ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರ: ರೋಗಿ ಪತ್ನಿಯನ್ನು ತಳ್ಳುಗಾಡಿಯಲ್ಲೇ ಮಲಗಿಸಿ ಆಸ್ಪತ್ರೆಗೆ ಎಳೆದೊಯ್ದ ವೃದ್ಧ

ತನಿಖೆಗೆ ಆದೇಶಿಸಿದ ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌
Last Updated 5 ಏಪ್ರಿಲ್ 2022, 15:21 IST
ಅಕ್ಷರ ಗಾತ್ರ

ಬಲಿಯಾ(ಉತ್ತರ ಪ್ರದೇಶ): ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು ತಳ್ಳುಗಾಡಿಯೊಳಗೆ ಮಲಗಿಸಿಕೊಂಡು ಎಳೆದೊಯ್ಯುತ್ತಿರುವ ವೃದ್ಧರೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣದ ಮನಕಲಕಿದೆ.

ವಿಡಿಯೊ ನೋಡಿದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ತನಿಖೆಗೆ ಆದೇಶಿಸಿದ್ದಾರೆ.

ಬಲಿಯಾ ಜಿಲ್ಲೆಯ ಅಂದೌರ್‌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾರ್ಚ್‌ 28ರಂದು, ಗ್ರಾಮದ ವೃದ್ಧ ಸಕುಲ್‌ ಪ್ರಜಾಪತಿ ಎಂಬುವವರು 55 ವರ್ಷದ ಪತ್ನಿ ಜೋಗ್ನಿ ಅವರನ್ನು ತಳ್ಳುಗಾಡಿಯ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಮನೆಯಿಂದ ಆಸ್ಪತ್ರೆಗೆ 3 ಕಿ.ಮೀ. ದೂರವಿದ್ದು, ಯಾವುದೇ ಗಾಡಿ ಲಭ್ಯವಾಗದ ಹಿನ್ನೆಲೆ ತಳ್ಳುಗಾಡಿಯಲ್ಲೇ ಪತ್ನಿಯನ್ನು ಮಲಗಿಸಿಕೊಂಡು ಆಸ್ಪತ್ರೆ ವರೆಗೆ ಎಳೆದೊಯ್ದಿದ್ದಾರೆ.

'ಘಟನೆ ಕುರಿತಂತೆ ತನಿಖೆಗೆ ಡಿಸಿಎಂ ವೈದ್ಯಕೀಯ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಆದೇಶಿಸಿದ್ದಾರೆ' ಎಂದು ವೈದ್ಯಕೀಯ ಮುಖ್ಯ ಅಧಿಕಾರಿ ನೀರಜ್‌ ಪಾಂಡೆ ಮಂಗಳವಾರ ಹೇಳಿದ್ದಾರೆ.

'ಸ್ಥಳೀಯ ಆಸ್ಪತ್ರೆಯಲ್ಲಿ ಕೆಲವು ಔಷಧವನ್ನು ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಪ್ರಜಾಪತಿ ಅವರಿಗೆ ತಿಳಿಸಿದ್ದಾರೆ. ಬಳಿಕ ಪತ್ನಿಯನ್ನು ಗಾಡಿಯಲ್ಲೇ ಬಿಟ್ಟು ಮನೆಗೆ ದೌಡಾಯಿಸಿ, ಅಗತ್ಯ ಬಟ್ಟೆ ಹಾಗೂ ದುಡ್ಡನ್ನು ತೆಗೆದುಕೊಂಡು ಬಂದಿದ್ದಾರೆ. ಸಣ್ಣ ಟ್ರಕ್‌ ಸಹಾಯದಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ' ಎಂದು ನೀರಜ್ ಪಾಂಡೆ ವಿವರಿಸಿದ್ದಾರೆ.

ಶತಾಯಗತಾಯ ಪ್ರಯತ್ನಿಸಿದರೂ ಪ್ರಜಾಪತಿ ಅವರಿಗೆ ಸಕಾಲದಲ್ಲಿ ಆಸ್ಪತ್ರೆಗೆ ಪತ್ನಿಯನ್ನು ಸಾಗಿಸಲು ಅಗತ್ಯ ನೆರವು ಸಿಗದಿದ್ದರಿಂದ ಆಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಪ್ರಜಾಪತಿ ಅವರ ಪತ್ನಿ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ರಾತ್ರಿ 11 ಗಂಟೆಗೆ ಪತ್ನಿ ಮೃತರಾದರು. ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಂಬುಲೆನ್ಸ್‌ ನಿರಾಕರಿಸಲಾಯಿತು. ರಾತ್ರಿ ಹೊತ್ತಲ್ಲಿ ಆಂಬುಲೆನ್ಸ್‌ ಸೇವೆ ಇಲ್ಲ ಎಂದು ಆಸ್ಪತ್ರೆಯವರು ಹೇಳಿದರು' ಎಂದು ಪ್ರಜಾಪತಿ ದೂರಿದ್ದಾರೆ.

ಬಳಿಕ ₹1,100 ಕೊಟ್ಟು ಖಾಸಗಿ ಆಂಬುಲೆನ್ಸ್‌ ಮೂಲಕ ಮೃತದೇಹವನ್ನು ಮನೆಗೆ ಸಾಗಿಸಿದ್ದಾರೆ.

ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ರಾಜ್ಯದಲ್ಲಿ ಆರೋಗ್ಯ ಸುವ್ಯವಸ್ಥೆಯ ಕೊರತೆ ಎದುರಿಸುತ್ತಿರುವುದಕ್ಕೆ ಜ್ವಲಂತ ಸಾಕ್ಷಿ ಎಂದಿದ್ದಾರೆ.

'ಉತ್ತರ ಪ್ರದೇಶದಲ್ಲಿ ಆರೋಗ್ಯ ವಿಭಾಗಕ್ಕೆ ಸಂಬಂಧಿಸಿ ನಕಲಿ ಸಾಧನೆಗಳ ಜಾಹೀರಾತಿಗೆ ಖರ್ಚು ಮಾಡುವುದರಲ್ಲಿ ಸಣ್ಣ ಮಟ್ಟದ ದುಡ್ಡನ್ನು ವ್ಯಯಿಸಿದರೆ ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸಬಹುದು. ಎಸ್‌ಪಿ ಆಡಳಿತದಲ್ಲಿ ಆರೋಗ್ಯ ವಿಭಾಗವು ಹೆಚ್ಚಿನ ಸುಧಾರಣೆ ಕಂಡಿತ್ತು. ಬಿಜೆಪಿ ಸರ್ಕಾರದ ಅಡಿಯಲ್ಲಿ ಜನರು ಸ್ಟ್ರೆಚರ್‌ ಮತ್ತು ಆಂಬುಲೆನ್ಸ್‌ಗಳ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ' ಎಂದು ಅಖಿಲೇಶ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT