ಶನಿವಾರ, ಸೆಪ್ಟೆಂಬರ್ 18, 2021
24 °C

ಉತ್ತರ ಪ್ರದೇಶ ಚುನಾವಣೆ: ಬ್ರಾಹ್ಮಣ ಸಮ್ಮೇಳನಕ್ಕೆ ಅಯೋಧ್ಯೆಯಿಂದ ಬಿಎಸ್‌ಪಿ ಚಾಲನೆ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಏಳು ‘ಬ್ರಾಹ್ಮಣ ಸಮ್ಮೇಳನ’ಗಳನ್ನು ಹಮ್ಮಿಕೊಂಡಿದ್ದು, ಅಯೋಧ್ಯೆಯಿಂದ ಶುಕ್ರವಾರ ಆನ್‌ಲೈನ್ ಮೂಲಕ ಚಾಲನೆ ನೀಡಲಾಗಿದೆ.

ಸಮ್ಮೇಳನ ಉದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಎಸ್‌.ಸಿ.ಮಿಶ್ರಾ ಅವರು ಅಯೋಧ್ಯೆಯ ರಾಮ ಮಂದಿರ ಮತ್ತು ಹನುಮಗಿರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಇದೊಂದು ‘ಪ್ರಬುದ್ಧ ಸಮ್ಮೇಳನ’ ಎಂದು ಹೇಳಿದ್ದಾರೆ. ಜಾತಿ ಆಧಾರಿತ ಸಭೆಗಳಿಗೆ ನ್ಯಾಯಾಲಯದ ನಿಷೇಧ ಇರುವುದರಿಂದ ಸಮ್ಮೇಳನವನ್ನು ಅವರು ಈ ರೀತಿ ಕರೆದಿದ್ದಾರೆ ಎನ್ನಲಾಗಿದೆ.

ಪ್ರತಿಯೊಬ್ಬರಿಗೂ ಸೇರಿರುವ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಿಶ್ರಾ ಟೀಕಿಸಿದ್ದಾರೆ. ನಾವೂ ಭಗವಾನ್ ರಾಮನನ್ನು ಪೂಜಿಸುತ್ತೇವೆ. ಆದರೆ ಆ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಬ್ರಾಹ್ಮಣರಿಗೆ ಗೌರವ ನೀಡುವ ಏಕೈಕ ಪಕ್ಷ ಬಿಎಸ್‌ಪಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅತಿ ಹೆಚ್ಚು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 2007ರಲ್ಲಿ ಬಿಎಸ್‌ಪಿ ಸರ್ಕಾರದಲ್ಲಿ ಬ್ರಾಹ್ಮಣ ಸಮುದಾಯದ ಅನೇಕರು ಮಂತ್ರಿಗಳಾಗಿದ್ದರು ಎಂದು ಅವರು ಹೇಳಿದ್ದಾರೆ.

ಮಾಜಿ ಸಚಿವ ನಕುಲ್ ದುಬೆ, ಅಂಟೂ ಮಿಶ್ರಾ ಸೇರಿದಂತೆ ಪಕ್ಷದ ಅನೇಕ ಬ್ರಾಹ್ಮಣ ಸಮುದಾಯದ ಮುಖಂಡರು ಹಾಜರಿದ್ದರು.

ಅಂಬೇಡ್ಕರ್‌ ನಗರ, ಪ್ರತಾಪ್‌ಗಡ, ಕೌಶಾಂಬಿ, ಪ್ರಯಾಗ್‌ರಾಜ್, ಸುಲ್ತಾನ್‌ಪುರ ಮತ್ತು ಮಥುರಾದಲ್ಲಿ ಮುಂದಿನ ಸಮ್ಮೇಳನಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು