ಮಂಗಳವಾರ, ಜನವರಿ 19, 2021
26 °C
ಕೋವಿಡ್‌: 13 ನಗರಗಳಿಗೆ 56.5 ಲಕ್ಷ ಡೋಸ್‌ ಸಾಗಣೆ

ಪುಣೆಯಿಂದ ಹೊರಟ ‘ಕೋವಿಶೀಲ್ಡ್‌’ ಲಸಿಕೆ ಹೊತ್ತ ಎರಡು ವಿಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೋವಿಡ್‌–19 ಲಸಿಕೆ ನೀಡುವ ಬೃಹತ್‌ ಕಾರ್ಯಕ್ರಮಕ್ಕೆ ನಾಲ್ಕು ದಿನಗಳು ಬಾಕಿ ಇದ್ದು, ‘ಕೋವಿಶೀಲ್ಡ್‌’ ಲಸಿಕೆಯ ಲಕ್ಷಾಂತರ ಡೋಸ್‌ಗಳನ್ನು ಹೊತ್ತ ಎರಡು ವಿಮಾನಗಳು ಪುಣೆಯಿಂದ ದೆಹಲಿಗೆ ಮಂಗಳವಾರ ಪ್ರಯಾಣ ಬೆಳೆಸಿದವು.

‘ನಾಲ್ಕು ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಒಟ್ಟು 9 ವಿಮಾನಗಳು ಪುಣೆಯಿಂದ 13 ನಗರಗಳಿಗೆ 56.5 ಲಕ್ಷ ಡೋಸ್‌ ಲಸಿಕೆಯನ್ನು ಸಾಗಣೆ ಮಾಡಲಿವೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಟ್ವೀಟ್‌ ಮಾಡಿದ್ದಾರೆ.

ಸ್ಪೈಸ್‌ಜೆಟ್‌ ಹಾಗೂ ಗೋಏರ್‌ನ ತಲಾ ಒಂದು ವಿಮಾನ ಕ್ರಮವಾಗಿ ದೆಹಲಿ ಹಾಗೂ ಚೆನ್ನೈನತ್ತ ಲಸಿಕೆ ಹೊತ್ತು ಸಾಗಿದವು, ಉಳಿದ ವಿಮಾನಗಳು ಸಹ ಶೀಘ್ರವೇ ಪ್ರಯಾಣ ಬೆಳೆಸಲಿವೆ ಎಂದೂ ತಿಳಿಸಿದ್ದಾರೆ.

ಪುಣೆ ವಿಮಾನನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿರುವ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದಿಂದ (ಎಸ್‌ಐಐ) ಮೂರು ಟ್ರಕ್‌ಗಳು ’ಕೋವಿಶೀಲ್ಡ್‌’ ಲಸಿಕೆಯನ್ನು ಹೊತ್ತು ಸಾಗಿದವು. ಈ ಸರಕನ್ನು ಹೊತ್ತ ಸ್ಪೈಸ್‌ಜೆಟ್‌ನ ವಿಮಾನ ಬೆಳಿಗ್ಗೆ 8ಕ್ಕೆ ದೆಹಲಿಯತ್ತ ಹಾರಿತು.

ತಾಪಮಾನವನ್ನು ನಿಯಂತ್ರಿಸುವ ವ್ಯವಸ್ಥೆ ಇರುವ ಟ್ರಕ್‌ಗಳಲ್ಲಿ, ಲಸಿಕೆ ಇರುವ ಒಟ್ಟು 478 ಪೆಟ್ಟಿಗೆಗಳನ್ನು ಸಾಗಿಸಲಾಗಿತು. ಪ್ರತಿ ಪೆಟ್ಟಿಗೆ ತೂಕ 32 ಕೆ.ಜಿ. ಇದೆ. ಈ ಟ್ರಕ್‌ಗಳು ಎಸ್‌ಐಐ ಆವರಣ ಬಿಡುವ ಮುನ್ನ ವಿಧಿವತ್ತಾಗಿ ಅವುಗಳಿಗೆ ಪೂಜೆ ನೆರವೇರಿಸಲಾಯಿತು.

ಮುಂಬೈಗೆ ರಸ್ತೆ ಮಾರ್ಗ ಮೂಲಕವೇ ಲಸಿಕೆಯನ್ನು ಸಾಗಿಸಲಾಗುತ್ತಿದೆ. ‘ಕೂಲ್‌–ಎಕ್ಸ್‌ ಕೋಲ್ಡ್‌ ಚೈನ್‌ ಲಿ.’ ಎಂಬ ಸಂಸ್ಥೆ ಲಸಿಕೆಯನ್ನು ಸಾಗಿಸುವುದು ಎಂದು ಮೂಲಗಳು ಹೇಳಿವೆ.

‘ಏರ್‌ಇಂಡಿಯಾ, ಸ್ಪೈಸ್‌ಜೆಟ್‌, ಗೋಏರ್‌ ಹಾಗೂ ಇಂಡಿಗೊ ಸಂಸ್ಥೆಗಳಿಗೆ ಸೇರಿದ ವಿಮಾನಗಳು ದೆಹಲಿ, ಚೆನ್ನೈ, ಕೋಲ್ಕತ್ತ, ಗುವಾಹಟಿ, ಶಿಲ್ಲಾಂಗ್‌, ಅಹಮದಾಬಾದ್‌, ಹೈದರಾಬಾದ್‌, ವಿಜಯವಾಡ, ಭುವನೇಶ್ವರ, ಪಟ್ನಾ, ಬೆಂಗಳೂರು, ಲಖನೌ ಹಾಗೂ ಚಂಡೀಗಡಗಳಿಗೆ ಲಸಿಕೆಯನ್ನು ಹೊತ್ತೊಯ್ಯಲಿವೆ’ ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು