ಸೋಮವಾರ, ಅಕ್ಟೋಬರ್ 18, 2021
25 °C
ವಿಶ್ವಭಾರತಿ ವಿ.ವಿ ಕುಲಪತಿ ಬೋಧಕರನ್ನು ನಿಂದಿಸಿದ್ದರು ಎನ್ನಲಾದ ವಿಡಿಯೊ ವೈರಲ್

ಕೋಲ್ಕತ್ತ: ವಿ.ವಿಯಲ್ಲಿ ಕಳ್ಳತನ ಆರೋಪ- ವಿವಾದ ಸೃಷ್ಟಿಸಿದ ವಿಡಿಯೊ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ನಡೆಯುತ್ತಿರುವ ಕಳ್ಳತನ ಘಟನೆಗಳನ್ನು ತಡೆಗಟ್ಟಲು ಪ್ರಯತ್ತಿಸುತ್ತಿಲ್ಲ ಎಂದು ವಿಶ್ವಭಾರತಿ ವಿ.ವಿ ಯ ಕುಲಪತಿ ವಿದ್ಯುತ್ ಚಕ್ರವರ್ತಿ ಅವರು ಬೋಧಕರನ್ನು ನಿಂದಿಸಿದ್ದು ಎನ್ನಲಾದ ದೃಶ್ಯಗಳಿರುವ ವಿಡಿಯೊ ವೈರಲ್‌ ಆಗಿದೆ.

ಈ ವಿಷಯವೀಗ ವಿವಾದಕ್ಕೆ ಕಾರಣವಾಗಿದೆ. ‘ಈ ವಿಡಿಯೊದ ಅಧಿಕೃತತೆ ಬಗ್ಗೆ ಸಂಸ್ಥೆ ಪರಿಶೀಲನೆ ನಡೆಸಿಲ್ಲ. ವರದಿ ಸಿದ್ಧಪಡಿಸುವವರೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ’ ಎಂದು ಈ ಕುರಿತು ವರದಿ ಮಾಡಿರುವ ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ.

ವಿಶ್ವವಿದ್ಯಾಲಯದ ಸಿಬ್ಬಂದಿ ಜೊತೆ ಕುಲಪತಿ ಚಕ್ರವರ್ತಿ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ್ದರು. ಕಳ್ಳತನ ತಡೆಗಟ್ಟುವ ಸಂಬಂಧ ಬೋಧಕರನ್ನು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೊದಲ್ಲಿದೆ. ವಿಡಿಯೊದಲ್ಲಿರುವ ಧ್ವನಿ ಕುಲಪತಿ ಚಕ್ರವರ್ತಿ ಅವರ ಧ್ವನಿಯನ್ನೇ ಹೋಲುತ್ತಿದೆ.

‘ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕಳ್ಳತನ ಘಟನೆಗಳನ್ನು ತಡೆಯಲು ನೀವು ಪ್ರಯತ್ನಿಸುತ್ತಿಲ್ಲ. ನಿಮ್ಮ ಜವಾಬ್ದಾರಿಯನ್ನು ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಹಾಕುತ್ತಿದ್ದೀರಿ. ಬಿರ್‌ಭೂಮ್‌ ಜಿಲ್ಲೆಯ ‘ಬಾಹುಬಲಿ’ಯ ಹಿಂಬಾಲಕರಿಗೆ ಹೆದರಿ ಭದ್ರತಾ ಸಿಬ್ಬಂದಿ ಸಹ ಯಾವುದೇ ದೂರು ದಾಖಲಿಸುತ್ತಿಲ್ಲ’ ಎಂಬ ಮಾತುಗಳು ಈ ವಿಡಿಯೊದಲ್ಲಿವೆ.

‘ಬಾಹುಬಲಿಯಿಂದಾಗಿ ವಿಶ್ವವಿದ್ಯಾಲಯವು ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಕುಲಪತಿಯೇ ಕ್ರಮ ಕೈಗೊಳ್ಳುವಂತಹ ಹಂತ ತಲುಪಲು ಈ ವಿಷಯವನ್ನು ಬೆಳೆಯಲು ಏಕೆ ಬಿಟ್ಟಿದ್ದೀರಿ’ ಎಂದು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿದೆ.

ಟಿಎಂಸಿಯ ಬಿರ್‌ಭೂಮ್‌ ಜಿಲ್ಲಾ ಘಟಕದ ಅಧ್ಯಕ್ಷ ಅನುವ್ರತ ಮಂಡಲ್‌ ಈ ವಿಷಯ ಕುರಿತು ಪ್ರತಿಕ್ರಿಯಿಸಿ, ‘ಕುಲಪತಿ ಚಕ್ರವರ್ತಿಗೆ ಧೈರ್ಯ ಇದ್ದರೆ, ಬಾಹುಬಲಿ ಯಾರು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಹೇಳಿದ್ದಾರೆ.

ಅನುಚಿತ ವರ್ತನೆ ಆರೋಪದ ಮೇಲೆ ಇತ್ತೀಚೆಗೆ ಮೂವರು ವಿದ್ಯಾರ್ಥಿಗಳನ್ನು ಹೊರ ಹಾಕಿದ್ದಕ್ಕಾಗಿ ವಿಶ್ವವಿದ್ಯಾಲಯ ಸುದ್ದಿ ಮಾಡಿತ್ತು. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿತ್ತಲ್ಲದೇ, ವಿದ್ಯಾರ್ಥಿಗಳು ಕುಲಪತಿ ನಿವಾಸದ ಮುಂದೆ ಧರಣಿ ನಡೆಸಿದ್ದರು.

ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಕಲ್ಕತ್ತ ಹೈಕೋರ್ಟ್‌ ಸೆ. 8ರಂದು ಆದೇಶಿಸಿದ ನಂತರ ಪರಿಸ್ಥಿತಿ ತಿಳಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು