ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Goa Poll: ನಿಮ್ಮ ಒಳಿತಿಗೆ ಎಎಪಿಗೆ ಮತ ಕೊಡಿ: ಬೆಂಬಲಿಗರಿಗೆ ಕೇಜ್ರಿವಾಲ್‌ ಕರೆ

ಬಿಜೆಪಿ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು,
Last Updated 3 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ತಮ್ಮ ಭವಿಷ್ಯ ಮತ್ತು ರಾಜ್ಯದ ಒಳಿತಿಗಾಗಿ ಎಎಪಿಗೆ ಮತ ನೀಡುವಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

‘ಪಕ್ಷವನ್ನು ಬದಲಿಸದೆಯೇ ಅವರೆಲ್ಲರೂ ಎಎಪಿಗೆ ಮತ ಹಾಕಬಹುದು. ಬೇರೆ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಎಎಪಿಗೆ ಸೇರುವ ಅಗತ್ಯ ಇಲ್ಲ. ಆಯಾ ಪಕ್ಷದಲ್ಲಿ ಇದ್ದುಕೊಂಡೇ ನಿಮ್ಮ ಮತ್ತು ನಿಮ್ಮ ರಾಜ್ಯದ ಒಳಿತಿಗಾಗಿ ಎಎಪಿಗೆ ಮತ ಹಾಕಿ. ಕಳೆದ 15 ವರ್ಷಗಳಿಂದ ಗೋವಾದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಆ ಪಕ್ಷವು ಗೋವಾಕ್ಕೆ ಏನನ್ನೂ ಮಾಡಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಈ ಬಾರಿ ಎಎಪಿಗೆ ಮತ ಹಾಕಿ. ರಾಜ್ಯದಲ್ಲಿ ಬದಲಾವಣೆ ನಿಮಗೆ ಕಾಣಿಸಲಿದೆ ಎಂದು ಕೇಜ್ರಿವಾರ್‌ ಭರವಸೆ ಕೊಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷವು ಹಲವು ವರ್ಷ ಗೋವಾದಲ್ಲಿ ಅಧಿಕಾರದಲ್ಲಿ ಇತ್ತು. ಆದರೆ, ಈ ಪಕ್ಷವು ಈಗ ಬಿಜೆಪಿಗೆ ಕಾರ್ಯಕರ್ತರನ್ನು ನೇಮಿಸಿಕೊಡುವ ಕೆಲಸವನ್ನಷ್ಟೇ ಮಾಡುತ್ತಿದೆ. ಗೋವಾಕ್ಕಾಗಿ ಕಾಂಗ್ರೆಸ್‌ ಪಕ್ಷದ ಬಳಿ ಯಾವ ಕಾರ್ಯಸೂಚಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೆ ಸುಮಾರು ₹10 ಲಕ್ಷ ಮೌಲ್ಯದ ಆರ್ಥಿಕ ಪ್ರಯೋಜನ ದೊರಕಲಿದೆ ಎಂದು ಕೇಜ್ರಿವಾಲ್‌ ಭರವಸೆ ಕೊಟ್ಟಿದ್ದಾರೆ.

‘ಎಎಪಿಗೆ ಅಧಿಕಾರ ಜನರ ಬಯಕೆ’

ಧುರಿ (ಪಂಜಾಬ್‌) (ಪಿಟಿಐ): 44 ವರ್ಷಗಳಲ್ಲಿ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿ ದಳಕ್ಕೆ (ಎಸ್‌ಎಡಿ) ಅವಕಾಶ ಕೊಟ್ಟು ಪಂಜಾಬ್‌ನ ಜನರು ದಣಿದಿದ್ದಾರೆ. ಈಗ ಎಎಪಿಗೆ ಅವಕಾಶ ಕೊಡಲು ಜನರು ಬಯಸಿದ್ದಾರೆ ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್‌ ಗುರುವಾರ ಹೇಳಿದ್ದಾರೆ.

ಮಾಫಿಯಾ, ನಿರುದ್ಯೋಗ, ಹಣದುಬ್ಬರ, ಡ್ರಗ್ಸ್‌ ಸಮಸ್ಯೆ ಮತ್ತು ಕೃಷಿ ಬಿಕ್ಕಟ್ಟು ಪಂಜಾಬ್‌ ಎದುರಿಸುತ್ತಿರುವ ಕೆಲವು ಸಮಸ್ಯೆಗಳಾಗಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಎಎಪಿ ಪ್ರಯತ್ನಿಸಲಿದೆ ಎಂದು ಧುರಿ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಮಾನ್‌ ಹೇಳಿದ್ದಾರೆ. ಮಾನ್‌ ಅವರು ಸಂಗ್ರೂರು ಲೋಕಸಭಾ ಕ್ಷೇತ್ರದ ಸಂಸದ. ಧುರಿ ಕ್ಷೇತ್ರವು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ. ರಾಜಕಾರಣಕ್ಕೆ ಬರುವ ಮೊದಲು ಕಾಮಿಡಿಯನ್‌ ಆಗಿದ್ದ ಮಾನ್‌ ಅವರು ತಮ್ಮ ವಿಶಿಷ್ಟ ಮಾತುಗಾರಿಕೆಯ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ.ಕಾಂಗ್ರೆಸ್‌ ಪಕ್ಷಕ್ಕೆ ಕನಿಷ್ಠ 25 ವರ್ಷ, ಎಸ್‌ಎಡಿಯ ಬಾದಲ್‌ ಕುಟುಂಬಕ್ಕೆ 19 ವರ್ಷ ಜನರು ಅವಕಾಶ ಕೊಟ್ಟಿದ್ದಾರೆ. ಈ 44 ವರ್ಷಗಳಲ್ಲಿ ಈ ಪಕ್ಷಗಳು ರಾಜ್ಯಕ್ಕಾಗಿ ಏನನ್ನೂ ಮಾಡಿಲ್ಲ. ಮತ್ತೊಂದು ಅವಕಾಶಕ್ಕಾಗಿ ಈ ಪಕ್ಷಗಳು ಕಾದಿವೆ. ಆದರೆ, ಜನರು ದಣಿದಿದ್ದಾರೆ ಎಂದು ಮಾನ್‌ ಹೇಳಿದ್ದಾರೆ.

ಬಿಜೆಪಿಯ ಗೆಲುವಿಗೆ ಎಎಪಿ ಶ್ರಮ: ಸುರ್ಜೇವಾಲಾ

ಬಿಜೆಪಿಯ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿಯೇ ಅರವಿಂದ ಕೇಜ್ರಿವಾಲ್‌ ಅವರು ಗೋವಾಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ. ಕೇಜ್ರಿವಾಲ್‌ ಅವರನ್ನು ‘ಛೋಟಾ ಮೋದಿ’ ಎಂದು ಸುರ್ಜೇವಾಲಾ ಬಣ್ಣಿಸಿದ್ದಾರೆ. ಕೇಜ್ರಿವಾಲ್‌ ಅವರನ್ನು ವಂಚಕ ಎಂದೂ ಅವರು ಕರೆದಿದ್ದಾರೆ.

‘ಕೇಜ್ರಿವಾಲ್ ಅವರು ಲೋಕಾಯುತ್ತ ಮತ್ತು ಲೋಕಪಾಲ್‌ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದರು. ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿಕೊಂಡು ಅವರು ಅಧಿಕಾರಕ್ಕೆ ಬಂದರು. ಲೋಕಪಾಲ್‌ ಎಲ್ಲಿದೆ? ಅದು ಎಲ್ಲಿಗೆ ಹೋಯಿತು? ಕೇಜ್ರಿವಾಲ್‌ ಅವರು ಈಗ ಲೋಕಪಾಲ್‌ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ಕೇಜ್ರಿವಾಲ್‌ ಆರ್‌ಎಸ್‌ಎಸ್‌ ಅಥವಾ ಬಿಜೆಪಿಯ ಸಿದ್ಧಾಂತವನ್ನೇ ಪ್ರತಿನಿಧಿಸುತ್ತಾರೆ. ಬಿಜೆಪಿಗೆ ನೆರವಾಗುವುದಕ್ಕಾಗಿಯೇ ಗೋವಾ ಮತ್ತು ಉತ್ತರಾಖಂಡದಲ್ಲಿ ಎಎಪಿ ಸ್ಪರ್ಧಿಸಿದೆ ಎಂದು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT