ಶನಿವಾರ, ಜೂನ್ 25, 2022
22 °C

ಪಶ್ಚಿಮ ಬಂಗಾಳದಲ್ಲಿ ಕಾವೇರುತ್ತಿರುವ ಚುನಾವಣಾ ಪ್ರಚಾರ: ಮೋದಿ–ದೀದಿ ವಾಕ್ಸಮರ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ಏರುತ್ತಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ತಮ್ಮ ಮೊದಲ ಪ್ರಚಾರ ರ್‍ಯಾಲಿ ನಡೆಸಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನೇತೃತ್ವದ ಸರ್ಕಾರವನ್ನು ಟೀಕೆಗೆ ಒಳಪಡಿಸಿದ್ದಾರೆ. ಇನ್ನೊಂದೆಡೆ, ‘ಮತದಾರರನ್ನು ಹಾದಿತಪ್ಪಿಸಲು ಮೋದಿ ಸುಳ್ಳುಗಳನ್ನು ಹೆಣೆಯುತ್ತಿದ್ದಾರೆ’ ಎಂದು ಮಮತಾ ಆರೋಪಿಸಿದ್ದಾರೆ.

ಬ್ರಿಗೇಡ್‌ ಪರೇಡ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಎಡಪಕ್ಷಗಳಿಂದ ಬೇಸತ್ತಿದ್ದ ರಾಜ್ಯದಲ್ಲಿ ಮಮತಾ ಬದಲಾವಣೆ ತರಬಹುದು ಎಂದು ರಾಜ್ಯದ ಜನರು ನಂಬಿದ್ದರು. ಆದರೆ ಮಮತಾ, ಜನರ ವಿಶ್ವಾಸವನ್ನು ನುಚ್ಚುನೂರು ಮಾಡಿದರು. ಜನರ ‘ದೀದಿ’ಯಾಗುವ (ಅಕ್ಕ) ಬದಲು ಅಳಿಯನಿಗೆ ಅತ್ತೆಯಾಗುವ ಸಣ್ಣ ಪಾತ್ರವನ್ನಷ್ಟೇ ನಿರ್ವಹಿಸಿದರು’ ಎಂದು ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.

ಮಮತಾ ಅವರು ತಮ್ಮ ಅಳಿಯ ಅಭಿಷೇಕ್‌ ಬ್ಯಾನರ್ಜಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಲವು ಕಾಲದಿಂದ ಆರೋಪಿಸುತ್ತಾ ಬಂದಿದೆ.

‘ಬೆರಳೆಣಿಕೆಯ ತಮ್ಮ ಸ್ನೇಹಿತ ಉದ್ಯಮಿಗಳಿಗೆ ಮೋದಿ ನೆರವು ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಮಮತಾ ಅವರು ಮಾಡುತ್ತಾ ಬಂದಿರುವ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಮೋದಿ, ‘ನಾನು ಸ್ನೇಹವನ್ನು ಗೌರವಿಸುವ ಹಿನ್ನೆಲೆಯಿಂದ ಬಂದವನು. ದೇಶದ 130 ಕೋಟಿ ಜನರೂ ನನ್ನ ಸ್ನೇಹಿತರೇ. ನಾನು ಅವರಿಗಾಗಿ ಕೆಲಸ ಮಾಡುತ್ತೇನೆ. ಬಂಗಾಳದ ನನ್ನ ಸ್ನೇಹಿತರಿಗೆ 90 ಲಕ್ಷ ಅಡುಗೆ ಅನಿಲ ಸಂಪರ್ಕಗಳನ್ನು ಕೊಡಿಸಿದ್ದೇನೆ. ಚಹಾದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಆದ್ದರಿಂದ ಪಶ್ಚಿಮ ಬಂಗಾಳದ ಚಹಾ ತೋಟಗಳಲ್ಲಿ ದುಡಿಯುವವರ ಸಾಮಾಜಿಕ ಭದ್ರತೆಗಾಗಿ ವಿಶೇಷ ಯೋಜನೆ ಜಾರಿ ಮಾಡಿದ್ದೇನೆ’ ಎಂದರು.

ಒಳಗಿನವರು (ಬಂಗಾಳದವರು) ಮತ್ತು ಹೊರಗಿನವರು ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ‘ಮಾರ್ಕ್ಸ್‌, ಲೆನಿನ್‌ ಹಾಗೂ ಕಾಂಗ್ರೆಸ್‌ನ ಒಂದು ಶಾಖೆಯಂತಿರುವ ಟಿಎಂಸಿಯಂಥ ಪಕ್ಷವನ್ನು ‘ಒಳಗಿನವರು’ ಎನ್ನುವುದಾದರೆ, ಶ್ಯಾಮಪ್ರಸಾದ ಮುಖರ್ಜಿಯಂಥವರು ಹಾಕಿದ ಬುನಾದಿಯ ಮೇಲೆ ನಿರ್ಮಾಣವಾಗಿರುವ ಬಿಜೆಪಿ ಹೊರಗಿನ ಪಕ್ಷವಾಗಲು ಹೇಗೆ ಸಾಧ್ಯ? ಪಶ್ಚಿಮ ಬಂಗಾಳದಲ್ಲಿ ನಿಜವಾದ ಪರಿವರ್ತನೆಯನ್ನು ತರಲು ಬಿಜೆಪಿ ಬದ್ಧರಾಗಿದೆ. ಎಲ್ಲಾ ವರ್ಗದ ಜನರ ಅಭಿವೃದ್ಧಿಯಾಗಬೇಕು, ಯಾರನ್ನೂ ಓಲೈಸುವ ಕೆಲಸ ಮಾಡುವುದಿಲ್ಲ. ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು’ ಎಂದರು.

ಕೇಸರಿಮಯವಾದ ಬ್ರಿಗೇಡ್‌ ಮೈದಾನ: ಕೋಲ್ಕತ್ತದ ಬ್ರಿಗೇಡ್‌ ಪರೇಡ್‌ ಮೈದಾನ ಭಾನುವಾರ ಕೇಸರಿಮಯವಾಗಿತ್ತು. ಚುನಾವಣೆ ಘೋಷಣೆಯಾದ ನಂತರ ಮೋದಿ ಅವರ ಮೊದಲ ಚುನಾವಣಾ ರ್‍ಯಾಲಿಗೆ ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಜೈ ಶ್ರೀರಾಮ್‌, ಭಾರತ್‌ ಮಾತಾಕಿ ಜೈ ಘೋಷಣೆಗಳು ಪ್ರತಿಧ್ವನಿಸಿದ್ದವು.

ಬಿಜೆಪಿಗೆ ಸೇರ್ಪಡೆಯಾದ ನಟ ಮಿಥುನ್‌ ಚಕ್ರವರ್ತಿ ಅವರೂ ಈ ರ್‍ಯಾಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದರು. ಮೋದಿ ಅವರು ‘ಅಸೊಲ್‌ ಪೊರಿಬರ್ತನ್‌’ (ನಿಜವಾದ ಪರಿವರ್ತನೆ) ಘೋಷಣೆ ಕೂಗಿದಾಗ ಸಾವಿರಾರು ಮಂದಿ ಒಟ್ಟಿಗೇ ದನಿಗೂಡಿಸಿದರು.

‘ಸುಳ್ಳು ಹೇಳುವುದೇ ಅಭ್ಯಾಸ’
ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಮೋದಿ ಅವರು ಹಲವು ವರ್ಷಗಳಿಂದ ಒಣ ಭರವಸೆಗಳನ್ನು ನೀಡಿದ್ದಾರೆ. ಈಗ ಜನರು ಅವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿರುವ ಅವರಿಗೆ ನಾಚಿಕೆಯಾಗಬೇಕು’ ಎಂದರು.

‘ಮೋದಿ ಅವರು ಬಂಗಾಳಿ ಭಾಷೆಯಲ್ಲಿ ಭಾಷಣ ಮಾಡುತ್ತಾರೆ. ಆದರೆ, ಅವರ ಭಾಷಣವನ್ನು ಯಾವತ್ತೂ ಗುಜರಾತಿ ಲಿಪಿಯಲ್ಲಿ ಬರೆದು, ಅವರ ಮುಂದೆ ಪಾರದರ್ಶಕ ಗಾಜಿನ ಶೀಟ್‌ ಅಡಿಯಲ್ಲಿ ಇರಿಸಲಾಗುತ್ತದೆ. ತಮಗೆ ಬಂಗಾಳಿ ಭಾಷೆ ಚೆನ್ನಾಗಿ ಬರುತ್ತದೆ ಎಂದು ಅವರು ನಟಿಸುತ್ತಾರೆ ಅಷ್ಟೇ’ ಎಂದು ಟೀಕಿಸಿದರು.

‘ನಿಮ್ಮ ಪಕ್ಷ ವಿದ್ಯಾಸಾಗರರ ಪುತ್ಥಳಿಯನ್ನು ನಾಶಪಡಿಸಿದೆ, ಬಿರ್ಸ ಮುಂಡ ಅವರನ್ನು ಅಪಮಾನಿಸಿದೆ, ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನದಲ್ಲಿ ಜನಿಸಿದ್ದರು ಎಂದು ತಪ್ಪಾಗಿ ಹೇಳಿದೆ. ಬಂಗಾಳ ಹಾಗೂ ಅದರ ಸಂಸ್ಕೃತಿಯ ಬಗ್ಗೆ ತಮಗೆ ಇರುವ ಜ್ಞಾನ ಎಷ್ಟು ಎಂಬುದನ್ನು ಇವೆಲ್ಲವೂ ತೋರಿಸುತ್ತವೆ’ ಎಂದು ಬಿಜೆಪಿ ವಿರುದ್ಧ ಮಮತಾ ಕಿಡಿ ಕಾರಿದರು.


ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಏರಿಕೆಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಿಲಿಗುರಿಯಲ್ಲಿ ಭಾನುವಾರ ರ್‍ಯಾಲಿ ನಡೆಸಲಾಯಿತು.

ಕಾಶ್ಮೀರವಾದರೆ ತಪ್ಪೇನಿದೆ?
‘ಪಶ್ಚಿಮ ಬಂಗಾಳದಲ್ಲಿ ಪುನಃ ಟಿಎಂಸಿ ಅಧಿಕಾರಕ್ಕೆ ಬಂದರೆ ರಾಜ್ಯವು ಕಾಶ್ಮೀರವಾಗಲಿದೆ’ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರು ನೀಡಿರುವ ಹೇಳಿಕೆಗೆ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘2019ರ ಆಗಸ್ಟ್‌ ನಂತರ ಜಮ್ಮು ಕಾಶ್ಮೀರ ಸ್ವರ್ಗವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಹಾಗಿರುವಾಗ, ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು’ ಎಂದು ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

‘ಬಂಗಾಳದವರು ಕಾಶ್ಮೀರವನ್ನು ಪ್ರೀತಿಸುತ್ತಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಈ ಅವಿವೇಕದ ಮತ್ತು ಕೀಳುಮಟ್ಟದ ಹೇಳಿಕೆಗಾಗಿ ನಾವು ನಿಮ್ಮನ್ನು ಕ್ಷಮಿಸುತ್ತೇವೆ’ ಎಂದಿದ್ದಾರೆ.

**
ಪರಿವರ್ತನೆಗಾಗಿ ಪಶ್ಚಿಮ ಬಂಗಾಳದ ಜನರು ದೀದಿಯನ್ನು ನಂಬಿದ್ದರು. ಆದರೆ, ಆ ವಿಶ್ವಾಸವನ್ನು ಅವರು ಹುಸಿಗೊಳಿಸಿದ್ದಾರೆ. ನಿಜವಾದ ಪರಿವರ್ತನೆಯಲ್ಲಿ ನಿಮಗೆ ವಿಶ್ವಾಸ ಮೂಡಲಿ ಎಂಬ ಕಾರಣಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ.
–ನರೇಂದ್ರ ಮೋದಿ, ಪ್ರಧಾನಿ

**
ಪಶ್ಚಿಮ ಬಂಗಾಳದಲ್ಲಿ ಪರಿವರ್ತನೆ ಆಗುವುದಿಲ್ಲ. ಟಿಎಂಸಿ ಅಧಿಕಾರ ಉಳಿಸಿಕೊಳ್ಳಿದೆ. ಆದರೆ, ಕೇಂದ್ರದಲ್ಲಿ ಪರಿವರ್ತನೆ ಆಗಲಿದೆ.
–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

**

ಟಿಕೆಟ್‌ಗೆ ಪ್ರಫುಲ್ಲ ಕುಮಾರ್ ಮಹಾಂತ ಪರದಾಟ
ಗುವಾಹಟಿ:
ಎರಡು ಬಾರಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಪ್ರಫುಲ್ಲ ಕುಮಾರ್ ಮಹಾಂತ ಅವರ ಸ್ವಕ್ಷೇತ್ರ ಬಹರಂಪುರವು ಈ ಬಾರಿ ಮಿತ್ರಪಕ್ಷ ಬಿಜೆಪಿಗೆ ಹಂಚಿಕೆಯಾಗಿರುವ ಕಾರಣ, ವಿಧಾನಸಭಾ ಚುನಾವಣೆಯಲ್ಲಿ ಅವರು ಟಿಕೆಟ್‌ಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಹಾಂತ ಅವರು ಅಸ್ಸಾಂ ಗಣ ಪರಿಷತ್‌ನಿಂದ (ಎಜಿಪಿ) 1991ರಿಂದಲೂ ಇದೇ ಕ್ಷೇತ್ರದಿಂದ ಸತತವಾಗಿ ಆರಿಸಿ ಬಂದಿದ್ದಾರೆ. ಆದರೆ, 2015ರಿಂದ ಅವರು ಸಿಎಎ ವಿರೋಧಿ ನಿಲುವು ತೆಗೆದುಕೊಂಡಿರುವುದರಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗಿದೆ.

2016ರಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಎಜಿಪಿ ಅಧ್ಯಕ್ಷ ಅತುಲ್ ಬೋರಾ ಅವರ ನಿರ್ಧಾರವನ್ನು ಮಹಾಂತ ಖಂಡಿಸಿದ್ದರು. ಸಿಎಎ ವಿರುದ್ಧ ಪ್ರತಿಭಟನಾರ್ಥವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಮತದಾನ ಮಾಡಿರಲಿಲ್ಲ.

ಎಜಿಪಿ ನಿರ್ಧಾರವನ್ನು ಖಂಡಿಸಿ ಮಹಾಂತ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮಹಾಂತ ಅವರ ಪತ್ನಿ ಜಯಶ್ರೀ ಗೋಸ್ವಾಮಿ ಅವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಕ್ಷವನ್ನು ಕಟ್ಟಿದವರಿಗೆ ಟಿಕೆಟ್ ನಿರಾಕರಿಸುವುದು ಹೇಗೆ. ಮಹಾಂತ ಅವರು ಇತರ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದ್ದಾರೆ.

ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಅತುಲ್ ಬೋರಾ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಸೇರಿದ ಸಚಿವ
ಗುವಾಹಟಿ:
ಅಸ್ಸಾಂ ವಿಧಾನಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದರಿಂದ ಬೇಸರಗೊಂಡಿರುವ ಸಚಿವ ಸಮ್ ರೋಗ್ಹಾಂಗ್ ಅವರು ಭಾನುವಾರ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಇವರನ್ನು ದಿಫು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ‘ಪಕ್ಷದ ಕೆಲವರ ಷಡ್ಯಂತ್ರದಿಂದ ಟಿಕೆಟ್ ಸಿಕ್ಕಿಲ್ಲ. ಬಿಜೆಪಿ ಕಾರ್ಯಕಲಾಪಗಳಲ್ಲಿ ಪಾದರ್ಶಕತೆ ಇಲ್ಲ’ ಎಂದು ಅವರು ಕಾಂಗ್ರೆಸ್ ಸೇರ್ಪಡೆ ವೇಳೆ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು