ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರತಿಭೆ ಗುರುತಿಸಿ ಪೋಷಿಸುವುದು ಹೇಗೆ?

Last Updated 30 ಆಗಸ್ಟ್ 2020, 15:23 IST
ಅಕ್ಷರ ಗಾತ್ರ

ಮಗು ಖುಷಿಯಾಗಿ, ಯಾವುದೋ ಒಂದು ಉದ್ದೇಶ, ಗುರಿಯೊಂದಿಗೆ ಬದುಕಲು ಅದರಲ್ಲಿರುವ ಪ್ರತಿಭೆಯನ್ನು ಪೋಷಕರು ಗುರುತಿಸಿ ನೀರೆರೆಯಬೇಕಾಗಿದೆ. ಚಿಕ್ಕಂದಿನಿಂದಲೇ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರೆ ಒಳಿತು.

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡವರು. ಅವರ ಅಣ್ಣ ಅಜಿತ್‌ ತೆಂಡೂಲ್ಕರ್‌ ತಮ್ಮನ ಆಸಕ್ತಿಯನ್ನು ಗುರುತಿಸಿ, ಪೋಷಿಸಿ ಕ್ರಿಕೆಟ್‌ ಜಗತ್ತಿಗೆ ಒಬ್ಬ ಅಪ್ಪಟ ಪ್ರತಿಭೆಯನ್ನು ಕೊಡುಗೆಯಾಗಿ ನೀಡಿದ್ದು ಈಗ ಇತಿಹಾಸ.

ಹೌದು, ಪ್ರತಿಯೊಂದು ಮಗುವಿನಲ್ಲೂ ಇದೇ ರೀತಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತೇ ಇದೆಯಲ್ಲ. ಅದನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೋಷಕರು ಅಥವಾ ಶಿಕ್ಷಕರು ಮಾಡಬೇಕಾಗುತ್ತದೆ. ಚಿತ್ರಕಲೆ, ಸಂಗೀತ, ಕಥೆ– ಕವನ ಬರವಣಿಗೆ, ಕ್ರೀಡೆ ಮೊದಲಾದವುಗಳನ್ನು ಹೊರತುಪಡಿಸಿದರೆ ಬೇರೆ ಕೆಲವನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ.

ಆದರೆ, ತೀರಾ ಚಿಕ್ಕವರಿರುವಾಗಲೇ ಮಗುವನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ, ಪ್ರತಿಭೆಯನ್ನು ಗುರುತಿಸಿದರೆ ಅದನ್ನು ಬೆಳೆಸಲು ಸಾಕಷ್ಟು ಸಮಯಾವಕಾಶವಿರುತ್ತದೆ ಎನ್ನುವ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌., ಈ ಕೋವಿಡ್‌–19 ಸಂದರ್ಭದಲ್ಲಿ ಮಕ್ಕಳು ಮಾಡಿದ ಪೇಂಟಿಂಗ್‌, ಕ್ರಾಫ್ಟ್‌ ಮೊದಲಾದವುಗಳಿಗೆ ಆನ್‌ಲೈನ್‌ನಲ್ಲಿ ಕೂಡ ವೇದಿಕೆ ಒದಗಿಸಲಾಗಿದೆ ಎನ್ನುತ್ತಾರೆ.

*ಹೆಚ್ಚಿನ ಪೋಷಕರು ತಮ್ಮ ಮಗು ತಾವು ಅಂದುಕೊಂಡಂತೆಯೇ ಆಗಬೇಕು ಎಂದು ಬಯಸುವುದು ಸಾಮಾನ್ಯ. ಪೋಷಕರು ತಾವು ವಿಫಲವಾದ ಕ್ಷೇತ್ರದಲ್ಲಿ ತಮ್ಮ ಮಕ್ಕಳಾದರೂ ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಆದರೆ, ನಿಮ್ಮ ಮಗುವಿನ ಆಸಕ್ತಿ, ಗುರಿ ತಿಳಿದುಕೊಂಡು ಅದನ್ನು ಬೆಳೆಸುವಂತಹ ವಾತಾವರಣ ಕಲ್ಪಿಸಿ.

* ಆಯ್ಕೆಯನ್ನು ಮಕ್ಕಳಿಗೆ ಬಿಡಿ. ನಿಮ್ಮ ಮಗುವಿನಲ್ಲಿ ವಿಶೇಷವಾದ ಪ್ರತಿಭೆ ಇದೆ. ಅದರ ಕೊಡುಗೆ ಸಮಾಜಕ್ಕೆ ಸಿಗಲಿ ಎಂಬ ವಿಶಾಲವಾದ ಮನಸ್ಸು ನಿಮಗಿರಲಿ. ಮಕ್ಕಳು ಅವರಲ್ಲಿರುವ ಆಸೆ– ಆಕಾಂಕ್ಷೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡಿ. ಕೆಲವು ಬಾರಿ ಎಡವಬಹುದು. ತಪ್ಪು ಮಾಡಬಹುದು. ಆದರೆ, ಬಯ್ಯದೇ ತಪ್ಪಿನಿಂದಲೇ ಪಾಠ ಕಲಿಯುವಂತಹ ವಾತಾವರಣ
ಕಲ್ಪಿಸಿ.

* ನಿಮ್ಮ ಮಗುವಿನ ಆಟಪಾಠ, ಚಟುವಟಿಕೆ, ಓದುವಂತಹ ಪುಸ್ತಕಗಳು, ವೀಕ್ಷಿಸುವ ಟಿ.ವಿ. ಕಾರ್ಯಕ್ರಮಗಳು, ಬೆರೆಯುವಂತಹ ಸ್ನೇಹಿತರ ಮೇಲೆ ನಿಗಾ ಇಡಿ. ಮಗುವಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ, ಹೆಚ್ಚು ಅಂಕ ಗಳಿಸುತ್ತದೆ, ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಇನ್ನಿತರ ಲಲಿತ ಕಲೆಗಳಲ್ಲಿ ಆಸಕ್ತಿ ಇದೆಯೇ ಎಂದು ಗಮನಿಸಿ. ಮಗುವಿನ ಆಲೋಚನಾ ರೀತಿ, ಅದರ ಗ್ರಹಿಕೆ, ಸಮಸ್ಯೆಯನ್ನು ಪರಿಹರಿಸುವ ಕ್ರಮವನ್ನು ಅರಿತುಕೊಳ್ಳಿ. ಆಗ ಮಗುವಿನಲ್ಲಿರುವ ವಿಶೇಷ ಗುಣಗಳು, ಪ್ರತಿಭೆ ಗಣನೆಗೆ ಬಂದು ಉತ್ತೇಜನ ನೀಡಬಹುದು.

*ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿದ ನಂತರ ಪೋಷಕರು ಪರಸ್ಪರ ಚರ್ಚಿಸಬೇಕು. ಅದರ ಬಗ್ಗೆ ಶಿಕ್ಷಕರು, ಸ್ನೇಹಿತರು, ಹಿತೈಷಿಗಳ ಜೊತೆ ಚರ್ಚಿಸಬೇಕು. ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಮುಂದುವರಿಯಿರಿ.

* ಚಿಕ್ಕ ಮಗು ಹಲವು ಚಟುವಟಿಕೆಗಳಲ್ಲಿ ಭಾಗಿಯಾಗುತ್ತದೆ. ಯಾವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಲಕ್ಷ್ಯವಿಟ್ಟು ನೋಡಬೇಕಾಗುತ್ತದೆ. ಆಗ ಯಾವುದರಲ್ಲಿ ಮುಂದುವರಿಯಬಹುದು ಎಂಬ ಅಂದಾಜು ನಿಮಗೆ ಲಭ್ಯವಾಗುತ್ತದೆ. ತನ್ನದೇ ಆಸಕ್ತಿಗಳನ್ನು ಹೊಂದಿದ ಇತರ ಮಕ್ಕಳ ಜೊತೆ ಬೆರೆಯುವುದನ್ನೂ ನೀವು ಗಮನಿಸಬಹುದು.

ಇಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ನಗದೀಕರಿಸಿಕೊಂಡು ಬೆಳೆಯುವ ಕುಡಿಯನ್ನು ಚಿವುಟಿ ಹಾಕುವಂತಹ ಸನ್ನಿವೇಶಗಳನ್ನು ಸಾಕಷ್ಟಿವೆ. ಆದರೆ, ನಿಮ್ಮ ಮಗುವಿನ ಯಶಸ್ಸು ಅದರ ಖುಷಿಯ ಮೇಲೆ ನಿಂತಿದೆ ಎಂದು ಅರಿತುಕೊಳ್ಳುವುದು ಸೂಕ್ತ. ಮಗುವಿನ ಆಯ್ಕೆಗೆ ಬೆಂಬಲ ನೀಡಿ, ಆಸಕ್ತಿಯನ್ನು ಬೆಳೆಸಿ. ಶಾಲಾ ತರಗತಿಗಳು ಮುಗಿದ ನಂತರ ಅಂತಹ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT