ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್ ದುಬೆ ಎನ್‌ಕೌಂಟರ್‌: ಉತ್ತರ ಪ್ರದೇಶ ಪೊಲೀಸರಿಗೆ ತನಿಖಾ ಆಯೋಗ ಕ್ಲೀನ್ ಚಿಟ್

ವಿಧಾನಸಭೆಯಲ್ಲಿ ವಿಚಾರಣಾ ಆಯೋಗದ ವರದಿ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ ಖನ್ನಾ,
Last Updated 20 ಆಗಸ್ಟ್ 2021, 11:08 IST
ಅಕ್ಷರ ಗಾತ್ರ

ಲಖನೌ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಪಾತಕಿ ವಿಕಾಸ್‌ ದುಬೆ ಪೊಲೀಸ್ ಎನ್‌ಕೌಂಟರ್‌ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಕಾರಣ, ಪ್ರಕರಣದ ತನಿಖೆ ನಡೆಸುತ್ತಿರುವ ತ್ರಿಸದಸ್ಯರ ತನಿಖಾ ಆಯೋಗ, ಉತ್ತರ ಪ್ರದೇಶದ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.

ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಗಳು ವಿಕಾಸ್‌ ದುಬೆಯ ವಿರುದ್ಧ ನಡೆದ ಎನ್‌ಕೌಂಟರ್‌ ಅನ್ನು ಬೆಂಬಲಿಸುತ್ತಿವೆಯೇ ಹೊರತು, ವಿರೋಧಿಸುತ್ತಿಲ್ಲ. ಹಾಗಾಗಿ ಪ್ರಕರಣದ ಆರೋಪದಿಂದ ಪೊಲೀಸರನ್ನು ಖುಲಾಸೆಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ.

‘ಇದನ್ನು ನಕಲಿ ಎನ್‌ಕೌಂಟರ್‌‘ ಎಂಬ ಆರೋಪಗಳು ಕೇಳಿಬಂದ ನಂತರ, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್, ಎಸ್. ಕೆ. ಅಗರವಾಲ್‌ ಮತ್ತು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಕೆ.ಎಲ್ ಗುಪ್ತಾ ಅವರನ್ನೊಳಗೊಂಡ ತ್ರಿಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು.

ಪ್ರಕರಣದ ತನಿಖೆ ನಡೆಸಿದ ಆಯೋಗ ಏಪ್ರಿಲ್ 21ರಂದು 824 ಪುಟಗಳ ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿತ್ತು.ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ ಖನ್ನಾ, ತನಿಖಾ ನಿಯೋಗದ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಘಟನೆಯ ಹಿನ್ನೆಲೆ:ಕಳೆದ ವರ್ಷದ ಜುಲೈ 2 ಮತ್ತು 3ರ ನಡು ರಾತ್ರಿ ಕಾನ್ಪುರ ಜಿಲ್ಲೆಯ ಬಿಕ್ರು ಹಳ್ಳಿಯಲ್ಲಿರುವ ದುಬೆ ಅವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ದಾಳಿಯಲ್ಲಿ ಡಿಎಸ್‌ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೆಯನ್ನು ಬಂಧಿಸಿ, ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ, ಆ ವಾಹನ ಅಪಘಾತಕ್ಕೀಡಾಯಿತು. ಇದೇ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಎನ್‌ಕೌಂಟರ್‌ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ತನಿಖೆ ನಡೆಸಿದ ವಿಚಾರಣಾ ಆಯೋಗ,‌ ‘ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಪೊಲೀಸರು ರೂಪಿಸಿದ್ದ ಕಳಪೆ ಯೋಜನೆಯಿಂದಾಗಿ, ಈ ಎನ್‌ಕೌಂಟರ್‌ನಲ್ಲಿ ಎಂಟು ಮಂದಿ ಪೊಲೀಸರು ಕೊಲೆಯಾದರು. ಇದು ಸ್ಥಳೀಯ ಗುಪ್ತಚರ ಇಲಾಖೆಯ ಸೋಲು ಎಂದು ಹೇಳಿದೆ.

‘ದುಬೆ ಎನ್‌ಕೌಂಟರ್ ಪ್ರಕರಣದ ಎಲ್ಲ ಸಾಕ್ಷ್ಯಗಳು ಪೋಲೀಸರು ಹೇಳಿಕೆಯನ್ನೇ ಬೆಂಬಲಿಸುತ್ತವೆ. ಈ ಘಟನೆಯಲ್ಲಿ ಪೋಲಿಸರಿಗೆ ಆಗಿರುವ ಗಾಯಗಳು, ಅವರೇ ಮಾಡಿಕೊಂಡಿರಲು ಸಾಧ್ಯವಿಲ್ಲ. ಪೊಲೀಸರು ನೀಡಿರುವ ಹೇಳಿಕೆಯಿಂದ ಪಾತಕಿ ದುಬೆ ಮೈಮೇಲಾಗಿರುವ ಗಾಯಗಳು ಪೊಲೀಸರು ಹೇಳಿಕೆಯನ್ನು ಬೆಂಬಲಿಸುತ್ತಿವೆ‘ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯ ಡಾ. ಆರ್ ಎಸ್ ಮಿಶ್ರಾ ಹೇಳಿದ್ದಾರೆ.

‘ಎನ್‌ಕೌಂಟರ್ ಕುರಿತು ಪೋಲಿಸ್ ನೀಡಿರುವ ಹೇಳಿಕೆಯನ್ನು ಚರ್ಚಿಸುವುದಕ್ಕೆ ಸಾರ್ವಜನಿಕರಾಗಲಿ ಮತ್ತು ಮಾಧ್ಯಮಗಳಾಗಲಿ ಯಾರೂ ಮುಂದೆ ಬರಲಿಲ್ಲ. ಈ ಘಟನೆಯನ್ನು ನಿರಾಕರಿಸುವಂತಹ ಯಾವ ಪುರಾವೆಗಳ ಸಲ್ಲಿಕೆಯಾಗಿಲ್ಲ. ವಿಕಾಸ್ ದುಬೆ ಪತ್ನಿ ರಿಚಾ ದುಬೆ ಈ ಘಟನೆಯನ್ನು ನಕಲಿ ಎನ್‌ಕೌಂಟರ್‌ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರೂ, ಅವರು ಆಯೋಗದ ಮುಂದೆ ಹಾಜರಾಗಲಿಲ್ಲ. ಇಂತಹ ಸಂದರ್ಭದಲ್ಲಿ, ಎನ್‌ಕೌಂಟರ್ ಕುರಿತು ಪೋಲಿಸ್ ಹೇಳಿಕೆ ಬಗ್ಗೆ ಯಾವುದೇ ಶಂಕೆ ಹುಟ್ಟುವುದಿಲ್ಲ‘ ಎಂದು ತನಿಖಾ ಆಯೋಗ ತಿಳಿಸಿದೆ.

ಕಾನ್ಪುರ ನಗರದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಅವರು ನಡೆಸಿದ ಮ್ಯಾಜಿಸ್ಟ್ರೀರಿಯಲ್ ವಿಚಾರಣೆಯಲ್ಲೂ ಇದೇ ರೀತಿಯ ಮಾಹಿತಿ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT