ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದೊಳಗೆ ಫೋಟೊ ಕ್ಲಿಕ್ಕಿಸಿದರೆ ಎರಡು ವಾರ ವಿಮಾನ ರದ್ದು!

Last Updated 12 ಸೆಪ್ಟೆಂಬರ್ 2020, 15:35 IST
ಅಕ್ಷರ ಗಾತ್ರ

ನವದೆಹಲಿ: ‘ಇನ್ನು ಮುಂದೆ ಯಾರಾದರೂ ವಿಮಾನದೊಳಗೆ ಫೋಟೊ ಕ್ಲಿಕ್ಕಿಸುವುದು ಕಂಡುಬಂದರೆ ನಿಗದಿತ ಮಾರ್ಗದಲ್ಲಿ ಎರಡು ವಾರಗಳ ಕಾಲ ವಿಮಾನ ಸಂಚಾರ ರದ್ದು ಮಾಡಲಾಗುತ್ತದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶನಿವಾರ ತಿಳಿಸಿದೆ.

ಬಾಲಿವುಡ್‌ ನಟಿ ಕಂಗನಾ ರನೌತ್‌ ಪ್ರಯಾಣಿಸಿದ್ದ ಚಂಡೀಗಡ–ಮುಂಬೈ ಮಾರ್ಗದ ಇಂಡಿಗೊ ವಿಮಾನದಲ್ಲಿ ಮಾಧ್ಯಮದವರಿಂದ ಸುರಕ್ಷತೆ ಮತ್ತು ಅಂತರ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಸಿಎ ಇಂಡಿಗೊ ಸಂಸ್ಥೆಗೆ ಸೂಚಿಸಿದೆ.

ಈ ಘಟನೆಯ ಬೆನ್ನಲ್ಲೇ ಹೊಸ ಆದೇಶ ಹೊರಡಿಸಿರುವ ಡಿಜಿಸಿಎ, ಎಲ್ಲಾ ದೇಶಿಯ ವಿಮಾನಯಾನ ಸಂಸ್ಥೆಗಳಿಗೂ ಆದೇಶದ ಪ್ರತಿ ರವಾನಿಸಿದೆ.

ಬುಧವಾರ ಸಂಚರಿಸಿದ್ದ ವಿಮಾನದ ಮುಂದಿನ ಸಾಲಿನಲ್ಲಿ ಕಂಗನಾ ಆಸೀನರಾಗಿದ್ದರು. ಅವರ ಪ್ರತಿಕ್ರಿಯೆ ಪಡೆಯಲು ವರದಿಗಾರರು ಹಾಗೂ ಫೋಟೊ ಕ್ಲಿಕ್ಕಿಸಲು ಛಾಯಾಗ್ರಾಹಕರು ಮುಗಿಬೀಳುತ್ತಿದ್ದ ದೃಶ್ಯವು ವಿಡಿಯೊವೊಂದರಲ್ಲಿ ಸೆರೆಯಾಗಿತ್ತು.

‘1937ರ ವಿಮಾನ ನಿಯಮದ 13ನೇ ನಿಯಮದ ಪ್ರಕಾರ ಡಿಜಿಸಿಎ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿಯ ಸಂದರ್ಭವನ್ನು ಹೊರತುಪಡಿಸಿ ಇನ್ಯಾವುದೇ ಸಮಯದಲ್ಲಿ ಯಾರೊಬ್ಬರೂ ವಿಮಾನದೊಳಗೆ ಛಾಯಾಚಿತ್ರ ಸೆರೆಹಿಡಿಯುವಂತಿಲ್ಲ. ಈ ನಿಯಮ ಉಲ್ಲಂಘನೆಯಾದರೆ ನಿಗದಿತ ಮಾರ್ಗದಲ್ಲಿ ಎರಡು ವಾರಗಳ ಕಾಲ ವಿಮಾನ ಸಂಚಾರ ರದ್ದು ಮಾಡಲಾಗುತ್ತದೆ. ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯು ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರವೇ ಆ ಮಾರ್ಗದಲ್ಲಿ ವಿಮಾನ ಸಂಚಾರ ಪುನರಾರಂಭಿಸಲಾಗುತ್ತದೆ’ ಎಂದು ಡಿಜಿಸಿಎ ಆದೇಶದಲ್ಲಿ ಹೇಳಲಾಗಿದೆ.

ಡಿಜಿಸಿಎ ನಿಯಮಾವಳಿಗಳ ಅನುಸಾರ ವಿಮಾನಯಾನ ಸಂಸ್ಥೆಗಳು, ಅಶಿಸ್ತು ತೋರಿದ ಪ್ರಯಾಣಿಕರನ್ನು ಆಂತರಿಕ ತನಿಖೆಗೆ ಒಳಪಡಿಸಿ ನಿರ್ದಿಷ್ಟ ಅವಧಿಯವರೆಗೆ ಅವರ ಹೆಸರನ್ನು ‘ನೋ ಫ್ಲೈ’ ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT