ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಯೋಗಿ ಪ್ರಮಾಣ: ಇಬ್ಬರು ಡಿಸಿಎಂ

Last Updated 25 ಮಾರ್ಚ್ 2022, 17:21 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಗೆಲುವಿನ ಕಡೆ ಮುನ್ನಡೆಸಿದ್ದ ಯೋಗಿ ಆದಿತ್ಯನಾಥ ಅವರು, ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ,ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ಇಲ್ಲಿಯ ಅಟಲ್‌ ಬಿಹಾರಿ ವಾಜಪೇಯಿ ಇಕಾನಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಅವರು ಆದಿತ್ಯನಾಥ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಬಿಜೆಪಿ ಆಡಳಿತ ಇರುವ ರಾಜ್ಯಗಳ ಹಲವು ಮುಖ್ಯಮಂತ್ರಿಗಳು, ಬಿಜೆಪಿಯ ಹಿರಿಯ ನಾಯಕರು ಮತ್ತು ಹಿಂದಿ ಚಿತ್ರರಂಗದ ಕೆಲ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆದಿತ್ಯನಾಥ ಅವರ ಜೊತೆ ಇಬ್ಬರು ಉಪ ಮುಖ್ಯಮಂತ್ರಿಗಳು, 16 ಸಂಪುಟ ದರ್ಜೆ ಸಚಿವರು ಸೇರಿ 50 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಕೇಶವ್ ಪ್ರಸಾದ್‌ ಮೌರ್ಯ ಮತ್ತು ಬಿಜೆಪಿ ಹಿರಿಯ ಬ್ರಜೇಶ್‌ ಪಾಠಕ್‌ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ ಮಿತ್ರಪಕ್ಷಗಳಾದ ನಿಶಾದ್‌ ಪಕ್ಷದ ಸಂಜಯ್‌ ನಿಶಾದ್‌ ಮತ್ತು ಅಪ್ನಾ ದಳದ ಆಶಿಶ್‌ ಪಟೇಲ್‌ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಆಪ್ತರು ಎಂದೇ ಗುರುತಾಗಿರುವ ಮಾಜಿ ಐಎಎಸ್‌ ಅಧಿಕಾರಿ ಅರವಿಂದ್‌ ಕುಮಾರ್‌ ಶರ್ಮಾ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಅಸೀಮ್‌ ಅರುಣ್‌ ಅವರಿಗೆ ಯೋಗಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ದಾನಿಷ್‌ ಆಜಾದ್‌ ಅವರು ಈ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಪ್ರತಿನಿಧಿಯಾಗಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ 22 ಶಾಸಕರು ಈ ಅವಧಿಯಲ್ಲಿಯೂ ಸಚಿವ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಸಿದ್ಧಾರ್ಥ್‌ ನಾಥ್‌ ಸಿಂಗ್, ಶ್ರೀಕಾಂತ್‌ ಶರ್ಮ ಮತ್ತು ದಿನೇಶ್‌ ಶರ್ಮಾ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು ಆದರೆ ಅವರು ಹಾಜರಾಗಿರಲಿಲ್ಲ.

ಗೋರಖಪುರದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬುಲ್ಡೋಜರ್ ಮೆರವಣಿಗೆ ನಡೆಸಿದರು –ಪಿಟಿಐ ಚಿತ್ರ
ಗೋರಖಪುರದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬುಲ್ಡೋಜರ್ ಮೆರವಣಿಗೆ ನಡೆಸಿದರು –ಪಿಟಿಐ ಚಿತ್ರ


ಬುಲ್ಡೋಜರ್‌ಗಳಿಗೆ ಆರತಿ
ಹೊಸದಾಗಿ ಚುನಾಯಿತವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ದಿನ ರಾಜ್ಯದಾದ್ಯಂತ ಬಿಜೆಪಿ ಬೆಂಬಲಿಗರು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಯೋಗಿ ಆದಿತ್ಯನಾಥ ಅವರ ಹಿಂದಿನ ಸರ್ಕಾರವು, ಬುಲ್ಡೋಜರ್ ಸರ್ಕಾರವೆಂದೇ ಖ್ಯಾತವಾಗಿತ್ತು. ಹೀಗಾಗಿ ಬಿಜೆಪಿ ಕಾರ್ಯಕರ್ತರು ರಾಜ್ಯದ ಹಲವೆಡೆ ಶುಕ್ರವಾರ ಬುಲ್ಡೋಜರ್‌ಗಳಿಗೆ ಆರತಿ ಮಾಡಿದರು.

ಕ್ರಿಮಿನಲ್‌ ಆರೋಪ ಹೊತ್ತಿದ್ದವರಿಗೆ ಸೇರಿದ ಆಸ್ತಿಗಳನ್ನು ಬುಲ್ಡೋಜರ್‌ ಹರಸಿ ನೆಲಸಮ ಮಾಡಿಸಿದ್ದ ಕಾರಣ ಆದಿತ್ಯನಾಥ ಅವರನ್ನು ಬುಲ್ಡೋಜರ್‌ ಬಾಬಾ ಎಂದು ಕರೆಯಲಾಗುತ್ತದೆ.ಲಖನೌನ ಕೆಲವು ಬೆಂಬಲಿಗರು ‘ಬುಲ್ಡೋಜರ್‌ ಬಾಬಾ ಜಿಂದಾಬಾದ್‌’ ಎಂದು ಘೋಷಣೆ ಕೂಗುತ್ತಾಬುಲ್ಡೋಜರ್‌ಗಳ ಮೆರವಣಿಗೆ ನಡೆಸಿದರು.

ಸಮಾರಂಭಕ್ಕೆ ಹಾಜರಾಗುವ ಮುನ್ನ ವಾರಾಣಸಿಯ ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ವಿವಿಧ ದೇವಸ್ಥಾನಕ್ಕೆ ತೆರಳಿ ಹೊಸ ಸರ್ಕಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.ವಾರಾಣಸಿಯಿಂದ ಸುಮಾರು 2,000 ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕಾರಕ್ಕೆ ತೆರಳಿದ್ದಾರೆ ಎಂದು ವಾರಾಣಸಿಯ ಬಿಜೆಪಿ ಅಧ್ಯಕ್ಷ ವಿದ್ಯಾಸಾಗರ ರೈ ತಿಳಿಸಿದ್ದಾರೆ.

ಈ ಹಿಂದಿನ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಬ್ರಾಹ್ಮಣ ಸಮುದಾಯದ ಬ್ರಜೇಶ್ ಪಾಠಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ಕೇಶವ ಪ್ರಸಾದ್ ಮೌರ್ಯ ಅವರು ಚುನಾವಣೆಯಲ್ಲಿ ಸೋತರೂ, ಅದೇ ಹುದ್ದೆಯಲ್ಲಿ ಅವರನ್ನು ಮುಂದುವರೆಸಲಾಗಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ್ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.ಈ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಜನರು ಪಕ್ಷದ ಕೈಹಿಡಿದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈ ಸಮುದಾಯಗಳಿಗೆ ಎಂಟು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿ ಕೃತಜ್ಞತೆ ಸಲ್ಲಿಸಿದೆ.

ಈ ಎಲ್ಲಾ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ, 2024ರ ಲೋಕಸಭಾ ಚುನಾವಣೆವರೆಗೂ ಈ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

2024ರ ಸಿದ್ಧತೆ
ಲಖನೌ: ಯೋಗಿ ಆದಿತ್ಯನಾಥ ಅವರ ಸಂಪುಟದಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಯೋಗಿ ಸಂಪುಟದಲ್ಲಿ ಬ್ರಾಹ್ಮಣರು, ಜಾಟರು, ಪರಿಶಿಷ್ಟ ಜಾತಿಗಳು, ಇತರೆ ಹಿಂದುಳಿದ ವರ್ಗಗಳಿಗೆ ಸಿಂಹಪಾಲು ದೊರೆತಿದೆ. ಮುಸ್ಲಿಮರಿಗೂ ಒಂದು ಸಚಿವ ಸ್ಥಾನ ದೊರೆತಿದೆ. ಈ ಮೂಲಕ ಮುಂದಿನ ಚುನಾವಣೆ ವೇಳೆಗೆ ಜಾತಿ ಮತ್ತು ಧರ್ಮಗಳ ಸಮೀಕರಣಕ್ಕೆ ಬಿಜೆಪಿ ಮುಂದಾಗಿದೆ.

ಪರಿಶಿಷ್ಟ ಜಾತಿಗಳಿಗೆ, ಬ್ರಾಹ್ಮಣರಿಗೆ ಮತ್ತು ಜಾಟರಿಗೆ ತಲಾ ಎಂಟು ಸಚಿವ ಸ್ಥಾನಗಳನ್ನು ನೀಡಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಈ ಸಮುದಾಯದ ನಾಯಕರು ಬಿಜೆಪಿಯಿಂದ ದೂರ ಸರಿದಿದ್ದರು. ಇವರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಮೂಲಕ ಈ ಸಮುದಾಯಗಳನ್ನು ಸಮಾಧಾನಪಡಿಸಲು ಬಿಜೆಪಿ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT