೋಗ್ಯ ಕಾರ್ಯಕರ್ತರು ಪ್ರತಿಕಾಯ ಶಕ್ತಿ ಹೊಂದಿದ್ದಾರೆ. ಹತ್ತನೇ ಒಂದರಷ್ಟು ಕಾರ್ಯಕರ್ತರು ಇನ್ನೂ ಲಸಿಕೆಯನ್ನು ಪಡೆಯಬೇಕಾಗಿದೆ’ ಎಂದು ತಿಳಿಸಿದರು.

ಕೋವಿಡ್‌ ಮಾರ್ಗಸೂಚಿಗಳ ಕಡ್ಡಾಯ ಪಾಲನೆಯನ್ನು ಪ್ರತಿಪಾದಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕ, ಧಾರ್ಮಿಕ ಮತ್ತು ರಾಜಕೀಯ ವೇದಿಕೆಗಳಲ್ಲಿ ಗುಂಪುಗೂಡುವುದನ್ನು ಆದಷ್ಟು ತಪ್ಪಿಸಬೇಕು. ಅನಗತ್ಯವಾಗಿ ಪ್ರಯಾಣ ಮಾಡುವುದರಿಂದ ದೂರವಿರಬೇಕು. ಪೂರ್ಣ ಲಸಿಕೆ ಪಡೆದಿದ್ದರಷ್ಟೇ ಪ್ರಯಾಣಿಸಬೇಕು ಎಂದಿದೆ.

‘ಮೊದಲು ಪ್ರಾಥಮಿಕ ಶಾಲೆಗಳನ್ನೇ ಆರಂಭಿಸಿ’
ಶಾಲೆಗಳನ್ನು ಪುನರಾರಂಭಿಸಲು ಒಮ್ಮೆ ನಿರ್ಧರಿಸಿದರೆ, ಮೊದಲಿಗೆ ಪ್ರಾಥಮಿಕ ಹಂತದ ಶಾಲೆಗಳನ್ನೇ ಆರಂಭಿಸುವುದು ಉತ್ತಮ ಎಂದು ಐಸಿಎಂಆರ್ ಸಲಹೆ ಮಾಡಿದೆ.

ವಯಸ್ಕರಿಗಿಂತಲೂ ಮಕ್ಕಳು ಸಾಂಕ್ರಾಮಿಕ ಸೋಂಕುಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು. ಆದರೆ, ಪ್ರಾಥಮಿಕ ಶಾಲೆ ಪುನರಾರಂಭಿಸುವುದೇ ಆದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿಗೆ ಲಸಿಕೆ ನೀಡಿರುವುದು ಕಡ್ಡಾಯವಾಗಿದೆ ಎಂದು ಐಸಿಎಂಆರ್‌ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಮಂಗಳವಾರ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧೆಡೆ ಸೋಂಕು ಪ್ರಕರಣ ತಗ್ಗಿರುವ ಕಾರಣ ಶಾಲೆಗಳನ್ನು ಪುನರಾರಂಭಿಸಬಹುದೇ ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು. ಕೆಲವು ದೇಶಗಳಲ್ಲಿ 1 ಮತ್ತು 2ನೇ ಅಲೆಯ ಸಂದರ್ಭದಲ್ಲಿಯೂ ಪ್ರಾಥಮಿಕ ಶಾಲೆಗಳನ್ನು ಬಂದ್‌ ಮಾಡಿರಲಿಲ್ಲ ಎಂದು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT