ಬುಧವಾರ, ಮಾರ್ಚ್ 3, 2021
19 °C

ಜೆಪಿ ನಡ್ಡಾ ಯಾರು? ಉತ್ತರಿಸಲು ಅವರೇನು ನನ್ನ ಪ್ರಾಧ್ಯಾಪಕರೇ?: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತರು ಮತ್ತು ರಾಷ್ಟ್ರೀಯ ಭದ್ರತೆ ವಿಚಾರವಾಗಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದು, ನಾನೇಕೆ ಅವರಿಗೆ ಉತ್ತರಿಸಲಿ ಎಂದಿದ್ದಾರೆ.

'ರಾಹುಲ್ ಗಾಂಧಿ, ಅವರ ಕುಟುಂಬ ಮತ್ತು ಕಾಂಗ್ರೆಸ್ ಚೀನಾ ಪರವಾಗಿರುವುದನ್ನು ಯಾವಾಗ ನಿಲ್ಲಿಸುತ್ತದೆ? ಅವರು ಉಲ್ಲೇಖಿಸುತ್ತಿರುವ ಅರುಣಾಚಲ ಪ್ರದೇಶ ಸೇರಿದಂತೆ ಸಾವಿರಾರು ಕಿ.ಮೀ. ಪ್ರದೇಶವನ್ನು ಚೀನಿಯರಿಗೆ ಉಡುಗೊರೆಯಾಗಿ ಪಂಡಿತ್ ನೆಹರೂ ಹೊರತು ಬೇರಾರು ನೀಡಿಲ್ಲ ಎಂಬುದನ್ನು ಅವರು ನಿರಾಕರಿಸುತ್ತಾರೆಯೆ? ಕಾಂಗ್ರೆಸ್ ಚೀನಾಗೆ ಶರಣಾಗುವುದು ಏಕೆ?' ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.

ಜೆ.ಪಿ.ನಡ್ಡಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಜೆಪಿ ನಡ್ಡಾ ನನ್ನ ಪ್ರಾಧ್ಯಾಪಕರೇ? ಅವರ ಪ್ರಶ್ನೆಗಳಿಗೆ ನಾನ್ಯಾಕೆ ಉತ್ತರಿಸಬೇಕು? ಅವರ್ಯಾರು? ಅವರು ಈ ದೇಶಕ್ಕೆ ಪ್ರಾಧ್ಯಾಪಕರೇ ಅಥವಾ ಶಿಕ್ಷಕರೇ? ನಾನೇಕೆ ಅವರಿಗೆ ಉತ್ತರಿಸಬೇಕು. ನಾನು ದೇಶಕ್ಕೆ ಉತ್ತರಿಸುತ್ತೇನೆ. ನನ್ನನ್ನು ಏನು ಬೇಕಾದರೂ ಕೇಳಬಹುದಾದ ರೈತರಿಗೆ ಉತ್ತರಿಸುತ್ತೇನೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಮ್ಮನ್ನು 'ವಿಚಲಿತಗೊಳಿಸುವ ಪ್ರಯತ್ನ'. ರೈತರ ವಾಸ್ತವದ ಸಮಸ್ಯೆಗಳು ನನಗೆ ತಿಳಿದಿದೆ. ಉತ್ತರಪ್ರದೇಶದ ಭಟ್ಟ ಪಾರ್ಸೌಲ್ನಿಂದ ಭೂಸ್ವಾಧೀನ ವಿರುದ್ಧದ ಆಂದೋಲನದಲ್ಲಿ ರೈತರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಬಗ್ಗೆ ರೈತರಿಗೆ ತಿಳಿದಿದೆ ಹೊರತು, ಜೆ.ಪಿ. ನಡ್ಡಾ ಅವರಲ್ಲ ಎಂದಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಿಸಿರುವ ವರದಿಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ, ಕೃಷಿ ಮತ್ತು ಕೋವಿಡ್-19 ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ನೀಡಿದ್ದರು.

'ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ದಶಕಗಳಿಂದಲೂ ರೈತರು ಏಕೆ ಬಡವರಾಗಿಯೇ ಉಳಿದಿದ್ದರು? ಪ್ರತಿಪಕ್ಷಗಳು ಮಾತ್ರವೇ ರೈತರ ಬಗ್ಗೆ ಸಹಾನುಭೂತಿ ಹೊಂದಿವೆಯೇ?'. ಗಾಂಧಿಯವರು ತಮ್ಮ 'ತಿಂಗಳ ರಜೆಯಿಂದ' ಈಗ ಮರಳಿದ್ದಾರೆ. ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಇವುಗಳಿಗೆ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸುತ್ತಾರೆ ಎಂದು ಭಾವಿಸುವುದಾಗಿ
ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು