ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿಯ ಬಂಡಾಯ ನಾಯಕರನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆಸಿಕೊಂಡ ಅಮಿತ್‌ ಶಾ

Last Updated 30 ಜನವರಿ 2021, 12:51 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿಯ ಹೊರಗೆ ಐಇಡಿ ಸ್ಫೋಟ ನಡೆದಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಎರಡು ದಿನಗಳ ಪಶ್ಚಿಮ ಬಂಗಾಳದ ಭೇಟಿ ರದ್ದಾಗಿದೆ. ಶನಿವಾರ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಬಂಡೆದ್ದಿರುವ ನಾಯಕರು ವಿಶೇಷ ವಿಮಾನದಲ್ಲಿ ದೆಹಲಿ ತಲುಪಿದ್ದಾರೆ.

ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿಯ ಮಾಜಿ ಸಚಿವ ರಾಜೀವ್‌ ಬ್ಯಾನರ್ಜಿ, ಟಿಎಂಸಿಯಿಂದ ಉಚ್ಛಾಟನೆಯಾಗಿರುವ ಶಾಸಕಿ ವೈಶಾಲಿ ದಾಲ್ಮಿಯಾ, ಹೂಗ್ಲಿ ಜಿಲ್ಲೆಯ ಶಾಸಕ ಪ್ರಬೀರ್‌ ಘೋಶಾಲ್‌, ಹೌರಾದ ಮಾಜಿ ಮೇಯರ್‌ ರತಿನ್‌ ಚಕ್ರವರ್ತಿ, ಮಾಜಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಹಾಗೂ ನಟ ರುದ್ರಾನಿಲ್‌ ಘೋಷ್‌ ಪಶ್ಚಿಮ ಬಂಗಾಳದಿಂದ ಸಂಜೆ 4:10ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದರು.

ಸಿಪಿಐ(ಎಂ) ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ನಟ ರುದ್ರಾನಿಲ್‌, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದ ನಂತರ ಟಿಎಂಸಿಗೆ ಸೇರಿದ್ದರು. ಬಿಸಿಸಿಐನ ಮಾಜಿ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಅವರ ಪುತ್ರಿ ಹಾಗೂ ಉದ್ಯಮಿ ವೈಶಾಲಿ ದಾಲ್ಮಿಯಾ 2016ರಲ್ಲಿ ರಾಜಕೀಯ ಪ್ರವೇಶಿಸಿದರು. ಪ್ರಬೀರ್‌ ಘೋಶಾಲ್‌ ಅವರು ಹಿರಿಯ ಪತ್ರಕರ್ತ.

'ವಿಧಾನಸಭೆಯ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅಮಿತ್‌ ಶಾ ಅವರ ಕಚೇರಿಯಿಂದ ನನ್ನನ್ನು ಸಂಪರ್ಕಿಸಿದರು, ಶುಕ್ರವಾರ ರಾತ್ರಿಯೇ ಹೊಟೇಲ್‌ನಲ್ಲಿ ನಾನು ಶಾ ಅವರನ್ನು ಭೇಟಿ ಮಾಡಬೇಕಿತ್ತು, ಆದರೆ ಅವರ ಪ್ರವಾಸ ರದ್ದಾಗಿದೆ. ನಾನು ಡೋಂಜುಡ್‌ ಪ್ರದೇಶದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ರಾಜೀವ್‌ ಬ್ಯಾನರ್ಜಿ ಹೇಳಿದ್ದಾರೆ.

ಹೌರಾದಲ್ಲಿ ಭಾನುವಾರ ನಡೆಯಬೇಕಿದ್ದ ರ್‍ಯಾಲಿಯಲ್ಲಿ ಟಿಎಂಸಿಯಿಂದ ಹೊರ ಬಂದಿರುವ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಯೋಜಿಸಲಾಗಿತ್ತು. ಆದರೆ, ಶನಿವಾರವೇ ಬಿಜೆಪಿ ಪಕ್ಷದ ಮುಖ್ಯ ಕಚೇರಿಯಲ್ಲಿ ಅಮಿತ್‌ ಶಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT