ಶುಕ್ರವಾರ, ಡಿಸೆಂಬರ್ 3, 2021
26 °C

ಪುಲ್ವಾಮಾಗೆ ಭೇಟಿ ನೀಡಲಿರುವ ಅಮಿತ್‌ ಶಾ; ಸಿಆರ್‌ಪಿಎಫ್‌ ಶಿಬಿರದಲ್ಲಿ ರಾತ್ರಿ ಊಟ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಪುಲ್ವಾಮಾ ಜಿಲ್ಲೆಯ ಲೇಥ್‌ಪೊರಾದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಸೈನಿಕರೊಂದಿಗೆ ಅಮಿತ್‌ ಶಾ ಊಟ ಮಾಡಲಿದ್ದು, ರಾತ್ರಿ ಶಿಬಿರದಲ್ಲಿಯೇ ಉಳಿಯುವುದಾಗಿ ವರದಿಯಾಗಿದೆ.

2019ರ ಫೆಬ್ರುವರಿ 14ರಂದು ಜಮ್ಮು–ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮಾಹುತಿ ದಾಳಿಕೋರನು ಸ್ಫೋಟಕಗಳನ್ನು ಒಳಗೊಂಡ ವಾಹನವನ್ನು ಸಿಆರ್‌ಪಿಎಫ್‌ ಸಿಬ್ಬಂದಿ ಸಾಗುತ್ತಿದ್ದ ವಾಹನಗಳ ಮೇಲೆ ನುಗ್ಗಿಸಿದ್ದ. ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಸಿಬ್ಬಂದಿ ಸಾವಿಗೀಡಾಗಿದ್ದರು. ಆ ದಾಳಿ ನಡೆದಿದ್ದ ಪ್ರಾಂತ್ಯದಲ್ಲಿಯೇ ಸಿಆರ್‌ಪಿಎಫ್‌ ಶಿಬಿರವಿದೆ.

ಇಂದು ಸಂಜೆ ಶ್ರೀನಗರದ ದಾಲ್‌ ಸರೋವರದಲ್ಲಿ ಶಿಕಾರಾ ಆಚರಣೆಯ ಪ್ರಯುಕ್ತ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಭಾಗಿಯಾದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಮಿತ್‌ ಶಾ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಶನಿವಾರ ಅಮಿತ್‌ ಶಾ ಅವರು ಶ್ರೀನಗರಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಿಂದ ನೇರವಾಗಿ ನೌಗಾಮ್‌ಗೆ ತೆರಳಿ, ಜೂನ್‌ನಲ್ಲಿ ಉಗ್ರರ ದಾಳಿಯಿಂದಾಗಿ ಮೃತಪಟ್ಟ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಅಧಿಕಾರಿ ಪರ್ವೇಜ್‌ ಅಹ್ಮದ್‌ ಅವರ ಕುಟುಂಬದವರನ್ನು ಭೇಟಿ ಮಾಡಿದ್ದರು. ಅನಂತರ ಶ್ರೀನಗರದ ರಾಜ ಭವನದಲ್ಲಿ ಭದ್ರತೆಗೆ ಸಂಬಂಧಿಸಿದ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ–

ಜಮ್ಮುವಿನಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಭಾಷಣ, ಭಾರತ–ಪಾಕಿಸ್ತಾನ ಗಡಿಗೆ ಭೇಟಿ ನೀಡಿ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದ ಅಮಿತ್‌ ಶಾ ಅವರು ಭಾನುವಾರ ಸಂಜೆ ಶ್ರೀನಗರಕ್ಕೆ ಮರಳಿದ್ದರು. ಸೋಮವಾರ ಖೀರ್‌ ಭವಾನಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತುಲ್ಲಮುಲ್ಲಾ ಪ್ರದೇಶದಲ್ಲಿ ಚಿನಾರ್ ಮರಗಳ ನಡುವೆ ಇರುವ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು