ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elections 2022: ಬೀಡಾಡಿ ಜಾನುವಾರು ಬಿಜೆಪಿಯ ದುಃಸ್ವಪ್ನ?

ಉತ್ತರ ಪ್ರದೇಶದಲ್ಲಿ ಬೆಳೆದ ಫಸಲು ನಾಶ ಮಾಡುತ್ತಿರುವ ದನಗಳು: ರೈತರ ಆಕ್ರೋಶ
Last Updated 19 ಫೆಬ್ರುವರಿ 2022, 21:09 IST
ಅಕ್ಷರ ಗಾತ್ರ

ಸೀತಾಪುರ (ಉತ್ತರ ಪ್ರದೇಶ): ಬೀಡಾಡಿ ಜಾನುವಾರು ಸಮಸ್ಯೆ ಬಗ್ಗೆ ಕೇಳಿದ ಕೂಡಲೇ 40 ವರ್ಷದ ರಜವತಿ ದೇವಿ ಆಕ್ರೋಶದಿಂದ ಕೂಗಾಡಿದರು. ಸೀತಾಪುರ ಜಿಲ್ಲೆಯ ರಾಯಪುರ ಗ್ರಾಮದ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಲು ಕಾಯುತ್ತಿದ್ದಂತೆ ಇತ್ತು.

ರಜವತಿ ಅವರಿಗೆ ಸಣ್ಣ ಜಮೀನು ಇದೆ. ‘ಬೀಡಾಡಿ ಜಾನುವಾರುಗಳು ಬೆಳೆದು ನಿಂತ ಬೆಳೆಯನ್ನು ತಿಂದು ಬಿಡುತ್ತಿವೆ... ಹೊಲದಲ್ಲಿ ಇರುವ ಬೆಳೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ... ಮಕ್ಕಳು ಹಗಲೆಲ್ಲ ಹೊಲವನ್ನು ಕಾಯುತ್ತಾರೆ. ಶಾಲೆಗೂ ಹೋಗುತ್ತಿಲ್ಲ. ರಾತ್ರಿಯಲ್ಲಿ ದೊಡ್ಡವರು‍ ಹೊಲ ಕಾಯುತ್ತಾರೆ’ ಎಂದು ರಜವತಿ ಹೇಳುತ್ತಾರೆ.

ರಜವತಿ ಅವರ ಭಾವನೆ ರಾಜ್ಯದ ಬಹುತೇಕ ಎಲ್ಲ ಭಾಗಗಳ ಜನರ ಭಾವನೆಯೂ ಹೌದು. ಬೀಡಾಡಿ ಜಾನುವಾರುಗಳಿಂದ ಬೆಳೆಗಳನ್ನು ರಕ್ಷಿಸಲು ರಾಜ್ಯದ ಎಲ್ಲ ಭಾಗಗಳ ರೈತರು ಹರಸಾಹಸ ಪಡುತ್ತಿದ್ದಾರೆ.

ಬೆದರುಬೊಂಬೆ, ಬಿದಿರಿನ ಅಟ್ಟಣಿಗೆ (ಜನರು ಕುಳಿತುಕೊಂಡು ಅಥವಾ ಮಲಗಿ ಹೊಲದ ಕಡೆಗೆ ಗಮನ ಇರಿಸಲು ಸಾಧ್ಯವಾಗುವಂತಹ ರಚನೆ), ಮುಳ್ಳು ಬೇಲಿ ಎಲ್ಲ ಹೊಲಗಳಲ್ಲಿಯೂ ಕಾಣಿಸುವ ಸಾಮಾನ್ಯ ಚಿತ್ರಣ.

ಪ್ರತಿ ಬಾರಿಯೂ ನಾಲ್ಕರಿಂದು ಐದು ಕ್ವಿಂಟಾಲ್‌ ಗೋಧಿ ಸಿಗುತ್ತಿತ್ತು. ಆದರೆ, ಈ ಬಾರಿ ಎರಡು ಸಿಕ್ಕರೆ ಅದೇ ಹೆಚ್ಚು. ಅರ್ಧದಷ್ಟು ಬೆಳೆಯನ್ನು ಬೀಡಾಡಿ ಜಾನುವಾರುಗಳು ತಿಂದು ಹಾಕಿವೆ ಎಂದು ರಜವತಿ ಹೇಳುತ್ತಾರೆ. ಇತರ ಹಲವು ಗ್ರಾಮಗಳ ರೈತರ ಪರಿಸ್ಥಿತಿಯೂ ಇದೇ ಆಗಿದೆ.

ರಜವತಿ ಅವರು ನೆಲೆಸಿರುವ ರಾಯಪುರದಿಂದ ಸ್ವಲ್ಪ ದೂರಕ್ಕೆ ಸಾಗಿದರೆ, ಮರವೊಂದರ ನೆರಳಿನಲ್ಲಿ ಮಲಗಿರುವ ಜಾನುವಾರುಗಳ ಮಂದೆಯೇ ಕಾಣಿಸಿತು. ‘ಇವು ಹಗಲಿನಲ್ಲಿ ಹೀಗೆ ಸುಮ್ಮನೆ ಇರುತ್ತವೆ. ರಾತ್ರಿಯಾದ ಕೂಡಲೇ ಹೊಲಗಳಿಗೆ ನುಗ್ಗುತ್ತವೆ. ಈ ಜಾನುವಾರುಗಳನ್ನು ಓಡಿಸುವುದಕ್ಕಾಗಿ ಗ್ರಾಮದ ಜನರು ಕೂಗು ಹಾಕುವುದನ್ನು ರಾತ್ರಿಯಿಡೀ ಕೇಳಿಸಿಕೊಳ್ಳಬಹುದು’ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು ಕುಮಾರ್‌ ಸಿಂಗ್‌.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬೀಡಾಡಿ ದನಗಳ ಸಮಸ್ಯೆಯೂ ಪ್ರಮುಖ ವಿಷಯವಾಗಿದೆ. ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ನಾಯಕರು ಪ್ರಚಾರ ಸಭೆಗಳಲ್ಲಿ ಈ ವಿಚಾರ ಎತ್ತಿದ್ದಾರೆ. ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿಯೂ ಅವರು ಭರವಸೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಬೀಡಾಡಿ ದನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂಬುದನ್ನು ಬಿಜೆಪಿಯ ಮುಖಂಡರು ಒಪ್ಪುವುದಿಲ್ಲ. 2019ರಲ್ಲಿ ಸರ್ಕಾರ ಸಿದ್ಧಪಡಿಸಿದ ವರದಿಯ ಪ್ರಕಾರ, ರಾಜ್ಯದಲ್ಲಿರುವ ಬೀಡಾಡಿ ಜಾನುವಾರು ಸಂಖ್ಯೆ 11.8 ಲಕ್ಷ. 2012ರಿಂದ 2019ರ ಅವಧಿಯಲ್ಲಿ ದೇಶದಲ್ಲಿ ಬೀಡಾಡಿ ಜಾನುವಾರುಗಳ ಏರಿಕೆ ಪ್ರಮಾಣವು ಶೇ 3.2ರಷ್ಟಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಈ ಪ್ರಮಾಣ ಶೇ 17ರಷ್ಟು ಎಂದು ವರದಿಯಲ್ಲಿ ಹೇಳಲಾಗಿದೆ.

‘ಬೀಡಾಡಿ ಜಾನುವಾರು ಸಮಸ್ಯೆಯು ಖಂಡಿತವಾಗಿಯೂ ಚುನಾವಣಾ ವಿಷಯವಾಗಿದೆ. ಬೆಳೆ ನಾಶದ ನಷ್ಟ ಅನುಭವಿಸಿದ ರೈತರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಇಂತಹ ಜಾನುವಾರುಗಳಿಂದ ನಷ್ಟ ಅನುಭವಿಸಿದ್ದಾರೆ’ ಎಂದು ಲಖಿಂಪುರ ಖೇರಿ ಜಿಲ್ಲೆಯ ರೈತ ಮುನ್ನಾಲಾಲ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೆಲವೇ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಹೊಸ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಮಸ್ಯೆಯ ತೀವ್ರತೆಯ ಅರಿವು ಇದೆ. ಹಾಗಾಗಿಯೇ, ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ಬೀಡಾಡಿ ದನಗಳನ್ನು ಹಿಡಿಯಲು ವಿಶೇಷ ಅಭಿಯಾನ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಆದಿತ್ಯನಾಥ ಮನೆಗೆ ಜಾನುವಾರು ಒಯ್ದಿದ್ದ ರೈತರು!

ಹತಾಶೆಗೊಂಡ ರೈತರು ತಮ್ಮ ತಮ್ಮ ಗ್ರಾಮಗಳಲ್ಲಿ ಇದ್ದ ಬೀಡಾಡಿ ಜಾನುವಾರುಗಳನ್ನು ಹಿಡಿದು ಲಖನೌಗೆ ತಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮನೆಯ ಮುಂದೆ ಕಟ್ಟಿ ಹಾಕುವ ನಿರ್ಧಾರಕ್ಕೂ ಬಂದಿದ್ದರು. ಈ ಪ್ರಯತ್ನವನ್ನೂ ಅವರು ಮಾಡಿದ್ದರು. ಆದರೆ, ಅಧಿಕಾರಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಕೆಲವು ಸ್ಥಳಗಳಲ್ಲಿ ರೈತರು ಜಾನುವಾರುಗಳನ್ನು ಶಾಲೆಗಳ ಆವರಣದಲ್ಲಿ ಸೇರಿಸಿ, ಆವರಣದ ಗೇಟುಗಳಿಗೆ ಹೊರಗಿನಿಂದ ಬೀಗ ಜಡಿದಿದ್ದರು.

ಬೀಡಾಡಿ ಜಾನುವಾರುಗಳಿಗಾಗಿ ಗೋಶಾಲೆಗಳನ್ನು ತೆರೆಯಲು ಗ್ರಾಮ ಪಂಚಾಯಿತಿಗಳಿಗೆ ನಿಧಿ ಒದಗಿಸಿದ್ದಾಗಿ ಸರ್ಕಾರವು ಹೇಳುತ್ತಿದೆ. ಆದರೆ, ಸೀತಾಪುರ, ಲಖಿಂಪುರ ಖೇರಿ, ಹರ್ದೋಯಿ ಮತ್ತು ಉನ್ನಾವೊ ಜಿಲ್ಲೆಗಳ ಗ್ರಾಮಗಳಲ್ಲಿ ಗೋಶಾಲೆಗಳು ಈ ವರದಿಗಾರನ ಕಣ್ಣಿಗೆ ಬಿದ್ದಿಲ್ಲ. ಗೋಶಾಲೆ ಇದ್ದಲ್ಲಿಯೂ ಅವು ತುಂಬಿವೆ. ಹೊಸ ಜಾನುವಾರುಗಳಿಗೆ ಅಲ್ಲಿ ಸ್ಥಳವೇ ಇಲ್ಲ.

ಬೀಡಾಡಿ ಜಾನುವಾರು ಸಮಸ್ಯೆಯೇ ಅಲ್ಲ ಎಂಬುದು ಬಿಜೆಪಿ ನಾಯಕರ ಪ್ರತಿಪಾದನೆ. ಆದರೆ, ರೈತರು ಅದನ್ನು ಒಪ್ಪುತ್ತಿಲ್ಲ. ‘ರೈತರಲ್ಲಿ ಭಾರಿ ಅಸಮಾಧಾನ ಇದೆ. ಆದರೆ ಅದು ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕಮರಿಸಲಿದೆಯೇ ಎಂಬುದನ್ನು ಇನ್ನಷ್ಟೇ ನೋಡಬೇಕಿದೆ’ ಎಂದು ಜಮ್ಖಾನ್ವಾ ಗ್ರಾಮದ ಜಸ್ವಂತ್‌ ದ್ವಿವೇದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT