ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕ್ರಿಯಾಶೀಲ ಸೋಮವಾರಕ್ಕಿರಲಿ ಒಂದಿಷ್ಟು ಯೋಜನೆ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಸದಾ ಕಚೇರಿ, ಕೆಲಸ, ಮೀಟಿಂಗ್ ಎಂದು ಬ್ಯುಸಿ ಇರುವವರಿಗೆ ಸೋಮವಾರ ಬಂತೆಂದರೆ ಸೋಮಾರಿತನ. ವಾರಾಂತ್ಯದಲ್ಲಿ ಆರಾಮವಾಗಿ ಕಾಲ ಕಳೆದವರಿಗೆ ಸೋಮವಾರ ಬೆಳಿಗ್ಗೆ ಎದ್ದೇಳಲು ಆಲಸ್ಯ. ನಾಳಿನ ಬಗ್ಗೆ ಭಾನುವಾರ ರಾತ್ರಿ ಮಲಗುವಾಗಲೇ ಚಿಂತಿಸುತ್ತಾ ಮಲಗುವವರೇ ಹೆಚ್ಚು. ಒಂದು ಅಧ್ಯಯನದ ಪ್ರಕಾರ ಶೇ 80ರಷ್ಟು ಮಂದಿ ಭಾನುವಾರ ರಾತ್ರಿ ಮಲಗುವಾಗ ಸೋಮವಾರದ ಬಗ್ಗೆ ಆತಂಕ ಪಡುತ್ತಾರಂತೆ. ಆದರೆ ಸೋಮವಾರದ ಬೆಳಗನ್ನು ಸಂತೋಷ ಹಾಗೂ ಉತ್ಸಾಹದಿಂದ ಸ್ವಾಗತಿಸಲು ಕೆಲವೊಂದು ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅದನ್ನು ಅನುಸರಿಸುವುದರಿಂದ ಕೇವಲ ಸೋಮವಾರ ಮಾತ್ರವಲ್ಲ ವಾರವಿಡೀ ಖುಷಿಯಿಂದ ಕಳೆಯಬಹುದು.

ಬೆಳಗೆದ್ದ ಕೂಡಲೇ ಇಮೇಲ್ ನೋಡಬೇಡಿ

ಕಚೇರಿ ಕೆಲಸ ಎಂದ ಮೇಲೆ ಇಮೇಲ್‌, ವ್ಯಾಟ್ಸ್‌ಆ್ಯಪ್‌ ನೋಡುವುದು ಅನಿವಾರ್ಯ. ಈಗಂತೂ ವರ್ಕ್‌ ಫ್ರಂ ಹೋಮ್ ಆಗಿರುವ ಕಾರಣ ಬಹುತೇಕ ಎಲ್ಲಾ ಕೆಲಸಗಳೂ ವಾಟ್ಸ್‌ಆ್ಯಪ್, ಇಮೇಲ್ ಮೂಲಕವೇ ನಡೆಯುತ್ತವೆ. ಹಾಗಂತ ಬೆಳಿಗ್ಗೆ ಎದ್ದ ಕೂಡಲೇ ಕಚೇರಿಗೆ ಸಂಬಂಧಿಸಿದ ವಾಟ್ಸ್‌ಆ್ಯಪ್‌, ಇಮೇಲ್‌ ಸಂದೇಶಗಳನ್ನು ನೋಡಬೇಡಿ. ಬೆಳಿಗ್ಗೆ ಎದ್ದ ಮೇಲೆ ಈ ಸಂದೇಶಗಳನ್ನು ನೋಡಲೆಂದೇ ಒಂದಿಷ್ಟು ಸಮಯ ಮೀಸಲಿಡಿ. ಹಾಸಿಗೆಯಿಂದ ಎದ್ದ ಕೂಡಲೇ ಕಚೇರಿ ಸಂದೇಶಗಳನ್ನು ನೋಡಿ ಮನಸ್ಸಿಗೆ ಒತ್ತಡ ತಂದುಕೊಳ್ಳಬೇಡಿ.

ದೈಹಿಕ ಚಟುವಟಿಕೆ

ಹಲವರು ಬೆಳಿಗ್ಗೆ ಏಳುವ ಸಲುವಾಗಿ ಅಲಾರ್ಮ್‌ ಇರಿಸಿಕೊಂಡು ಮಲಗುತ್ತಾರೆ. ಆದರೆ ಅದರ ರಿಂಗ್‌ ಕೇಳಿಸಿದ ಕೂಡಲೇ ಅದನ್ನು ಬಂದ್‌ ಮಾಡಿ ಮತ್ತೆ ಮಲಗುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಜೊತೆಗೆ ಬೆಳಿಗ್ಗೆ ಎದ್ದ ಕೂಡಲೇ ಕನಿಷ್ಠ ಅರ್ಧ ಗಂಟೆಯಾದರೂ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡಬೇಕು. ಇದು ಮೆದುಳು ‘ಫೀಲ್‌–ಗುಡ್‌’ ರಾಸಾಯನಿಕವನ್ನು ಸ್ರವಿಸುವಂತೆ ಮಾಡಿ ದಿನವಿಡೀ ಸಕಾರಾತ್ಮಕ ಅಂಶ ದೇಹದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಬೆಳಿಗ್ಗೆ ದೈಹಿಕ ಚಟುವಟಿಕೆ ಮಾಡುವುದರಿಂದ ಮಾನಸಿಕವಾಗಿಯೂ ಕ್ರಿಯಾಶೀಲರಾಗಿರಲು ಸಾಧ್ಯ. 

ಆಲೋಚನೆಗಳನ್ನು ನಿಯಂತ್ರಿಸುವುದು

ಮನುಷ್ಯನ ಮೆದುಳು ಸಕಾರಾತ್ಮಕ ಯೋಚನೆಗಳಿಗಿಂತ ನಕಾರಾತ್ಮಕ ಯೋಚನೆಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಆ ಕಾರಣಕ್ಕೆ ನಾವು ಉದ್ದೇಶಪೂರ್ವಕವಾಗಿ ನಮ್ಮ ಆಲೋಚನೆಗಳನ್ನು ನಿಯಂತ್ರಿಸಬೇಕು ಹಾಗೂ ಮನಸ್ಸನ್ನು ಸರಿಯಾದ ದಿಕ್ಕಿನಲ್ಲಿ ಯೋಚಿಸುವಂತೆ ಮಾರ್ಗದರ್ಶನ ನೀಡಬೇಕು. ಬೆಳಿಗ್ಗೆ ಎದ್ದ ಕೂಡಲೇ ಸಕಾರಾತ್ಮಕ ಅಂಶಗಳ ಮೇಲೆ ಗಮನ ಹರಿಸಬೇಕು. ಪ್ರಾರ್ಥನೆ, ಧ್ಯಾನ ರೂಢಿಸಿಕೊಳ್ಳಬೇಕು.

ಹಾಸಿಗೆ ಜೋಡಿಸುವುದು

ಬೆಳಿಗ್ಗೆ ಎದ್ದ ಕೂಡಲೇ ಹಾಸಿಗೆ, ಹೊದಿಕೆಯನ್ನು ಹೇಗಿದೆಯೋ ಹಾಗೇ ಇರಿಸಿ ಮುಂದಿನ ಕೆಲಸಗಳನ್ನು ಮಾಡುವುದು ಹಲವರ ಅಭ್ಯಾಸ. ಆದರೆ ಇದರಿಂದ ಮನುಷ್ಯನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಉತ್ಪಾದಕತೆಯ ಅಂಶ ಕುಗ್ಗುತ್ತದೆ. ಆ ಕಾರಣಕ್ಕೆ ಹಾಸಿಗೆಯಿಂದ ಎದ್ದ ಕೂಡಲೇ ಹಾಸಿಗೆಯನ್ನು ನೀಟಾಗಿ ಜೋಡಿಸಿ ಇಡಬೇಕು. ಹೊದಿಕೆಯನ್ನು ಮಡಿಸಿ, ದಿಂಬುಗಳನ್ನು ಜೋಡಿಸಿ ಇಡಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.