ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಕ್ತರ ನೇಮಕದಲ್ಲಿ ಆತುರವೇಕೆ? ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಅರುಣ್ ಗೋಯೆಲ್ ಕಡತ ಪರಿಶೀಲನೆ:
Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣಾ ಆಯುಕ್ತ ಅರುಣ್ ಗೋಯಲ್‌ ನೇಮಕವನ್ನು ಸರ್ಕಾರವು ಆತುರವಾಗಿ ನಡೆಸಿದೆ. ಈ ಆತುರ ಏಕೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಚುನಾವಣಾ ಆಯುಕ್ತರ ನೇಮಕಾತಿಗೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆ ವೇಳೆ ಸಂವಿಧಾನ ಪೀಠವು ಹೀಗೆ ಹೇಳಿದೆ. ಅರುಣ್ ಗೋಯಲ್ ಅವರನ್ನು ತರಾತುರಿಯಲ್ಲಿ ನೇಮಕ ಮಾಡಲಾಗಿದೆ. ಅದರಲ್ಲಿ ಅಕ್ರಮ ಇರುವ ಸಾಧ್ಯತೆ ಇದೆ ವಕೀಲ ಪ್ರಶಾಂತ್ ಭೂಷಣ್ ಅವರು ಪೀಠದ ಗಮನ ಸೆಳೆದಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪೀಠವು, ಅರುಣ್ ಗೋಯಲ್ ಅವರ ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ತಾಕೀತು ಮಾಡಿತ್ತು.

ಸರ್ಕಾರವು ಸಲ್ಲಿಸಿದ ಕಡತಗಳನ್ನು ಪರಿಶೀಲಿಸಿದ ಪೀಠವು, ‘ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯು ಮೇ 15ರಂದು ತೆರವಾಗಿದೆ. ನವೆಂಬರ್ 18ರವರೆಗೆ ನೇಮಕಕ್ಕೆ ಸಂಬಂಧಿಸಿದಂತೆ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಆದರೆ, ಆನಂತರ ಒಂದೇ ದಿನದಲ್ಲಿ ನೇಮಕಾತಿ ನಡೆದಿದೆ’ ಎಂದು ಪೀಠವು ಹೇಳಿದೆ.

‘ಅರುಣ್ ಗೋಯಲ್ ಅವರ ಸ್ವಯಂ ನಿವೃತ್ತಿಯನ್ನು ನವೆಂಬರ್ 18ರಂದು ಮಾನ್ಯ ಮಾಡಲಾಗಿದೆ. ಚುನಾವಣಾ ಆಯುಕ್ತರ ಹುದ್ದೆಗೆ ಅಂದೇ ಅರ್ಜಿ ಸಲ್ಲಿಕೆಯಾಗಿದೆ. ಒಂದೇ ದಿನದಲ್ಲಿ ಅವರ ನೇಮಕಾತಿ ನಡೆದಿದೆ. 24 ಗಂಟೆಗಳಲ್ಲಿ ಅವರ ಕಡತವು ಸಚಿವಾಲಯಗಳ ಮಧ್ಯೆ ಓಡಾದಿದೆ. ಇಷ್ಟು ಮಿಂಚಿನ ವೇಗದಲ್ಲಿ ಅವರ ನೇಮಕಾತಿ ನಡೆದಿದೆ’ ಎಂದು ಪೀಠವು ಹೇಳಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಅವರು, ‘ದಶಕಗಳಿಂದಲೂ ಹೀಗೇ ನಡೆದುಕೊಂಡು ಬಂದಿದೆ. ನೇಮಕಾತಿಯಲ್ಲಿ ಅರ್ಹತೆಯನ್ನು ಪರಿಗಣಿಸಲಾಗಿದೆ’ ಎಂದು ಹೇಳಿದರು.

ಕಡತಗಳನ್ನು ಪರಿಶೀಲಿಸಿದ ಪೀಠವು, ‘ನೇಮಕಾತಿಗೆ ನೀವು ಅನುಸರಿಸಿದ ವಿಧಾನವನ್ನು
ಪ್ರಶ್ನಿಸುತ್ತಿದ್ದೇವೆ. ಇಷ್ಟು ವೇಗವಾಗಿ ನೇಮಕಾತಿ ನಡೆಸುವಂತೆ ಸರ್ಕಾರವನ್ನು ಉತ್ತೇಜಿಸಿದ್ದು ಏನು? ಇಷ್ಟು ದಿನ ಇಲ್ಲದ ಆತುರ ಈಗೇಕೆ’ ಎಂದು ಪೀಠವು ಪ್ರಶ್ನಿಸಿದೆ.

‘ಪ್ರಧಾನಿಗೆ ಕಡತ ಕಳಿಸಿದ್ದೇಕೆ?’

ಅರುಣ್ ಗೋಯಲ್ ಅವರ ಕಡತವನ್ನು ಕಾನೂನು ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಕಳುಹಿಸಿತ್ತು ಎಂಬುದನ್ನು ಪೀಠವು ಗಂಭೀರವಾಗಿ ಪರಿಗಣಿಸಿತು.

‘ಸಚಿವ ಸಂಪುಟಕ್ಕೆ ಮೊದಲು ಕಡತ ಕಳುಹಿಸಬೇಕಿತ್ತು. ಆದರೆ, ನೇರವಾಗಿ ಪ್ರಧಾನಿಗೆ ಕಳುಹಿಸಿದ್ದು ಏಕೆ’ ಎಂದು ಪೀಠವು ಪ್ರಶ್ನಿಸಿತು.

ಅದಕ್ಕೆ ಅಟಾರ್ನಿ ಜನರಲ್ ಅವರು, ‘ಕೆಲವು ಕಡತಗಳು ನೇರವಾಗಿ ಸಚಿವ ಸಂಪುಟಕ್ಕೆ ಹೋಗುತ್ತವೆ. ಕೆಲವು ಕಡತಗಳು ನೇರವಾಗಿ ಪ್ರಧಾನಿ ಹೋಗುತ್ತವೆ’ ಎಂದು ಹೇಳಿದರು.

‘ನ್ಯಾಯಮೂರ್ತಿ ಇದ್ದರೆ ಪಾರದರ್ಶಕತೆ ಬರುವುದಿಲ್ಲ’

ಚುನಾವಣಾ ಆಯೋಗದ ನೇಮಕಾತಿ ಸಮಿತಿಯಲ್ಲಿ ನ್ಯಾಯಾಂಗದ ಪ್ರತಿನಿಧಿಗಳು ಅಥವಾ ನ್ಯಾಯಮೂರ್ತಿಗಳು ಇದ್ದ ಮಾತ್ರಕ್ಕೆ, ನೇಮಕಾತಿಯಲ್ಲಿ ಪಾರದರ್ಶಕತೆ ಬರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

ಚುನಾವಣಾ ಆಯುಕ್ತರ ನೇಮಕಾತಿಯನ್ನು ಸಮಾಲೋಚನೆ ಮೂಲಕ ನಡೆಸಬೇಕು. ಸಮಾಲೋಚನಾ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಇರಬೇಕು ಎಂದು ಪೀಠವು ಬುಧವಾರದ ವಿಚಾರಣೆ ವೇಳೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ತುಷಾರ್ ಮೆಹ್ತಾ ಈ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT