ಬುಧವಾರ, ಜುಲೈ 6, 2022
22 °C
ಪೀಯೂಷ್‌ ಜೈನ್‌ ನಂತರ ಸಮಾಜವಾದಿ ಪಕ್ಷದ ನಾಯಕನಿಗೆ ಶೋಧದ ಆಘಾತ

ಪುಷ್ಪರಾಜ್ ಜೈನ್‌ ಮನೆಯಲ್ಲಿ ಐಟಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ ಮತ್ತು ಸಮಾಜವಾದಿ ಪಕ್ಷದ ನಾಯಕ ಪುಷ್ಪರಾಜ್ ಜೈನ್‌ ಅವರ ನಿವಾಸ ಮತ್ತು ಕಚೇರಿ ಸೇರಿ 50 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯ ನಡೆಸಿದ್ದಾರೆ. ಈ ಶೋಧಕಾರ್ಯವೂ ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಇದೇ ವಾರದ ಆರಂಭದಲ್ಲಿ ಕಾನ್ಪುರದ ಮತ್ತೊಬ್ಬ ಸುಗಂಧ ದ್ರವ್ಯ ಉದ್ಯಮಿ ಪೀಯೂಷ್‌ ಜೈನ್‌ ಅವರ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಆಗ ಒಟ್ಟು ₹ 196 ಕೋಟಿ ನಗದು, 25 ಕೆ.ಜಿ. ಚಿನ್ನ ಮತ್ತು 250 ಕೆ.ಜಿ.ಯಷ್ಟು ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ‘ಪೀಯೂಷ್‌ ಜೈನ್ ಸಮಾಜವಾದಿ ಪಕ್ಷದ ನಾಯಕ’ ಎಂದು ಬಿಜೆಪಿ ಆರೋಪಿಸಿತ್ತು. ಅದನ್ನು ಸಮಾಜವಾದಿ ಪಕ್ಷವು ನಿರಾಕರಿಸಿತ್ತು.

‘ಸಮಾಜವಾದಿ ಪಕ್ಷದ ನಾಯಕ ಮತ್ತು ಉದ್ಯಮಿ ಪುಷ್ಪರಾಜ್ ಜೈನ್‌ ಮನೆಯ ಮೇಲೆ ದಾಳಿ ನಡೆಸಲು ಬಿಜೆಪಿ ಯೋಜಿಸಿತ್ತು. ಆದರೆ ತಪ್ಪು ಗ್ರಹಿಕೆಯಿಂದ ಬಿಜೆಪಿ ಬೆಂಬಲಿಗ ಉದ್ಯಮಿ ಪೀಯೂಷ್ ಜೈನ್‌ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದರು.

ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸುಗಂಧ ದ್ರವ್ಯ ಉದ್ಯಮಿ ಪುಷ್ಪರಾಜ್ ಜೈನ್‌ ಅವರ ಮನೆ ಮತ್ತು ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ಗುರುವಾರ ಬೆಳಿಗ್ಗೆಯಿಂದಲೇ ಶೋಧಕಾರ್ಯ ಆರಂಭವಾಗಿದೆ. ಆದರೆ ಶೋಧದ ವೇಳೆ ನಗದು, ಸ್ವತ್ತುಗಳ ದಾಖಲೆ, ಚಿನ್ನ ಮತ್ತಿತರ ಚರಾಸ್ತಿಗಳು ಪತ್ತೆಯಾದ ಬಗ್ಗೆ ಆದಾಯ ತೆರಿಗೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.

ಈ ದಾಳಿಯನ್ನು ಸಮಾಜವಾದಿ ಪಕ್ಷವು ಖಂಡಿಸಿದೆ. ‘ತನ್ನದೇ ನಾಯಕನನ್ನು ಬಂಧಿಸಿದ್ದ ಬಿಜೆಪಿಯು ಈಗ ತನ್ನ ಆಪ್ತ ಇಲಾಖೆ, ಆದಾಯ ತೆರಿಗೆ ಇಲಾಖೆಯನ್ನು ಬಳಸಿ ಕೊಂಡು ನಮ್ಮ ಪಕ್ಷದ ಪುಷ್ಪರಾಜ್ ಜೈನ್‌ ಅವರ ಮನೆಯಲ್ಲಿ ಶೋಧಕಾರ್ಯ ನಡೆಸಿದೆ. ಇದು ಕೇಂದ್ರದ ಸಂಸ್ಥೆಗಳ ದುರ್ಬಳಕೆ. ಇದೆಲ್ಲವನ್ನೂ ಜನರು ನೋಡು ತ್ತಿದ್ದಾರೆ. ಮತದಾನದ ಮೂಲಕ ಅವರು ಇದಕ್ಕೆ ತಕ್ಕುದಾದ ಉತ್ತರವನ್ನು ನೀಡಲಿದ್ದಾರೆ’ ಎಂದು ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅಲ್ಲಿ ಎಷ್ಟು ಎತ್ತರದ ಗೋಡೆಯಿತ್ತೋ, ಅಷ್ಟೇ ಎತ್ತರದವರೆಗೆ ಹಣವಿತ್ತು. ಅಲ್ಲಿ ಪತ್ತೆಯಾದದ್ದು ಬಿಜೆಪಿಯ ಹಣವಲ್ಲ. ಅದು ಬಿಜೆಪಿಯ ಹಣ ಎಂದು ಯಾರು ಹೇಳಿದರು. ಹಣ ಇಟ್ಟಿದ್ದವರ ಸ್ನೇಹಿತರಿಗೆ, ಅದು ಯಾರ ಹಣ ಎಂಬುದು ಗೊತ್ತಿರುತ್ತದೆ’ ಎಂದು ಅವರು ಹೇಳಿದ್ದಾರೆ.

ಮತ್ತೆ ಚುನಾವಣಾ ಬಾಂಡ್ ಮಾರಾಟ

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮೂಲಕ ನೀಡಲಾಗುವ ಚುನಾವಣಾ ಬಾಂಡ್‌ಗಳನ್ನು ಮತ್ತೆ ಮಾರಾಟ ಮಾಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

‘ಈ ವರ್ಷದಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಈ ಸಲುವಾಗಿ 19ನೇ ಕಂತಿನಲ್ಲಿ ಚುನಾವಣಾ ಬಾಂಡ್‌ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಜನವರಿ 1ರಿಂದ 10ರವರೆಗೆ ಎಸ್‌ಬಿಐನ 29 ಶಾಖೆಗಳಲ್ಲಿ ಬಾಂಡ್‌ಗಳ ಮಾರಾಟ ನಡೆಯಲಿದೆ’ ಎಂದು ಹಣಕಾಸು ಸಚಿವಾಲಯವು ಹೇಳಿದೆ.

ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಚುನಾವಣೆಗಳು ಘೋಷಣೆಯಾಗುವುದಕ್ಕೂ ಕೆಲವು ತಿಂಗಳು ಮೊದಲು ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಮಾರಾಟದ ಅವಧಿ ಮುಗಿದ ನಂತರದ 15 ದಿನಗಳ ಒಳಗೆ ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ನಗದೀಕರಿಸಿಕೊಳ್ಳಬೇಕು.

2018ರಲ್ಲಿ ಮೊದಲ ಬಾರಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿತ್ತು. ಬಾಂಡ್‌ ಮಾರಾಟದ ವೇಳೆ ದೇಣಿಗೆ ನೀಡಿದವರ ವಿವರವನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲ. ‘ಕಪ್ಪುಹಣವನ್ನು ಸಕ್ರಮ ಮಾಡಿಕೊಳ್ಳಲು ಚುನಾವಣಾ ಬಾಂಡ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿಯೇ ಇದರ ದೊಡ್ಡ ಫಲಾನುಭವಿ. ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿ’ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನುಡಿ–ಕಿಡಿ

ಪಂಜಾಬ್‌ನಲ್ಲಿ ಅತ್ಯಂತ ದುರ್ಬಲ ಸರ್ಕಾರವಿದೆ. ಆ ಸರ್ಕಾರದಲ್ಲಿ ಇರುವವರು ಮುಖ್ಯಮಂತ್ರಿ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ. ಆ ಸರ್ಕಾರವನ್ನು ಮನೆಗೆ ಕಳಹುಸಿ, ಪ್ರಾಮಾಣಿಕವಾದ ಸರ್ಕಾರವನ್ನು ತರಬೇಕು

ಅರವಿಂದ ಕೇಜ್ರಿವಾಲ್‌, ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ

ಹೊರಗಿನ ಪಕ್ಷಗಳು ಬಂದು ಇಲ್ಲಿ ಅಧಿಕಾರ ನಡೆಸಲು ಮತ್ತು ತಮ್ಮ ಸಿದ್ಧಾಂತಗಳನ್ನು ಪ್ರಯೋಗಿಸಲು ಗೋವಾದ ಜನರು ಅವಕಾಶ ನೀಡುವುದಿಲ್ಲ

ಪ್ರಮೋದ್ ಸಾವಂತ್, ಗೋವಾ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ

ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್‌ ಅವರು 25 ವರ್ಷಗಳ ಕಾಲ ಪಂಜಾಬ್‌ ಅನ್ನು ಲೂಟಿ ಮಾಡಿದರು. ಯುವಕರು ಇಲ್ಲಿ ಇರಲು ಇಷ್ಟಪಡದಂತಹ ಪರಿಸ್ಥಿತಿಗೆ ಈ ರಾಜ್ಯವನ್ನು ತಂದರು

ನವಜೋತ್‌ ಸಿಂಗ್‌ ಸಿಧು, ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು