ಬುಧವಾರ, ಮೇ 18, 2022
23 °C

ಬಂಧನದ ಭೀತಿ: ದುಬೈಗೆ ಹಾರಿದ ಇಮ್ರಾನ್‌ ಖಾನ್‌ ಪತ್ನಿಯ ಆತ್ಮೀಯ ಸ್ನೇಹಿತೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಾಹೋರ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೂರನೇ ಪತ್ನಿ ಬುಶ್ರಾ ಬಿಬಿ ಅವರ ಆತ್ಮೀಯ ಸ್ನೇಹಿತೆ ಫರಾಹ್‌ ಖಾನ್‌, ರಾಷ್ಟ್ರವನ್ನು ತೊರೆದು ದುಬೈಗೆ ಹಾರಿದ್ದಾರೆ.

ಪಾಕ್‌ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಫರಾಹ್‌ ಖಾನ್‌ ಅವರು ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ದುಬೈಗೆ ಪಲಾಯನ ಮಾಡಿದ್ದಾರೆ. ಈಗಾಗಲೇ ಫರಾಹ್‌ ಅವರ ಪತಿ ಅಹಸಾನ್‌ ಜಾಮಿಲ್‌ ಗುಜ್ಜರ್‌ ಅವರು ಪಾಕ್‌ ತೊರೆದು ಅಮೆರಿಕ ಸೇರಿಕೊಂಡಿದ್ದಾರೆ.

ಫರಾಹ್‌ ಅವರು ಭಾನುವಾರ ದುಬೈಗೆ ತೆರಳಿದ್ದಾರೆ ಎಂದು 'ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌' ಪತ್ರಿಕೆ ಭಾನುವಾರ ವರದಿ ಮಾಡಿದೆ.

ಅಧಿಕಾರಿಗಳಿಗೆ ತಮ್ಮಿಚ್ಛೆಯಂತೆ ವರ್ಗಾವಣೆಗೊಳ್ಳಲು ಫರಾಹ್‌ ಖಾನ್‌ ಅವರು ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ. ಸುಮಾರು 6 ಶತಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಫರಾಹ್‌ ಅವರು 'ಎಲ್ಲ ಅವ್ಯವಹಾರಗಳ ತಾಯಿ' ಎಂದು ವಿಪಕ್ಷಗಳು ಆರೋಪಿಸಿವೆ.

ಪಿಎಂ ಇಮ್ರಾನ್ ಖಾನ್‌ ಮತ್ತು ಅವರ ಪತ್ನಿಯ ನೆರವಿನೊಂದಿಗೆ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಫರಾಹ್‌ ಖಾನ್‌ ನಡೆಸಿದ್ದಾರೆ ಎಂದು ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರ ಮಗಳು, ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಉಪಾಧ್ಯಕ್ಷೆ ಮರಿಯಮ್‌ ನವಾಜ್‌ ಅವರು ಆರೋಪಿಸಿದ್ದಾರೆ.

ಅಧಿಕಾರ ಕಳೆದುಕೊಂಡರೆ ತನ್ನ 'ಕಳ್ಳತನಗಳು' ಬಯಲಾಗುತ್ತವೆ ಎಂಬ ಭಯ ಪಿಎಂ ಇಮ್ರಾನ್‌ ಖಾನ್‌ ಅವರನ್ನು ಕಾಡುತ್ತಿದೆ ಎಂದು ಮರಿಯಮ್‌ ನವಾಜ್‌ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸಿಎಂ ಉಸ್ಮಾನ್‌ ಬುಜ್‌ದಾರ್‌ ಮೂಲಕ ವರ್ಗಾವಣೆ ದಂಧೆಯಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾರೆ ಎಂದು ಇತ್ತೀಚೆಗೆ ಪದಚ್ಯುತಗೊಂಡ ಪಂಜಾಬ್‌ ರಾಜ್ಯಪಾಲ ಚೌಧರಿ ಸರ್ವಾರ್‌ (ಇಮ್ರಾನ್‌ ಖಾನ್‌ ಅವರ ಹಳೆಯ ಸ್ನೇಹಿತ), ಪಕ್ಷದ ಸದಸ್ಯ ಅಲೀಮ್‌ ಖಾನ್‌ ಅವರು ಫರಾಹ್‌ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

ಪಾಕ್‌ ಸಂಸತ್ತು ನ್ಯಾಷನಲ್‌ ಅಸೆಂಬ್ಲಿಯಲ್ಲಿ ಇಮ್ರಾನ್‌ ನೇತೃತ್ವದ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲಗೊಂಡ ಬೆನ್ನಲ್ಲೇ ಇಮ್ರಾನ್‌ ಖಾನ್‌ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲವರು ದೇಶವನ್ನು ತೊರೆಯುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ.

ಭಾನುವಾರ ಸಂಸತ್ತು ವಿಸರ್ಜನೆಗೆ ಅಧ್ಯಕ್ಷ ಆರಿಫ್‌ ಅಲ್ವಿ ಅವರ ಅನುಮೋದನೆಯನ್ನು ಪಡೆಯುವ ಮೂಲಕ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ಇಮ್ರಾನ್‌ ಖಾನ್‌ ವಿಫಲಗೊಳಿಸಿದ್ದರು.

ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಇಮ್ರಾನ್‌ ಖಾನ್‌, ಪತ್ನಿ ಮತ್ತು ಪತ್ನಿಯ ಸ್ನೇಹಿತೆ ಫರಾಹ್‌ ಸೇರಿದಂತೆ ತನ್ನ ಚಾರಿತ್ರ್ಯವನ್ನು ವಧೆ ಮಾಡುವ ಅಭಿಯಾನದ ಸಂಚನ್ನು ಹೊಸ ಸರ್ಕಾರ ನಡೆಸಲಿದೆ ಎಂದು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು