ಶನಿವಾರ, ಮೇ 8, 2021
20 °C

ನಾಯಕರ ಠೇಂಕಾರ; ಸಾಮಾನ್ಯರ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಸರಿಯಿರುವಾಗ ಮನುಷ್ಯನ ಬದುಕು ಯಾಕೆ ಹಾಳಾಗುತ್ತದೆ? ಅಥವಾ ಎಲ್ಲ ಸರಿಯಿರುವಾಗ ಮನುಷ್ಯ ತನ್ನ ಬದುಕನ್ನು ತಾನೇ ಯಾಕೆ ಹಾಳು ಮಾಡಿಕೊಳ್ಳುತ್ತಾನೆ?ಈ ಪ್ರಶ್ನೆಗಳು ಗ್ರೀಕ್ ದುರಂತ ನಾಟಕಕಾರರಿಗೆ ಎರಡೂವರೆ ಸಾವಿರ ವರ್ಷಗಳ ಕೆಳಗೆ ಎದುರಾದವು. ಸಾಮಾನ್ಯವಾಗಿ ಗ್ರೀಕ್ ದುರಂತ ನಾಯಕ ಎತ್ತರಕ್ಕೆ ಏರಿ, ನಂತರ ಪತನಗೊಳ್ಳುತ್ತಾನೆ. ಹಾಗೆ ಪತನಗೊಳ್ಳಲು ವಿಧಿಯ ಕೈವಾಡ ಕಾರಣವಿರಬಹುದು ಎಂದುಕೊಂಡ ಗ್ರೀಕ್ ನಾಟಕಕಾರರು ಸತ್ಯದ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಈ ದುರಂತ ನಾವು ಊಹಿಸಲಾರದ ಆಕಸ್ಮಿಕಗಳ ಫಲವಿರಬಹುದು ಎಂದು ಸೂಚಿಸಲೆತ್ನಿಸಿದರು. ಅದರ ಜೊತೆಗೇ, ಎತ್ತರಕ್ಕೇರಿದ ಮನುಷ್ಯನ ಪತನಕ್ಕೆ ಅವನ ‘ಹ್ಯುಬ್ರಿಸ್’ ಕೂಡ ಕಾರಣವಿರಬಹುದು ಎಂದು ಊಹಿಸಿದರು.‘ಹ್ಯುಬ್ರಿಸ್’ ಎಂಬ ಗ್ರೀಕ್ ಪದವನ್ನು ‘ಅಹಂಕಾರ’, ‘ಅತಿ ಆತ್ಮವಿಶ್ವಾಸ’ ಎಂದು ಅನುವಾದಿಸಿದವರಿದ್ದಾರೆ; ಆದರೆ ಅದರ ಸೂಚಿತಾರ್ಥ ನಮ್ಮ ಹಳ್ಳಿಗಳಲ್ಲಿ ಬಳಸುವ ‘ಒಳಗಡೆ ಏನೋ ಕುಣಿಸ್ತಾ ಇದೆ’ ಎಂಬ ನುಡಿಗಟ್ಟಿಗೆ ಹತ್ತಿರವಿರುವಂತಿದೆ. ಈ ‘ಒಳಕುಣಿತ’ವಲ್ಲದೆ ಇನ್ಯಾವ ಪರಿಭಾಷೆಯಿಂದ ಆಮ್ ಆದ್ಮಿ ಪಕ್ಷದ ಈ ಹಟಾತ್ ಪತನವನ್ನು ವಿವರಿಸಬಹುದು?  ಮೇಲುನೋಟಕ್ಕೆ  ಎಲ್ಲವೂ ಸರಿಯಿತ್ತು. ಇದು  ‘ನಮ್ಮ ಸರ್ಕಾರ’ ಎಂದು  ದೆಹಲಿಯ ಅರ್ಧದಷ್ಟು ಜನ ಹಾಗೂ ಈ ದೇಶದ ಒಳ್ಳೆಯ ಸಾಮಾನ್ಯರು ಹಾಗೂ ಸೂಕ್ಷ್ಮಜೀವಿಗಳು ಸಮಾಧಾನ ಪಟ್ಟುಕೊಂಡಿದ್ದರು. ಆದರೆ ಮೂರು ವರ್ಷಗಳಲ್ಲಿ ಜನರ ಮನಸ್ಸಿನಲ್ಲಿ ನಿಧಾನವಾಗಿ ಬೆಳೆದ ಗುಡ್‌ವಿಲ್ ಮೂರೇ ವಾರದಲ್ಲಿ ಕುಸಿದುಬಿತ್ತು.ಈ ಬೆಳವಣಿಗೆಗಳ ನಡುವೆ ನನ್ನನ್ನು ನಿಜಕ್ಕೂ ಕಾಡುತ್ತಿರುವುದು ಕಳೆದ ಮೂರು ದಿನಗಳಲ್ಲಿ ಕಂಡ ಕರ್ನಾಟಕದ ಆಮ್ ಆದ್ಮಿಯ ಕಾರ್ಯಕರ್ತರು ಹಾಗೂ ಸಣ್ಣಪುಟ್ಟ ನಾಯಕರ ಆಳದ ನೋವು. ಪಕ್ಷವನ್ನು ಕಟ್ಟಿದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಉಚ್ಚಾಟನೆಯಾದ ರಾತ್ರಿ ಕರ್ನಾಟಕದ ಜಿಲ್ಲೆಯೊಂದರ ಆಮ್ ಆದ್ಮಿ ಗುಂಪನ್ನು ಮುತ್ತಿದ್ದ ಕೆಲವು ಪ್ರಾಮಾಣಿಕ ಪ್ರಶ್ನೆಗಳು ಇವು: ನಾಳೆಯಿಂದ ಜನರಿಗೆ ಮುಖ ತೋರಿಸುವುದು ಹೇಗೆ?  ಉಳಿದೆಲ್ಲ ಪಕ್ಷಗಳಿಗಿಂತ ಭಿನ್ನವೆಂದು  ಹೇಳುತ್ತಿದ್ದ ನಾವು ಈಗ ನಮ್ಮ ಪಕ್ಷವನ್ನು ಸಮರ್ಥಿಸುವುದು ಹೇಗೆ? ನಮ್ಮದು ಎಲ್ಲ ಹಂತಗಳಲ್ಲೂ ಡೆಮಾಕ್ರೆಟಿಕ್ ಪಕ್ಷ ಎನ್ನುತ್ತಿದ್ದೆವು. ಈಗ ನಮ್ಮದೂ ಸರ್ವಾಧಿಕಾರಿಯೊಬ್ಬ ನಡೆಸುವ ಪಕ್ಷ ಎಂದು ಜನ ಹೇಳುತ್ತಾರೆ. ಅವರಿಗೆ ಏನು ಉತ್ತರ ಕೊಡುವುದು?ಈ ಥರದ ಒಳತೋಟಿಯನ್ನು ಯಾವುದೇ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಲ್ಲಿ ನಾನಂತೂ ಕಂಡಿಲ್ಲ! ಇಂಥ ದುಗುಡದಲ್ಲಿದ್ದ ತರುಣರಲ್ಲಿ ಬಹುತೇಕರು ರಾಜಕಾರಣಕ್ಕೆ ಹೊಸಬರು. ಅಲ್ಲಿದ್ದ ಹಳಬರು ರೈತ ಚಳವಳಿಯಿಂದ ಬಂದವರು. ತಪ್ಪು ಮಾಡಿ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಸಹಜ ಲಜ್ಜೆ ರಾಜಕಾರಣದಿಂದ ಮಾಯವಾಗಿರುವಾಗ,  ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುವ ಹೊಸ ತಲೆಮಾರಿನ ಜೊತೆಗೆ ಅದರ ಹಿಂದಿನ ತಲೆಮಾರೂ ಅಲ್ಲಿತ್ತು. ಸಾರ್ವಜನಿಕರ ಹಣ ನುಂಗಲು ಹಾಗೂ ತಮ್ಮ ತೆವಲುಗಳಿಗಾಗಿ ರಾಜಕೀಯಕ್ಕಿಳಿಯುವವರೇ ಎದ್ದು ಕಾಣುವ ಈ ಘಟ್ಟದಲ್ಲಿ, ಈ ಬಗೆಯ ಲಜ್ಜೆ, ಸಂಕೋಚಗಳನ್ನುಳ್ಳ ಹೊಸ ಗುಂಪನ್ನು ಹೇಗೆ ಉಳಿಸಿಕೊಳ್ಳುವುದು ಎನ್ನುವುದು ಆಮ್ ಆದ್ಮಿ ಪಕ್ಷದ ಉಳಿವಿಗಿಂತ ದೊಡ್ಡ ಪ್ರಶ್ನೆಯಾಗಿದೆ.ಯಾಕೆಂದರೆ ಈ ಥರದ ಹುಡುಗ, ಹುಡುಗಿಯರನ್ನು ಪ್ರಾಮಾಣಿಕ ಚಡಪಡಿಕೆ ಮತ್ತು ಆದರ್ಶ ಮಾತ್ರ ರಾಜಕಾರಣಕ್ಕೆ ತರಬಲ್ಲದು. ಈ ಕಾಲದ ವಿದ್ಯಾವಂತ ಹುಡುಗ, ಹುಡುಗಿಯರು ತಮ್ಮ ಹಣ ಖರ್ಚು ಮಾಡಿಕೊಂಡು ರಾಜಕೀಯಕ್ಕೆ  ಬಂದದ್ದು, ಕಾಶಿಗೆ ಹೋಗಿ ನರೇಂದ್ರ ಮೋದಿ ವಿರುದ್ಧ ಪ್ರಚಾರಕ್ಕಿಳಿದದ್ದು ಹುಡುಗಾಟವಲ್ಲ. ಈ ಬದ್ಧ ಕಾರ್ಯಕರ್ತರಲ್ಲಿ ಅನೇಕರು ಎಂಥವರೆಂದರೆ, ದೆಹಲಿಯಲ್ಲಿ ಪಕ್ಷ ಗೆದ್ದ ಮೇಲೆ ಪಕ್ಷದಿಂದಾಗಲೀ ನಾಯಕರಿಂದಾಗಲೀ ಏನನ್ನೂ ಬಯಸದೆ ತಂತಮ್ಮ ಕೆಲಸಕ್ಕೆ ಮರಳಿದವರು ಹಾಗೂ ದೊಡ್ಡ ಗುರಿಯೊಂದನ್ನು ಸಾಧಿಸಿದ  ನಿಸ್ವಾರ್ಥ ನೆಮ್ಮದಿ ಪಡೆದವರು.ಈ ಪಕ್ಷದ ಕಾರ್ಯಕರ್ತರಾದವರಲ್ಲಿ ಈ ಸಮಾಜಕ್ಕೆ ಸಂಬಂಧವಿಲ್ಲದಂತೆ ಬದುಕುತ್ತಿದ್ದಾರೆ ಎಂಬ ಆಪಾದನೆಗೊಳಗಾದ ಟೆಕ್ಕಿಗಳ ತಲೆಮಾರು ಇದೆ; ವ್ಯವಸ್ಥೆಯನ್ನು ಬದಲಾಯಿಸುವ ತುಡಿತವಿರುವ ತರುಣ, ತರುಣಿಯರಿದ್ದಾರೆ. ತಮ್ಮ ಬದುಕು ಹಸನಾಗಬಹುದೆಂಬ ನಿರೀಕ್ಷೆಯ ಸಾಮಾನ್ಯರಿದ್ದಾರೆ. ಇಲ್ಲಿ ಏನೂ ಬದಲಾಗುವುದಿಲ್ಲವೆಂಬ ನಿರಾಶೆ, ಸಿನಿಕತೆಗಳಿಂದ ಹೊರಬಂದ ಹಿರಿಯರಿದ್ದಾರೆ.  ಇವರಲ್ಲಿ ಹಲವರು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿದ್ದಾಗ ಅವರಿಗೆ ಭಿನ್ನ ಕಾರಣಗಳಿದ್ದವು. ಮೊದಲ ಗುಂಪಿಗೆ ಕಾಂಗ್ರೆಸ್ಸನ್ನು ಇಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಮುಖ್ಯವಾಗಿತ್ತು. ಎರಡನೆಯ ಗುಂಪಿಗೆ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂಬ ಬದ್ಧತೆಯಿತ್ತು. ಆಮ್ ಆದ್ಮಿ ಪಕ್ಷ ಕಟ್ಟಿದವರು, ಅದರ ಜೊತೆ ಉಳಿದವರು ಎರಡನೆಯ ಗುಂಪಿನವರೇ. ಇವರಲ್ಲೂ ಕೆಲವರು  ಬಿಜೆಪಿಯ ಪರವಾಗಿದ್ದರೂ ನಿಧಾನಕ್ಕೆ ತಮ್ಮೊಳಗಿನ ಆದರ್ಶದ ಪಿಸುಮಾತು ಕೇಳಿ ಆಪ್ ಜೊತೆಗೆ ಹೊರಟವರು.ಇದೀಗ ಇಂಥ ಕೋಟ್ಯಂತರ ಒಳ್ಳೆಯ ಜನರ ಗುಡ್‌ವಿಲ್ ಕಳೆದುಕೊಂಡದ್ದು ಆಮ್ ಆದ್ಮಿ ಪಕ್ಷದ ದುರಂತದ ಮೊದಲ ಹಂತ. ಯಾಕೆಂದರೆ ಆಪ್ ಈ ಕಾಲದಲ್ಲಿ ಜನರ ಒಳಗಿರುವ ಒಳಿತಿನ ಪ್ರಜ್ಞೆಯನ್ನು ವೋಟಾಗಿ ಪರಿವರ್ತಿಸಿತು. ಹೀಗೆ ಒಳಿತಿನ ಪ್ರಜ್ಞೆ ವೋಟಾಗಿ ಪರಿವರ್ತಿತವಾಗುವ ಪವಾಡ ಎಷ್ಟೋ ದಶಕಗಳಿಗೆ ಒಮ್ಮೆ ಮಾತ್ರ ಭಾರತದಲ್ಲಿ ನಡೆಯುತ್ತಾ ಬಂದಿದೆ. ರಥಯಾತ್ರೆಗಳ ವಿಭಜಕ ರಾಜಕೀಯದ  ಎದುರು ಆಪ್ ಮಹತ್ವದ ಹೋರಾಟವೊಂದಕ್ಕಾಗಿ ಜನರನ್ನು ಒಗ್ಗೂಡಿಸುವ ರಾಜಕಾರಣವನ್ನು ರೂಪಿಸಿತು. ಹಾಗೆಯೇ ಜನಪರವಾದ ಪ್ರಾಮಾಣಿಕ ಚಿಂತನೆ ಹಾಗೂ ರಾಜಕಾರಣಗಳ ನಡುವೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಳಚಿಹೋದ ಕೊಂಡಿಯನ್ನು ಆಪ್ ಬೆಸೆಯಲೆತ್ನಿಸಿತು. ನಾಡು ಕಟ್ಟುವ ಚಿಂತನೆಗಳನ್ನು ಸ್ವಾತಂತ್ರ್ಯ ಚಳವಳಿಯ ಜೊತೆಗೆ ಬೆಸೆದು ಗಾಂಧೀಜಿ ರೂಪಿಸಿದ ರಾಜಕಾರಣದ ಪರಂಪರೆ ನೆಹರೂ, ಲೋಹಿಯಾ, ಅಂಬೇಡ್ಕರ್ ಯುಗದಲ್ಲಿ ಬೇರೆ ಬೇರೆ ಥರ ಮುಂದುವರಿಯಿತು. ನಂತರ ಜಯಪ್ರಕಾಶ ನಾರಾಯಣರ ಜೊತೆಗೂಡಿದ ಚಂದ್ರಶೇಖರ್, ಮಧುಲಿಮಯೆ, ಎಂಬತ್ತರ ದಶಕದವರೆಗಿನ ಜಾರ್ಜ್ ಫರ್ನಾಂಡಿಸ್, ಕಮ್ಯುನಿಸ್ಟ್ ಪಕ್ಷಗಳ ನಂಬೂದಿರಿಪಾಡ್, ಜ್ಯೋತಿಬಸು… ಮೊದಲಾದವರ ತನಕ ಜನಹಿತ ಕುರಿತ ಚಿಂತನೆ ಹಾಗೂ ಅದನ್ನು ಸಾಕಾರಗೊಳಿಸುವ ರಾಜಕಾರಣಗಳ ಸಂಬಂಧ ಮುಂದುವರಿಯಿತು. ಆಮ್ ಆದ್ಮಿ ಪಕ್ಷದ ಕೆಲವು ನಾಯಕರು ಹಾಗೂ ಕಾರ್ಯಕರ್ತರಲ್ಲೂ ಈ ಮಾದರಿ ಒಂದು ಮಟ್ಟದಲ್ಲಾದರೂ ಮುಂದುವರಿಯಲೆತ್ನಿಸಿದೆ.ಇದೀಗ ಅಧಿಕಾರದ ಮಂಪರಿನಲ್ಲಿ ತಮ್ಮ ಪಕ್ಷದ ಈ ವಿಶಿಷ್ಟ ಸ್ವರೂಪವೇ ಕೇಜ್ರಿವಾಲ್ ಅವರಿಗೆ ಮರೆತುಹೋಯಿತೆ?  ಭ್ರಷ್ಟಾಚಾರವಿರೋಧಿ ಆಂದೋಲನವನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗ ಯಾದವ್ ಹಾಗೂ ಭೂಷಣ್ ತನ್ನ ಹೆಗಲೆಣೆಯಾಗಿದ್ದು ಮರೆತುಹೋಯಿತೆ? ವಿಭಿನ್ನ ನೆಲೆಗಳಿಂದ ಬಂದಿರುವ ಈ ಮೂವರೂ ತಮ್ಮ ಆದರ್ಶಗಳಿಂದಾಗಿಯೂ ಅವಮಾನಗಳನ್ನು ಅನುಭವಿಸಿದ್ದಾರೆ. ಮೂವರ ಮೇಲೂ ಹಲ್ಲೆಗಳಾಗಿವೆ. ಮೂವರೂ ತಂತಮ್ಮ ವಿಶಿಷ್ಟ ಶಕ್ತಿಯನ್ನು ಪಕ್ಷಕ್ಕೆ  ಧಾರೆಯೆರೆದಿದ್ದಾರೆ. ಈ ಇಬ್ಬರಿಗೆ ಹೋಲಿಸಿದರೆ, ಕೇಜ್ರಿವಾಲ್  ಯು.ಪಿ.ಎ. ಸರ್ಕಾರ ಅರಗಿಸಿಕೊಳ್ಳಲಾಗದ ನೇರ ಪ್ರಶ್ನೆಗಳನ್ನು ಕೇಳುತ್ತಿದ್ದರು ಹಾಗೂ ಬಲಪಂಥೀಯರ ಒಂದು ಗುಂಪಿಗೆ ಒಪ್ಪಿಗೆಯಾಗಿದ್ದರೆಂಬ ಕಾರಣಕ್ಕೆ ಕೂಡ ಇಂಗ್ಲಿಷ್ ಚಾನೆಲ್‌ಗಳು ಅವರನ್ನು ನಾಯಕರನ್ನಾಗಿ ಬಿಂಬಿಸಿದವು. ಜೊತೆಗೆ, ಕೇಜ್ರಿವಾಲ್‌ಗೆ ಹೆಚ್ಚಿನ ರಾಜಕೀಯ ಮುನ್ನೋಟವಿರುವುದು ನಿಜ. ಆ ಮುನ್ನೋಟಗಳನ್ನು ಯೋಗೇಂದ್ರ ಯಾದವರ ರಾಜಕೀಯವಿಜ್ಞಾನದ ಆಳವಾದ ಜ್ಞಾನವೂ ಒದಗಿಸಿತ್ತೆಂಬುದೂ ನಿಜ. 2 ವರ್ಷಗಳಲ್ಲಿ ಕೇಜ್ರಿವಾಲರ ರಾಜಕೀಯ ನಡೆಗಳೆಲ್ಲ ಕ್ಲಿಕ್ ಆಗಿವೆ. ಕಾಶಿಯಲ್ಲಿ ಲೋಕಸಭಾ ಚುನಾವಣೆಗೆ  ನಿಂತು ಈ ದೇಶದಲ್ಲಿ ಮೋದಿಯನ್ನು ಎದುರಿಸಬಲ್ಲ ಹೊಸ ನಾಯಕ ತಾನೆಂಬುದನ್ನು ಜಾತ್ಯತೀತರಿಗೆ, ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಟ್ಟರು. ಒಮ್ಮೆ ರಾಜಿನಾಮೆ ಕೊಟ್ಟು ಮತ್ತೆ ಅಧಿಕಾರ ಪಡೆಯಬಲ್ಲೆನೆಂಬ ಅವರ ಮುನ್ನೋಟವೂ ಕ್ಲಿಕ್ಕಾಗಿದೆ.ಈಗ ಕೇಜ್ರಿವಾಲ್ ರೂಪಿಸಿದ ಉಚ್ಚಾಟನೆಯ ರಾಜಕೀಯ ಕೂಡ ಕ್ಲಿಕ್ಕಾಗಬಹುದು. ‘ಜೂಲಿಯಸ್ ಸೀಸರ್’ ನಾಟಕದ ಉಪಾಯಗಾರ ಆಂಟೊನಿಯಂತೆ ಕೇಜ್ರಿವಾಲ್ ಕೂಡ ಜನರೆದುರು ಮುಗ್ಧ ದನಿಯಲ್ಲಿ ಮಾತಾಡಿ ಅವರನ್ನು ಮರುಳುಗೊಳಿಸಿ ಸುಮ್ಮನಾಗಿಸಬಹುದು. ಎದ್ದು ಕಾಣುವಂಥ ಕೆಲಸಗಳನ್ನು ಮಾಡಿ ಪರಿಣಾಮಕಾರಿ ನಾಯಕ ಎನ್ನಿಸಿಕೊಳ್ಳಲೂಬಹುದು. ಆದರೆ ಸ್ವಾರ್ಥವಿಲ್ಲದೆ ಅವರ ಹಿಂದೆ ಹೋದ ಲಕ್ಷಾಂತರ ಕಾರ್ಯಕರ್ತರ ಕಣ್ಣಲ್ಲಿ ಮಾತ್ರ ಅವರು ಮಾವ ಎನ್.ಟಿ.ರಾಮರಾವ್‌ಗೆ ಕೈಕೊಟ್ಟ ಚಂದ್ರಬಾಬು ನಾಯ್ಡು ಅಥವಾ ಉಳಿದವರಿಗೆ ಟೋಪಿ ಹಾಕಿ ಪ್ರಧಾನಿಯಾದ ನರಸಿಂಹರಾವ್ ಥರ ಕಾಣತೊಡಗುತ್ತಾರೆಯೇ ಹೊರತು ಮೊದಲಿನ ನಿಸ್ವಾರ್ಥಿ ನಾಯಕನಂತಲ್ಲ. ಹೀಗಾಗಿ ಕೇಜ್ರಿವಾಲ್ ತಮ್ಮ ‘ನಾಯಕವ್ಯಕ್ತಿತ್ವ’ವನ್ನು ಮತ್ತೆ ಪಡೆಯುವುದು ತೀರ ಕಷ್ಟ. ಇದೆಲ್ಲದರಿಂದ ಹೆಚ್ಚು ಖುಷಿಯಾಗಿರುವುದು ಉಳಿದ ರಾಜಕೀಯ ಪಕ್ಷಗಳಿಗೆ. ‘ನಾನಿಳಿವ ಕೊಳಚೆಗೆ ನೀನಿಳಿಯಬಲ್ಲೆಯಾ?’ ಎಂದು ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡಂತೆ ಪತನಗೊಂಡಿರುವ ಪಕ್ಷಗಳಿಗೆ ಆಮ್ ಆದ್ಮಿ ಪಕ್ಷವೂ ತಮ್ಮ ಲೆವೆಲ್ಲಿಗೇ ಇಳಿಯುತ್ತಿದೆ ಎಂಬುದು ಆನಂದ ತಂದಿರಬಹುದು.ಆದರೆ ಇದು ಕೇಜ್ರಿವಾಲರ ವ್ಯಕ್ತಿಗತ ದುರಂತದ ಜೊತೆಗೆ ಭಾರತದ ಹೊಸ ತಲೆಮಾರು ರೂಪಿಸಲೆತ್ನಿಸುತ್ತಿರುವ, ಮತೀಯವಾದಿಯಲ್ಲದ ಹಾಗೂ ಜಡವಲ್ಲದ ಹೊಸ ರಾಜಕಾರಣದ ದುರಂತ ಕೂಡ. ಅದರಲ್ಲೂ ದೆಹಲಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಾದಿಯಾಗಿ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ಎಡವಲ್ಲದ, ಬಲವಲ್ಲದ ‘ಸೆಂಟ್ರಿಸ್ಟ್’ ಪಕ್ಷವಾಗಿ ಆಮ್ ಆದ್ಮಿಯನ್ನು ಆರಿಸಿಕೊಂಡಿದ್ದವು. ಈ ಪಕ್ಷ ತನ್ನ ಆರಂಭದ ಆದರ್ಶದ ಜೊತೆಗೆ ಸಾಮಾಜಿಕ ನ್ಯಾಯದ ಆಯಾಮಗಳನ್ನು ರೂಢಿಸಿಕೊಂಡು ಬೆಳೆಯುತ್ತದೆ ಎಂದು ನಿರೀಕ್ಷಿಸಿದವರಿಗೆಲ್ಲ ಅದು ಇಷ್ಟು ಬೇಗ ಬಿಕ್ಕಟ್ಟಿಗೆ ಸಿಕ್ಕಿದ್ದು ಖಿನ್ನತೆ ತರುತ್ತಿದೆ.ಇಷ್ಟಾಗಿಯೂ ಮತ್ತೆ ಆಮ್ ಆದ್ಮಿ ಪಕ್ಷ ತನ್ನ ಮೂಲ ಹಾದಿಗೆ ಮರಳುವಂತೆ ನೈತಿಕ ಒತ್ತಾಯ ಹೇರಬಲ್ಲ ಶಕ್ತಿ ಆ ಪಕ್ಷದ ಅದ್ಭುತ ಕಾರ್ಯಕರ್ತರಿಗಿದೆ ಎನ್ನಿಸುತ್ತದೆ. ನಾಯಕರು ಬರುತ್ತಾರೆ; ನಾಯಕರು ಹೋಗುತ್ತಾರೆ. ಆದರೆ ಜನರ ಆದರ್ಶಗಳು ಒಂದು ಚಳವಳಿಯನ್ನು ಮುಂದುವರೆಸುತ್ತಾ ಹೋಗುತ್ತಿರುತ್ತವೆ. ಪಂಜಾಬಿನಲ್ಲಿ ಅದು ಆರಾಮಾಗಿ ಅಧಿಕಾರ ಹಿಡಿಯುವ ಸೂಚನೆ ಮೊನ್ನೆ ಮೊನ್ನೆಯವರೆಗೂ ಇತ್ತು. ಆದ್ದರಿಂದ ಪ್ರತಿ ರಾಜ್ಯವೂ ಆಮ್ ಆದ್ಮಿ ಐಡಿಯಾವನ್ನು ತನ್ನ ಪ್ರಾದೇಶಿಕ ಅಗತ್ಯಕ್ಕೆ ತಕ್ಕಂತೆ ಮರು ರೂಪಿಸಿಕೊಂಡು ಮುನ್ನಡೆಯುವುದೇ ಈಗಿನ ನಿರಾಶೆಯನ್ನು ಮೀರುವ ಮಾರ್ಗವೆನ್ನಿಸುತ್ತದೆ.ಕೊನೆ ಟಿಪ್ಪಣಿ: ಫೋಟೋ ಕಾಮಿಕ್ಸ್!

ಡಾ. ಸಿದ್ಧಲಿಂಗಯ್ಯನವರು ತಮ್ಮ ಆತ್ಮಕತೆ ‘ಊರು ಕೇರಿ’ಯಲ್ಲಿ ಇಬ್ಬರು ಗೆಳೆಯರ ಪ್ರಸಂಗವೊಂದನ್ನು ಹೇಳುತ್ತಾರೆ: ‘ಅವರ ಗೆಳೆತನ ಯಾವ ಮಟ್ಟಕ್ಕೆ ಹೋಯಿತೆಂದರೆ, ಇಬ್ಬರೂ ಪೇಟೆಯ ಫೋಟೋ ಸ್ಟುಡಿಯೋಗೆ ಹೋಗಿ ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡರು. ಇದನ್ನು ಮನೆಯಲ್ಲಿ ನೇತು ಹಾಕಿದರು. ಈ ಫೋಟೋವನ್ನು ಜನ ಚಕಿತರಾಗಿ ನೋಡುತ್ತಿದ್ದರು. ಆದರೆ ಅವರಲ್ಲಿ ಇದ್ದಕ್ಕಿದ್ದಂತೆ ಜಗಳವಾಗಿ ಅವರ ಸ್ನೇಹ ಕಡಿದುಹೋಯಿತು. ಅಂದೇ ಇಬ್ಬರೂ ತಮ್ಮ ಮನೆಗಳಲ್ಲಿದ್ದ ಫೋಟೋದ ಗಾಜು ತೆಗೆದು ಒಂದಾಗಿದ್ದ ಇಬ್ಬರ ಭಾವಚಿತ್ರವನ್ನು ಕತ್ತರಿಸಿ ಅರ್ಧಕ್ಕೆ ಮಾತ್ರ ಗಾಜು ಹಾಕಿಸಿಕೊಂಡರು. ಅಂದಿನಿಂದ ಅವರ ಮನೆಯಲ್ಲಿ ಪೂರ್ಣ ಫ್ರೇಮಿದ್ದರೂ, ಅರ್ಧ ಫೋಟೋ ವಿಲಕ್ಷಣವಾಗಿತ್ತು’.ಮೊನ್ನೆ ಬಿಡುಗಡೆಯಾದ ಪ್ರಶಾಂತ್ ಹುಲ್ಕೋಡರ ‘ಕೇಜ್ರಿ ಕ್ರಾಂತಿ-2.0’ ಪುಸ್ತಕದಲ್ಲಿ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಒಂದೆಡೆ; ಕೇಜ್ರಿವಾಲ್, ಸಿಸೋಡಿಯಾ ಮತ್ತೊಂದೆಡೆ ಇರುವ ಫೋಟೋ ನೋಡಿದಾಗ, ಮೇಲಿನ ಪ್ರಸಂಗದಲ್ಲಿರುವ ವ್ಯಂಗ್ಯ, ದುರಂತ, ವಿರೋಧಾಭಾಸಗಳೆಲ್ಲ ಅಲ್ಲಿ ಮತ್ತೆ ಕಾಣಿಸಿಕೊಂಡಂತಾಯಿತು!

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.