ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಸಮೀಪವೂ ವಾಘಾ ಗಡಿ ರೀತಿಯ ಕವಾಯತು ಆರಂಭ

Last Updated 3 ಅಕ್ಟೋಬರ್ 2021, 6:54 IST
ಅಕ್ಷರ ಗಾತ್ರ

ಅಕ್ಟೆರಿಯೊ ಗಡಿ (ಆರ್‌.ಎಸ್‌.ಪುರ): ಜಮ್ಮುವಿನಿಂದ 35 ಕಿ.ಮೀ.ದೂರದ ಆರ್‌.ಎಸ್‌.ಪುರದ ಅಕ್ಟೇರಿಯೊ ಗಡಿ ಭಾಗದಲ್ಲಿ ಪಂಜಾಬ್‌ನ ವಾಘಾದ ಗಡಿಯಲ್ಲಿ ನಡೆಯುತ್ತಿರುವಂತಹ ಕವಾಯತು ಪ್ರದರ್ಶನ ಗಾಂಧಿ ಜಯಂತಿ ದಿನವಾದ ಶನಿವಾರದಿಂದ ಆರಂಭವಾಗಿದೆ.‌

ಸುಚೇತ್‌ಗಡ ಗ್ರಾಮದ ಸಮೀಪವಿರುವ ಈ ಗಡಿ ಭಾಗದಲ್ಲಿ ಬಿಎಸ್‌ಎಫ್‌ ಯೋಧರು ಧ್ವಜಾವರೋಹಣ ನಡೆಸಿ ಕವಾಯತು ನಡಸಿದಾಗ (ಬೀಟ್‌ ದಿ ರಿಟ್ರೀಟ್‌) ನೂರಾರು ಜನರು ಪುಳಕಿತರಾದರು. ವಾಘಾ ಗಡಿಯಲ್ಲಿ ನಡೆಯುವ ರೀತಿಯಲ್ಲೇ ಇಲ್ಲೂ ಕವಾಯತು ನಡೆಯಿತು.

ಸ್ಥಳೀಯ ನಿವಾಸಿಗಳಿಗೆ ಇದೊಂದು ವಿಶಿಷ್ಟ ಅನುಭವವಾಗಿದ್ದರೆ, ಮುಂದಿನ ದಿನಗಳಲ್ಲಿ ವಾಘಾ ಗಡಿಯಂತೆಯೇ ಅಕ್ಟೇರಿಯೊ ಸಹ ಜನಪ್ರಿಯೆ ಪ್ರವಾಸಿ ತಾಣವಾಗುವುದು ನಿಶ್ಚಿತ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

‘ಇದೊಂದು ಐತಿಹಾಸಿಕ ದಿನ. ಸಚೇತಗಡ ಜಮ್ಮು–ಕಾಶ್ಮೀರದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿ ಒಂದು ಪ್ರಮುಖ ಪ್ರವಾಸಿ ತಾಣವಾಗಲಿದೆ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅಭಿಪ್ರಾಯಪಟ್ಟರು.

ಈ ಹಂತ ತಲುಪಲು ನೆರವಾದ ಬಿಎಸ್‌ಎಫ್‌ ಮತ್ತು ಇತರ ಸಂಸ್ಥೆಗಳ ನೆರವನ್ನು ಅವರು ಶ್ಲಾಘಿಸಿದರು.

‘ಇದು ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ ಒಂದು ಐತಿಹಾಸಿಕ ಹೆಜ್ಜೆಯಾಗಿದೆ’ ಎಂದು ಸುಚೇತ್‌ಗಡ ಗ್ರಾಮದ ಶೇಖರ್‌ ಸಿಂಗ್‌ ಹೇಳಿದರು.

ಆರ್‌.ಎಸ್‌.ಪುರ ಗಡಿ ಪ್ರದೇಶದ ವಿದ್ಯಾರ್ಥಿನಿ ದೀಪಿಕಾ, ‘ನಾನು ಇದುವರೆಗೆ ಟಿವಿಗಳಲ್ಲಿ ಮಾತ್ರ ಯೋಧರ ಪಥಸಂಚಲನ ಕಾರ್ಯಕ್ರಮವನ್ನು ವೀಕ್ಷಿಸಿದ್ದೆ. ನನ್ನ ಸ್ವಂತ ಊರಲ್ಲಿ ನನ್ನ ಕಣ್ಣ ಮುಂದೆಯೇ ಇದು ನಡೆಯುತ್ತಿರುವುದಕ್ಕೆ ಸಂತಸವಾಗಿದೆ’ ಎಂದು ಹೇಳಿದರು.

‘ರಿಟ್ರೀಟ್‌ ನಡೆದಿರುವ ಇದೊಂದು ಐತಿಹಾಸಿಕ ಸಂದರ್ಭವಾಗಿದೆ’ ಎಂದು ಬಿಎಸ್‌ಎಫ್‌ನ (ಜಮ್ಮು) ಡಿಐಜಿ ಪಿ ಎಸ್ ಸಂಧು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2016ರ ಜುಲೈ 4 ರಂದು ಅಕ್ಟೆರಿಯೊ ಗಡಿಯಲ್ಲಿ ಗಡಿ ಪ್ರವಾಸೋದ್ಯಮವನ್ನು ಆರಂಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT