ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಆಲಾಪನ್‌ಗೆ ಮತ್ತೊಂದು ನೋಟಿಸ್‌

ವಿಕೋಪ ನಿರ್ವಹಣಾ ಕಾಯ್ದೆ ಅಡಿ ಕ್ರಮ l ಎರಡು ವರ್ಷ ಜೈಲು ಶಿಕ್ಷೆಗೂ ಅವಕಾಶ
Last Updated 1 ಜೂನ್ 2021, 21:17 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಣ ಸಂಘರ್ಷ ಮಂಗಳವಾರ ಮತ್ತೆ ತಾರಕಕ್ಕೆ ಏರಿದೆ. ಪಶ್ಚಿಮ ಬಂಗಾಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರಿಗೆ ಕೇಂದ್ರ ಸರ್ಕಾರವು ವಿಕೋಪ ನಿರ್ವಹಣಾ ಕಾಯ್ದೆಯ 51ನೇ ಬಿ ಸೆಕ್ಷನ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ. ಈ ಸೆಕ್ಷನ್‌ ಅಡಿ ಗರಿಷ್ಠ 2 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ.

ಈ ಕಾಯ್ದೆಯ ಅಡಿ ಯಾವುದೇ ನಿರ್ದೇಶನ ಅಥವಾ ಆದೇಶವನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಹೀಗಿದ್ದೂ ಈ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಇದು ಸಂವಿಧಾನ ಬಾಹಿರ ಎಂದು ಟಿಎಂಸಿ ಹೇಳಿದೆ.

ಆಲಾಪನ್ ಅವರಿಗೆ ಕೇಂದ್ರ ಸರ್ಕಾರದ ವಿವಿಧ ಕಚೇರಿಗಳು ಸೋಮವಾರದಿಂದ ಈವರೆಗೆ ಎರಡು ನೋಟಿಸ್ ಜಾರಿ ಮಾಡಿವೆ. ಕೇಂದ್ರ ಸೇವೆಗೆ ಹಾಜರಾಗದೇ ಇರುವುದಕ್ಕೆ ಕಾರಣ ಕೇಳಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಸೋಮವಾರ ನೋಟಿಸ್ ಜಾರಿ ಮಾಡಿತ್ತು. ಈಗ ಕೇಂದ್ರ ಗೃಹ ಸಚಿವಾಲಯವು ವಿಕೋಪ ನಿರ್ವಹಣಾ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಮೂರು ದಿನಗಳಲ್ಲಿ ಉತ್ತರ ನೀಡಲು ಸೂಚಿಸಿದೆ.

‘ಪ್ರಧಾನಿಯು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು. ಅವರ ನೇತೃತ್ವದಲ್ಲಿ ಕಾಲೈಕುಂಡದಲ್ಲಿ ಆಯೋಜಿಸಲಾಗಿದ್ದ ಪರಿಶೀಲನಾ ಸಭೆಗೆ ನೀವು ಗೈರುಹಾಜರಾಗಿದ್ದೀರಿ. ಪ್ರಧಾನಿಯವರುನಿಮಗಾಗಿ 15 ನಿಮಿಷ ಕಾದಿದ್ದರು. ಆನಂತರ ಸಭೆಗೆ ಹಾಜರಾಗುತ್ತೀರೋ ಇಲ್ಲವೋ ಎಂದು ಕೇಳಿದಾಗ, ನಿಮ್ಮ ಮುಖ್ಯಮಂತ್ರಿಗಳ ಜತೆ ಬಂದು ಶೀಘ್ರವೇ ನಿರ್ಗಮಿಸಿದ್ದೀರಿ. ಇದು ಕೇಂದ್ರ ಸರ್ಕಾರವು ನೀಡಿರುವ ನಿರ್ದೇಶನದ ಉಲ್ಲಂಘನೆಯಾಗುತ್ತದೆ. ವಿಕೋಪ ನಿರ್ವಹಣಾ ಕಾಯ್ದೆಯ 51ನೇ ಬಿ ಸೆಕ್ಷನ್‌ನ ಉಲ್ಲಂಘನೆಯಾಗುತ್ತದೆ. ಈ ಕಾಯ್ದೆ ಅಡಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

‘ಈ ಕಾಯ್ದೆ ಅಡಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಥವಾ ರಾಜ್ಯ ಕಾರ್ಯಕಾರಿ ಸಮಿತಿ ಅಥವಾ ಜಿಲ್ಲಾಡಳಿತವು ಹೊರಡಿಸಿದ ನಿರ್ದೇಶನ ಅಥವಾ ಆದೇಶವನ್ನು ಪಾಲಿಸದೇ ಇದ್ದರೆ, ಆ ಅಧಿಕಾರಿಗೆ ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ’ ಎಂದು ವಿಕೋಪ ನಿರ್ವಹಣಾ ಕಾಯ್ದೆಯ 5ನೇ ಬಿ ಸೆಕ್ಷನ್ ಹೇಳುತ್ತದೆ.

ಕೋವಿಡ್‌ ಸಾಂಕ್ರಾಮಿಕದ ಕಾರಣ ವಿಕೋಪ ನಿರ್ವಹಣಾ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿಯು ಈ ಕಾಯ್ದೆ ಅಡಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅವರು ಈ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT