ಬುಧವಾರ, ಅಕ್ಟೋಬರ್ 21, 2020
25 °C

ಮಗುವಿನ ಜನ್ಮ ನೀಡಿ 14 ದಿನಗಳಲ್ಲೇ ಕರ್ತವ್ಯಕ್ಕೆ ಹಾಜರಾದ ಕೋವಿಡ್ ನೋಡಲ್ ಅಧಿಕಾರಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋವಿಡ್ ನೋಡಲ್ ಅಧಿಕಾರಿಯಾಗಿದ್ದ ಸೌಮ್ಯ ಪಾಂಡೆ

ಗಾಜಿಯಾಬಾದ್‌ (ಉತ್ತರ ಪ್ರದೇಶ): ಗಾಜಿಯಾಬಾದ್‌ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದ ಸೌಮ್ಯ ಪಾಂಡೆ ಅವರು ಮಗುವಿಗೆ ಜನ್ಮ ನೀಡಿ ಕೇವಲ ಎರಡೇ ವಾರಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇಲ್ಲಿನ ಮೋದಿನಗರದ ಸಬ್‌ –ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಆಗಿರುವ ಸೌಮ್ಯ ಅವರು ಜುಲೈನಿಂದ ಕೋವಿಡ್‌ ಕಾರ್ಯಗಳಲ್ಲಿ ತೊಡಗಿದ್ದರು. ಪ್ರಸವ ನಂತರ 14 ದಿನಗಳಲ್ಲೇ ತಮ್ಮ ಹೆಣ್ಣು ಮಗುವಿನ ಜೊತೆಗೆ ಕರ್ತವ್ಯಕ್ಕೆ ಹಾಜರಾಗಿರುವುದು ಗಮನ ಸೆಳೆದಿದೆ. ಅವರ ಕರ್ತವ್ಯ ಬದ್ಧತೆ ಮತ್ತು ಕಾಳಜಿಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎನ್‌ಎನ್‌ಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಸೌಮ್ಯ, 'ನಾನು ಐಎಎಸ್‌ ಅಧಿಕಾರಿ, ಹಾಗಾಗಿ ನಾನು ನನ್ನ ಸೇವೆಯ ಕಡೆಗೆ ಗಮನ ನೀಡಲೇಬೇಕಿದೆ. ಕೋವಿಡ್‌–19ನಿಂದಾಗಿ ಎಲ್ಲರ ಮೇಲೆಯೂ ಹೆಚ್ಚಿನ ಹೊಣೆಗಾರಿಕೆ ಇದೆ. ಮಗುವಿಗೆ ಜನ್ಮ ನೀಡುವ ಹಾಗೂ ಆರೈಕೆ ಮಾಡುವ ಸಾಮರ್ಥ್ಯವನ್ನು ದೇವರು ಮಹಿಳೆಗೆ ನೀಡಿದ್ದಾರೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯು ಪ್ರಸವಕ್ಕೂ ಮುಂಚೆ ಜೀವನೋಪಾಯದ ಕೆಲಸಗಳು ಹಾಗೂ ಮನೆಯ ನಿರ್ವಹಣೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾಳೆ ಹಾಗೂ ಪ್ರಸವದ ಬಳಿಕ, ಮಗುವಿನ ಆರೈಕೆ ಜೊತೆಗೆ ಮನೆ ಮತ್ತು ಇತರೆ ಕೆಲಸಗಳನ್ನು ನಿರ್ವಹಿಸುತ್ತಾಳೆ. ಹಾಗೆಯೇ, ದೇವರ ಆಶೀರ್ವಾದದೊಂದಿಗೆ ನಾನೂ ಸಹ ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಹಾಗೂ ನನ್ನ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದೇನೆ' ಎಂದು ಅನುಭವ ಹಂಚಿಕೊಂಡಿದ್ದಾರೆ.

'ನನ್ನ ಕುಟುಂಬ ನನಗೆ ಸಾಕಷ್ಟು ಬೆಂಬಲ ನೀಡಿದೆ. ನಾನು ಕರ್ತವ್ಯ ನಿರ್ವಹಿಸುತ್ತಿರುವ ಮಂಡಲ ಮತ್ತು ಗಾಜಿಯಾಬಾದ್‌ ಜಿಲ್ಲಾಡಳಿತ ನನಗೆ ಕುಟುಂಬವಿದ್ದಂತೆ, ನಾನು ಗರ್ಭಿಣಿಯಾಗಿದ್ದಾಗ ಹಾಗೂ ಪ್ರಸವದ ಬಳಿಕವೂ ಎಲ್ಲರೂ ಅಪಾರ ಬೆಂಬಲ ನೀಡಿದ್ದಾರೆ' ಎಂದರು.

'ಜುಲೈನಿಂದ ಸೆಪ್ಟೆಂಬರ್‌ ವರೆಗೂ ಗಾಜಿಯಾಬಾದ್‌ನ ಕೋವಿಡ್‌ ನೋಡಲ್‌ ಅಧಿಕಾರಿಯಾಗಿದ್ದೆ. ಸೆಪ್ಟೆಂಬರ್‌ನಲ್ಲಿ ನಾನು 22 ದಿನಗಳ ರಜೆ ತೆಗೆದುಕೊಂಡೆ. ಪ್ರಸವದ ನಂತರ ಎರಡು ವಾರಗಳಲ್ಲಿ ನಾನು ಎಂದಿನ ಕರ್ತವ್ಯಗಳಿಗೆ ಹಾಜರಾಗಿರುವೆ. ಕೋವಿಡ್‌–19 ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಗರ್ಭಿಣಿಯೂ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು' ಎಂದು ಅಧಿಕಾರಿ ಸೌಮ್ಯ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು