ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳನ್ನು ಗೌರವಿಸುವವರಿಂದ ಮಹಿಳಾ ಸುರಕ್ಷತೆ ನಿರೀಕ್ಷಿಸುವಂತಿಲ್ಲ: ರಾಹುಲ್

Last Updated 15 ಸೆಪ್ಟೆಂಬರ್ 2022, 6:48 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಸುರಕ್ಷತೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇಬ್ಬರು ದಲಿತ ಬಾಲಕಿಯರನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಲಖಿಂಪುರದಲ್ಲಿ ಹಾಡಹಗಲೇ ಇಬ್ಬರು ಅಪ್ರಾಪ್ತೆ ದಲಿತ ಸಹೋದರಿಯರನ್ನು ಅಪಹರಿಸಿ ಹತ್ಯೆಗೈದಿರುವುದು ಅತ್ಯಂತ ಕಳವಳಕಾರಿ ಘಟನೆ. ಅತ್ಯಾಚಾರಿ ಆರೋಪಿಗಳನ್ನು ಬಿಡುಗಡೆ ಮಾಡಿ ಗೌರವಿಸುವವರಿಂದ ಮಹಿಳೆಯರ ಸುರಕ್ಷತೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಲೇಬೇಕಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಗೋಧ್ರಾ ಜೈಲಿನಿಂದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಸನ್ನಡತೆಯ ಆಧಾರದ ಮೇಲೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿತ್ತು.

ಸುಳ್ಳು ಜಾಹೀರಾತು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ: ಪ್ರಿಯಾಂಕಾ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಖಿಂಪುರದಲ್ಲಿ ಇಬ್ಬರು ಸಹೋದರಿಯರ ಹತ್ಯೆಯ ಘಟನೆ ಹೃದಯ ವಿದ್ರಾವಕವಾಗಿದೆ. ಹಾಡಹಗಲೇ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಪ್ರತಿ ದಿನ ಪತ್ರಿಕೆ, ಟಿ.ವಿಗಳಲ್ಲಿ ಸುಳ್ಳು ಜಾಹೀರಾತು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT