ಅಂತರರಾಷ್ಟ್ರೀಯ ವಿಮಾನಯಾನ ನಿರ್ಬಂಧ ಹಿಂಪಡೆದ ಅಮೆರಿಕ

ವಾಷಿಂಗ್ಟನ್: ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿವಿಧ ದೇಶಗಳಿಗೆ ಅನ್ವಯಿಸಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ಸೋಮವಾರ ಹಿಂಪಡೆದಿದೆ.
ಯೂರೋಪ್‌ನ ವಿವಿಧ ದೇಶಗಳು ಹಾಗೂ ಗಡಿಗೆ ಹೊಂದಿಕೊಂಡ ಮೆಕ್ಸಿಕೊ, ಕೆನಡಾ ಮೇಲಿನ ನಿರ್ಬಂಧ ಸಡಿಲಿಸಲಾಗಿದೆ. ಇದು, ಈ ದೇಶಗಳ ಜನರಿಗೆ ಆಪ್ತರು, ಕುಟುಂಬ ಸದಸ್ಯರ ಭೇಟಿಗೆ ಹಾದಿ ಸುಗಮಗೊಳಿಸಿದೆ.
ಪೂರ್ಣ ಲಸಿಕೆ ಪಡೆದಿರುವ ದಾಖಲೆಯೊಂದಿಗೆ ಅಮೆರಿಕಕ್ಕೆ ಭೇಟಿ ನೀಡಬಹುದಾಗಿದೆ. ಕೋವಿಡ್ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಡೋನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ನಿರ್ಬಂಧವನ್ನು ಹೇರಿತ್ತು.
ನಿರ್ಬಂಧ ತೆರವು ಹಿಂದೆಯೇ ವಿಮಾನಯಾನ ಸಂಸ್ಥೆಗಳು ಯೂರೋಪ್ ಮತ್ತು ಇತರೆಡೆಯಿಂದ ಹೆಚ್ಚಿನ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಗರಿಗೆದರಿದೆ. ಅಂಕಿ ಅಂಶಗಳ ಪ್ರಕಾರ, ಯುರೋಪ್ ಮತ್ತು ಅಮೆರಿಕ ನಡುವಣ ಪ್ರಯಾಣಿಕರ ಪ್ರಮಾಣ ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಈ ತಿಂಗಳು ಶೇ 21ರಷ್ಟು ಹೆಚ್ಚಾಗಿದೆ.
ಅಲ್ಲದೆ, ಗಡಿಭಾಗದ ಮೆಕ್ಸಿಕೊ ಮತ್ತು ಕೆನಡಾದಿಂದಲೂ ರಸ್ತೆ ಮೂಲಕ ಸಂಚರಿಸಲು ಇದ್ದ ನಿರ್ಬಂಧವನ್ನು ಅಮೆರಿಕ ತೆಗೆದಿದೆ. ಮೆಕ್ಸಿಕೊ ಮೂಲದ ಗ್ರಾಹಕರ ಸಂಖ್ಯೆ ಕುಂಠಿತವಾಗಿದ್ದರಿಂದ ಅಮೆರಿಕದ ಬಹುತೇಕ ಮಾಲ್‌ಗಳು, ರೆಸ್ಟೋರಂಟ್‌ಗಳು ಭಣಗುಡುವ ಸ್ಥಿತಿಯಲ್ಲಿದ್ದವು. ಗಡಿ ಭಾಗದ ಚರ್ಚ್‌ಗಳಲ್ಲೂ ಹಾಜರಾತಿ ಏರುವ ನಿರೀಕ್ಷೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.