ಅತ್ಯಾಚಾರವೆಸಗಿ ಬಲವಂತವಾಗಿ ವಿಷ ಕುಡಿಸಿದ ಆರೋಪಿ; ದಲಿತ ಬಾಲಕಿ ಸಾವು

ಸಹರಾನಪುರ: 16 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಲವಂತವಾಗಿ ವಿಷ ಕುಡಿಸಿದ ಪರಿಣಾಮ ಆಕೆ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಾಲಕಿ ಓದುತ್ತಿದ್ದ ಶಾಲೆಯಲ್ಲೇ ಓದುತ್ತಿದ್ದ ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ತರಗತಿಯಿಂದ ಕಾಣೆಯಾಗಿದ್ದ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಗ್ರಾಮದ ಹೊರವಲಯದ ಹೊಲದಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
'ಆರೋಪಿಯನ್ನು ಬಂಧಿಸಿದ್ದು, ಅತ್ಯಾಚಾರ, ಕೊಲೆ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಸಹರಾಪುರದ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಉಡುಗೊರೆಗಳನ್ನು ಖರೀದಿಸುವ ನೆಪದಲ್ಲಿ ಆರೋಪಿ ಆಕೆಯನ್ನು ಶಾಲೆಯಿಂದ ಹೊರಗೆ ಕರೆದೊಯ್ದಿದ್ದಾನೆ ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಪರೀಕ್ಷೆ ಇರುವ ಕಾರಣ ಬಾಲಕಿ ಶಾಲೆಗೆ ಹೋಗಿದ್ದಳು. ಆಕೆ ತರಗತಿಯಲ್ಲಿರಲಿಲ್ಲ, ಆದರೆ ಅವಳ ಬ್ಯಾಗ್ ಡೆಸ್ಕ್ ಮೇಲಿರುವುದನ್ನು ಗಮನಿಸಿ ಶಿಕ್ಷಕಿಯೊಬ್ಬರು ಆಕೆಯ ಪೋಷಕರಿಗೆ ವಿಷಯ ತಿಳಿಸಿದ್ದರು.
ಆತಂಕಗೊಂಡಿದ್ದ ನಾವು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆವು. ನಂತರ ಆಕೆಯನ್ನು ಹುಡುಕಲು ಪ್ರಾರಂಭಿಸಿದಾಗ ಶಾಲೆಯ ಸಮೀಪವಿರುವ ಹೊಲದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಪತ್ತೆಯಾಯಿತು. ಏನಾಯಿತೆಂದು ಆಕೆಯನ್ನು ಕೇಳಿದಾಗ, ತನ್ನ ಶಾಲೆಯ ಹಿರಿಯ ವಿದ್ಯಾರ್ಥಿ ಆಕೆಯನ್ನು ಹೋಟೆಲ್ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಮತ್ತು ವಿಷ ಸೇವಿಸುವಂತೆ ಒತ್ತಾಯಿಸಿದ್ದ ಎಂದು ತಿಳಿಸಿದ್ದಾಗಿ ಬಾಲಕಿಯ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಾಲಕಿಯ ಸೋದರ ಸಂಬಂಧಿ ಕರೆ ಮಾಡಿದಾಗ ಆರೋಪಿ ಅವರನ್ನು ನಿಂದಿಸಿ ಬಾಲಕಿಯನ್ನು ಹೊಲದಲ್ಲಿ ಎಸೆದಿದ್ದು, ‘ಅಲ್ಲಿಂದ ಕರೆದುಕೊಂಡು ಹೋಗು’ ಎಂದು ಹೇಳಿದ್ದಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.