ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಸಿ ಮೋಸ: ಮದುವೆ ಆಗದಿದ್ದಲ್ಲಿ ಉದ್ಯೋಗ ನಷ್ಟ- ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಸೈನಿಕನೊಬ್ಬನಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ
Last Updated 23 ಡಿಸೆಂಬರ್ 2022, 13:47 IST
ಅಕ್ಷರ ಗಾತ್ರ

ನವದೆಹಲಿ: ‘ದೂರುದಾರ ಮಹಿಳೆಯನ್ನು ಮದುವೆಯಾಗದಿದ್ದಲ್ಲಿ ಕೆಲಸ ಕಳೆದುಕೊಳ್ಳಬೇಕಾದೀತು’ ಎಂದುಮದುವೆ ಆಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಸೈನಿಕನೊಬ್ಬನಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಎಚ್ಚರಿಕೆ ನೀಡಿದೆ.

‘ಸೈನಿಕನಿಗೆ ರಜೆ ಸಿಗುವುದು ಕಷ್ಟಕರವಾಗಿದೆ. ಆದರೆ, ಸೈನಿಕನ ಕುಟುಂಬದವರು ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಇದೇ ತಿಂಗಳು ಆತನಿಗೆ ರಜೆ ಸಿಗುವ ಸಾಧ್ಯತೆಯೂ ಇದೆ’ ಎಂದು ಸೈನಿಕನ ಪರ ವಕೀಲರು ವಾದಿಸಿದರು.

ನಂತರ, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಅಭಯ್‌ ಎಸ್‌. ಓಕಾ ಹಾಗೂ ವಿಕ್ರಮ್‌ ನಾಥ್‌ ಅವರಿದ್ದ ಪೀಠವು ಸೈನಿಕನ ನಿರೀಕ್ಷಣಾ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿತು.

‘ಸೈನಿಕ ಮದುವೆ ಆಗುತ್ತಾನೆ ಎಂದು ವಕೀಲರು ಹೇಳಿದ್ದರಿಂದ ನಿರೀಕ್ಷಣಾ ಜಾಮೀನು ಅವಧಿಯನ್ನು ವಿಸ್ತರಿಸಲಾಗಿದೆ.ಮುಂದಿನ ವಿಚಾರಣೆ ವೇಳೆಗೆ ಮದುವೆ ಆಗಿರಬೇಕು. ಹೇಳಿದ್ದನ್ನು ಪಾಲಿಸದಿದ್ದರೆ ಮುಂದೇನಾಗುತ್ತದೆಯೋ ಅದನ್ನು ಅನುಭವಿಸಲು ಸಿದ್ಧರಿರಬೇಕು’ ಎಂದೂ ಪೀಠ ಎಚ್ಚರಿಕೆ ನೀಡಿದೆ.

ಮಹಿಳೆ ನೀಡಿದ ದೂರು ಆಧರಿಸಿ, ಚಂಡೀಗಢದಲ್ಲಿ 2021ರ ಆಗಸ್ಟ್‌ 7ರಂದು ಸೈನಿಕನ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಜಲಂಧರ್‌ನ ಸೇನಾ ನೆಲೆಯಲ್ಲಿ ಸೈನಿಕ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ನ್ಯಾಯಾಲಯವು ಸೈನಿಕನಿಗೆ ಬಂಧನದ ವಾರೆಂಟ್‌ ನೀಡಿತು. ಆದರೆ, ಸೇನಾ ನೆಲೆಯ ಅಧಿಕಾರಿಗಳು ಸೈನಿಕನನ್ನು ಬಂಧಿಸಲು ಅನುಮತಿ ನೀಡಲಿಲ್ಲ.

ಪಂಚಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗಳು ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿದವು. ನಂತರದಲ್ಲಿ ಸೈನಿಕ ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತಾರೆ.

‘ನಮ್ಮ ಮಧ್ಯೆ ಏನೇ ನಡೆದಿದ್ದರೂ ಅದು ಪರಸ್ಪರರ ಒಪ್ಪಿಗೆಯ ಮೇಲೆಯೇ ನಡೆದಿದೆ. ನಾನು ಮದುವೆ ಮಾಡಿಕೊಳ್ಳಲು ಇಚ್ಛಿಸಿದ್ದೆ. ಆದರೆ, ಮಹಿಳೆಯೇ ಹಿಂದೆ ಸರಿದರು’ ಎಂದು ಸುಪ್ರೀಂ ಕೋರ್ಟ್‌ನಲ್ಲಿಸೈನಿಕನ ಪರ ವಕೀಲರು ವಾದಿಸಿದ್ದರು. ನಂತರ ನ್ಯಾಯಾಲಯವು ಸೈನಿಕನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಮದುವೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ದೂರುದಾರ ಮಹಿಳೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ

ದೂರುದಾರ ಮಹಿಳೆ ಹಾಗೂ ಸೈನಿಕ ಶಾದಿ.ಕಾಂ ಮೂಲಕ ಪರಿಚಯವಾಗಿದ್ದರು. ನಂತರ ಇಬ್ಬರ ನಡುವೆ ಮದುವೆ ಆಗುವ ಮಾತುಕತೆಯೂ ಆಗಿತ್ತು. ಪೋಷಕರ ಬಳಿ ಮದುವೆ ಬಗ್ಗೆ ಮಾತನಾಡಿದ್ದೇನೆ ಎಂದು ನಂಬಿಸಿದ ಸೈನಿಕ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಮಹಿಳೆ ಗರ್ಭಿಣಿ ಆಗುತ್ತಾರೆ. ಸೈನಿಕ ತನ್ನ ಸ್ನೇಹಿತನ ಮುಖಾಂತರ ಮಹಿಳೆಗೆ ಕೆಲವು ಔಷಧಗಳನ್ನು ಕಳುಹಿಸುತ್ತಾರೆ. ಮದುವೆ ಆಗುವುದಾಗಿ ಮತ್ತೊಮ್ಮೆ ನಂಬಿಸುತ್ತಾರೆ. ನಂತರ ಮಹಿಳೆಯು ತನ್ನ ಪೋಷಕರಿಗೆ ಸೈನಿಕನನ್ನು ಮದುವೆ ಆಗುವುದಾಗಿ ತಿಳಿಸುತ್ತಾರೆ. ಮಹಿಳೆಯ ಪೋಷಕರು ಸೈನಿಕನ ಪೋಷಕರೊಂದಿಗೆ ಮಾತನಾಡಲು ಇಚ್ಛಿಸುತ್ತಾರೆ. ಆನಂತರದಿಂದ ಸೈನಿಕ ಮಹಿಳೆಯ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿಬಿಡುತ್ತಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT