ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ‘ತೀರಿ’ ಹೋಗದ ಚೇತನಗಳು

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

ಅವರು ಸೃಜನಶೀಲ ವಿಮರ್ಶೆ ಹಾಗೂ ನಿರ್ಭೀತ ಬೌದ್ಧಿಕತೆಯ ಪ್ರತೀಕವಾಗಿದ್ದರು…

ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರೊಬ್ಬರು ‘ನಿಮ್ಮ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಯಾವ ಸೆಮಿನಾರಿಗೂ ಬರಲ್ಲಪ್ಪ! ಅಲ್ಲಿ ಎರಡು ನಾಗರಹಾವುಗಳು ಭುಸ್ಸೆಂದು ಎಗರುತ್ತವೆ’ ಎನ್ನುತ್ತಿದ್ದರಂತೆ. ತೊಂಬತ್ತರ ದಶಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಾಫಿ ಕಟ್ಟೆಯೊಂದರಲ್ಲಿ ಡಿ.ಆರ್. ನಾಗರಾಜ್ ಹಾಗೂ ಕಿ.ರಂ.ನಾಗರಾಜ್ ಈ ಮಾತನ್ನು  ಎಂಜಾಯ್ ಮಾಡುತ್ತಿದ್ದರು! ಸಾಂಸ್ಕೃತಿಕ ಪ್ರಶ್ನೆಗಳು ಬಂದಾಗ ಯಾರ ಮೇಲಾದರೂ ಎಗರಿ ಬೀಳಬಲ್ಲ ಜೀವಂತ ಚಿಂತಕರಾಗಿದ್ದ ಈ ಇಬ್ಬರ ಬಗ್ಗೆ ಆ ಪ್ರೊಫೆಸರ್ ಹೇಳಿದ್ದರಲ್ಲಿ ಸತ್ಯವಿತ್ತು.

ಆಗಸ್ಟ್ ತಿಂಗಳಲ್ಲೇ ಈ ಇಬ್ಬರೂ ನಮ್ಮನ್ನು ಅಗಲಿದ್ದನ್ನು ಗೆಳೆಯರು ಮೊನ್ನೆ ನೆನೆಸಿಕೊಂಡಾಗ, ನನ್ನೊಳಗೇ ನೆಲೆಸಿರುವ ಈ ಇಬ್ಬರ ನೆನಪುಗಳೂ ತೇಲಿ ಬರತೊಡಗಿದವು. ಡಿ.ಆರ್. 1998ರ ಆಗಸ್ಟ್ 12ರ ನಡುರಾತ್ರಿ ತೀರಿಕೊಂಡರು; ಕಿ.ರಂ. 2010ರ ಆಗಸ್ಟ್ 7ರ ರಾತ್ರಿ ತೀರಿಕೊಂಡರು. ಆದರೆ ‘ತೀರಿಕೊಂಡವರ ಅಂತಸ್ಸತ್ವ ಬದುಕಿರುವವರ ಬೆನ್ನಹುರಿಯಲ್ಲಿ ಬೆಳೆಯುತ್ತದೆ’ ಎಂಬ ನೀತ್ಷೆಯ ಮಾತನ್ನು ನಂಬುವ ನನ್ನಂಥವರಿಗೆ ಈ ಬಗೆಯ ಆತ್ಮೀಯ ಲೇಖಕರು ಎಂದೂ ‘ತೀರಿ’ಕೊಳ್ಳುವುದಿಲ್ಲ. 

ಕೀರಂ ಅವರನ್ನು ಡಿ.ಆರ್. ತಮಾಷೆಯಿಂದ ‘ಕವಿಗುರು ತಿಲಕ’ ಎಂದು ಕರೆಯುತ್ತಿದ್ದರು. ಕೀರಂ ಸಂಕೋಚದಿಂದ ಆ ಮಾತನ್ನು ನಿವಾರಿಸಿಕೊಳ್ಳಲೆತ್ನಿಸುತ್ತಿದ್ದರು. ಡಿ.ಆರ್. ವರ್ಣನೆಯಲ್ಲಿ ಉತ್ಪ್ರೇಕ್ಷೆಯೇನಿರಲಿಲ್ಲ. ಯಾಕೆಂದರೆ ತಮ್ಮೊಳಗೆ ಸಾವಿರಾರು ಕನ್ನಡ ಕಾವ್ಯಪಠ್ಯಗಳನ್ನು ತುಂಬಿಕೊಂಡಿದ್ದ ಕೀರಂ ಕವಿಗಳನ್ನು ಕಾಲಕಾಲಕ್ಕೆ ಓದಿ ಬೆಳೆಸುವ ಗುರುವೂ ಆಗಿದ್ದರು. ಕಾವ್ಯವನ್ನೇ ಲೋಕವನ್ನು ನೋಡುವ ಕಣ್ಣಾಗಿಸಿಕೊಂಡಿದ್ದ ಅವರು ಪಂಪನಿರಲಿ, ಈಚಿನ ಪುಟ್ಟ ಕವಿಯಿರಲಿ ಅಷ್ಟೇ ಕುತೂಹಲದಿಂದ  ಒಡನಾಡುತ್ತಿದ್ದರು. ಅಲ್ಲಿ ಕಾವ್ಯದ ಮಿಂಚು ಸಿಕ್ಕರೆ ‘ರಸವಶ’ರಾಗುತ್ತಿದ್ದರು. ಡಿ.ಆರ್. ಅನೇಕ ಜ್ಞಾನಶಿಸ್ತುಗಳ ಕಡೆಗೆ ಹೊರಳುತ್ತಲೇ ಕಾವ್ಯದಿಂದ ಹೊಮ್ಮುವ ಸೂಕ್ಷ್ಮದರ್ಶನಗಳ ಬೆನ್ನು ಹತ್ತುತ್ತಿದ್ದರು. ಕಾವ್ಯದ ಮೇಲೆ ಮಾತಾಡಿದಾಗ ಕೀರಂ ಮೈದುಂಬುತ್ತಿದ್ದರು;

ಕಾವ್ಯದ ಮೂಲಕ ಚಿಂತಿಸಿ ಬರೆದಾಗ ಡಿ.ಆರ್. ಮೈದುಂಬುತ್ತಿದ್ದರು. ಡಿ.ಆರ್. ಮೊದಲ ಪುಸ್ತಕ ‘ಅಮೃತ ಮತ್ತು ಗರುಡ’,  ‘ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ’ ಎಂಬ ಬೇಂದ್ರೆಯವರ ಮಾತಿನಿಂದ ತನ್ನ ಶೀರ್ಷಿಕೆಯನ್ನು ಪಡೆದಿತ್ತು; ಅವರ ಕೊನೆಯ ಪುಸ್ತಕ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕನ್ನಡ ಕಾವ್ಯತತ್ವವನ್ನೇ ರೂಪಿಸಲೆತ್ನಿಸುತ್ತಿತ್ತು. ಕೀರಂ ತಮ್ಮ  ಜೀವಿತದ ಕೊನೆಯ ಸಂಜೆ ಬೇಂದ್ರೆ ಕಾವ್ಯದ ಬಗ್ಗೆ ಮಾತಾಡುತ್ತಿರುವಾಗಲೇ ಅವರಿಗೆ ಹೃದಯಾಘಾತವಾಗಿತ್ತು. ಅದನ್ನು ಲೆಕ್ಕಿಸದೇ ಮಾತಾಡುತ್ತಾ ಹೋದ ಕೀರಂ ಅರವತ್ತನಾಲ್ಕನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಡಿ.ಆರ್. ನಲವತ್ತನಾಲ್ಕನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಂಡರು. 

ಸಾಹಿತ್ಯ ಹಾಗೂ ತಾತ್ವಿಕ ಪ್ರಶ್ನೆಗಳ ವಿಷಯದಲ್ಲಿ ನಿಷ್ಠುರವಾಗಿರುತ್ತಿದ್ದ ಕೀರಂ ಹಾಗೂ ಡಿ.ಆರ್. ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳನ್ನು ಗೌಣವಾಗಿಸುವ ಸಣ್ಣತನ ಕನ್ನಡ ವಿಮರ್ಶಾಲೋಕದಲ್ಲಿ ಕಾಣತೊಡಗಿದೆ.  ಅದರಲ್ಲೂ ಡಿ.ಆರ್. ರೀತಿಯ ಜಾಗತಿಕ ಮಟ್ಟದ ವಿಮರ್ಶಕನೊಬ್ಬ ಕನ್ನಡದಲ್ಲಿ ವಿಕಾಸಗೊಂಡಿರುವುದನ್ನು ಗುರುತಿಸಲು ಕೂಡ ಹಲವರು ‘ನಾಚಿ’ದಂತಿದೆ! ಆದರೆ ಭಾರತದುದ್ದಕ್ಕೂ ಅಶೀಷ್‌ ನಂದಿ, ಸೀತಾಂಶು ಮೆಹ್ತಾ, ಬಾಲಚಂದ್ರ ನೆಮಾಢೆ, ಉದಯನ್ ವಾಜಪೇಯಿ, ಗಣೇಶ್ ದೇವಿ ಥರದ ಮುಖ್ಯ ಲೇಖಕರು ಡಿ.ಆರ್. ಸಂಸ್ಕೃತಿ ಚಿಂತನೆಯ ಮಹತ್ವವನ್ನು ಕೃತಜ್ಞತೆಯಿಂದ ನೆನೆಯುವುದನ್ನು ಕಂಡಿದ್ದೇನೆ.  ಡಿ.ಆರ್. ತಲುಪಿದ ಈ ಎತ್ತರ ಅವರು ಪಟ್ಟು ಹಿಡಿದು ಗ್ರಹಿಸಿದ್ದ ಥಿಯರಿಗಳು,  ಸಾಮಾಜಿಕ ಚಳವಳಿಗಳನ್ನು, ಭಾರತೀಯ ಸಮಾಜವನ್ನು ಗ್ರಹಿಸಿದ ರೀತಿ, ಸಾಹಿತ್ಯವನ್ನು ಓದುವ ಸೂಕ್ಷ್ಮ ರೀತಿಗಳ ಮೂಲಕ ಸಾಧ್ಯವಾಯಿತು.

ಮಾರ್ಕ್ಸ್ ವಾದ ಹಾಗೂ ಆನಂತರ ಅವರ ಚಿಂತನೆಗೆ ಬಂದು ಸೇರಿಕೊಂಡ ಬಗೆಬಗೆಯ ಜಾಗತಿಕ ಚಿಂತಕರು ಕೂಡ  ಡಿ.ಆರ್. ಚಿಂತನೆಯ ವಿಸ್ತಾರಕ್ಕೆ ಕಾರಣವಾಗಿದ್ದರು. ಶರವೇಗದಲ್ಲಿ ಪುಸ್ತಕಗಳನ್ನು ಓದಬಲ್ಲವರಾಗಿದ್ದ ಡಿ.ಆರ್. ಕಣ್ಣು ಸಾಧಾರಣ ಲೇಖಕರಿಗೆ ದಕ್ಕದ ಹೊಸ ಚೌಕಟ್ಟುಗಳನ್ನು ರೂಪಿಸಿಕೊಳ್ಳುತ್ತಿತ್ತು. ಅವರ ‘ಶಕ್ತಿ ಶಾರದೆಯ ಮೇಳ’, ‘ಸಾಹಿತ್ಯ ಕಥನ’ ಹಾಗೂ ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ಯ ಮಟ್ಟದ ವಿಮರ್ಶೆ ಹಾಗೂ ಥಿಯರಿಯ ಪುಸ್ತಕಗಳು ಕನ್ನಡದಲ್ಲಿ ಹೆಚ್ಚಿಗೆ ಇಲ್ಲ.

ಡಿ.ಆರ್. ತೀರಿಕೊಂಡ ಮೇಲೆ, 1999ರ ನಡುಭಾಗದಲ್ಲಿ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯ ಪ್ರೂಫ್ ತಿದ್ದುತ್ತಾ,  ಕಾಣೆಯಾಗಿದ್ದ ಕೊಂಡಿಗಳನ್ನು ಕೂಡಿಸುತ್ತಾ ಕೀರಂ ಅಡ್ಡಾಡುತ್ತಿದ್ದುದು ಕನ್ನಡ ಸಂಸ್ಕೃತಿಯ ಸುಂದರ ಚಿತ್ರದಂತೆ ನನ್ನಲ್ಲಿ ಉಳಿದುಬಿಟ್ಟಿದೆ. ಕೀರಂಗಿಂತ ಡಿ.ಆರ್. ಹನ್ನೊಂದು ವರ್ಷ ಚಿಕ್ಕವರಾಗಿದ್ದರು. ಕೀರಂ ಜೊತೆ ಡಿ.ಆರ್. ಬಗೆಬಗೆಯ ಜಗಳಗಳನ್ನಾಡಿದ್ದರು. ಆದರೆ ಕೀರಂ ಅಲ್ಲಮ ಹಾಗೂ ಡಿ.ಆರ್. ಇಬ್ಬರ ಬಗೆಗಿನ ಪ್ರೀತಿಯಿಂದಲೂ ಈ ಪುಸ್ತಕವನ್ನು ಅಚ್ಚಿಗೆ ರೆಡಿ ಮಾಡುತ್ತಿದ್ದರು. ಕೀರಂ ಹಾಗೂ ಡಿ.ಆರ್. ಬರಹಗಳು, ಭಾಷಣಗಳು, ಖಾಸಗಿ ಮಾತುಕತೆಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಿದ್ದರೆ, ಈ ಇಬ್ಬರೂ ಕನ್ನಡದ ಬೌದ್ಧಿಕ ಬದುಕನ್ನು ಸದಾ ಜೀವಂತವಾಗಿಟ್ಟಿದ್ದರ ಬಗ್ಗೆ ಕೃತಜ್ಞತೆ ಉಕ್ಕುತ್ತದೆ.

ವಸ್ತುವಿನ ಆಳಕ್ಕೆ ಹೋಗಿ ವಿರುದ್ಧ ಧ್ರುವಗಳನ್ನು ಧ್ಯಾನಿಸಿ, ಸಂಕೀರ್ಣ ಥಿಯರಿಟಿಕಲ್ ಮಂಡನೆಗಳನ್ನು ಮಾಡುತ್ತಿದ್ದ ಡಿ.ಆರ್.; ನಿದ್ದೆ ಎಚ್ಚರಗಳಲ್ಲಿ ಸಾಹಿತ್ಯ ಲೋಕದಲ್ಲೇ ಮುಳುಗೇಳುತ್ತಾ ಹಠಾತ್ತನೆ ಹೊಸ ಸತ್ಯ ಕಂಡು ಮುದಗೊಳ್ಳುತ್ತಿದ್ದ ಕೀರಂ! ಇವರಿಬ್ಬರ ವಿಶ್ಲೇಷಣೆಗಳು ನನ್ನಂಥ ಸಾವಿರಾರು ಜನರ ಭಾಗವಾಗಿರಬಹುದು; ಇಂದಿಗೂ ನಾನು ಯಾವುದಾದರೂ ಸಭೆಯಲ್ಲಿ ನಿಂತು ತಡವರಿಸುತ್ತಿದ್ದರೆ ಎಲ್ಲೋ ಕೀರಂ ಅಥವಾ ಡಿ.ಆರ್. ಚೌಕಟ್ಟುಗಳು ಕೈಹಿಡಿದು ನಡೆಸುತ್ತಿರುತ್ತವೆ.

ಕೀರಂ ಪಾಠಗಳು, ಭಾಷಣಗಳು ಕನ್ನಡ ಸಾಹಿತ್ಯ ಬೋಧಿಸುವ ಸಾವಿರಾರು ಅಧ್ಯಾಪಕ, ಅಧ್ಯಾಪಕಿಯರಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುತ್ತವೆ. ಕೀರಂ ವಿಶ್ಲೇಷಣೆಯ ಸ್ವಚ್ಛಂದ ವಿಸ್ತಾರ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಅವರ ಆಯ್ದ ಬರಹಗಳ ಸಂಕಲನ ‘ತೆರೆದ ಪಠ್ಯ’ದಲ್ಲಿ ಕಾಣುತ್ತದೆ. ಸಾಹಿತ್ಯ ಕೃತಿಗಳು ಇಂದು ನುಡಿದದ್ದಕ್ಕಿಂತ ನಾಳೆ ನುಡಿಯುವ ರೀತಿ ಬೇರೆಯಾಗಿರಬಲ್ಲದೆಂಬುದನ್ನು ನಂಬಿ ಕೀರಂ ಹುಡುಕಾಡುತ್ತಿದ್ದರು. ಕವಿಯಂತೆ ವಿಮರ್ಶಕನಿಗೂ ಅದ್ಭುತ ಕಲ್ಪನಾವಿಲಾಸವೊಂದು ಹಠಾತ್ತನೆ ಹೊಸ ಸತ್ಯಗಳನ್ನು ಹೊಳೆಸುವ ರೀತಿಯನ್ನು ಮತ್ತೆ ಮತ್ತೆ ಕಾಣಿಸುತ್ತಿದ್ದರು.

ಕೀರಂ ಹಾಗೂ ಡಿ.ಆರ್. ಸಾಹಿತ್ಯಲೋಕದಲ್ಲಿ ಮುಳುಗೇಳುತ್ತಿದ್ದವರಂತೆ ಕಂಡರೂ ಬಹು ಕಾಲ ಸಾಮಾಜಿಕ ಚಳವಳಿಗಳ ಸಂಪರ್ಕದಲ್ಲಿದ್ದವರೆಂಬುದನ್ನು ಮರೆಯಬಾರದು. ಒಂದು ಕಾಲಕ್ಕೆ ಇಬ್ಬರೂ ಸಮಾಜವಾದಿ ಚಳವಳಿಯಲ್ಲಿದ್ದವರು. ಕೀರಂ ಸಮಾಜವಾದಿ ಚಳವಳಿಯಲ್ಲೇ ಮುಂದುವರಿದರು. ಡಿ.ಆರ್.  ಕಮ್ಯುನಿಸ್ಟ್ ಪಾರ್ಟಿಯತ್ತ ನಡೆದರು. ಈ ರಾಜಕೀಯ ಒಡನಾಟ ಕೂಡ ಅವರ ಸಾಹಿತ್ಯ ಗ್ರಹಿಕೆಗಳಿಗೆ ವಿಸ್ತಾರವನ್ನು ಒದಗಿಸಿತು. ಡಿ.ಆರ್. ರಾಜಕೀಯ ಓದುಗಳ ಚೌಕಟ್ಟುಗಳನ್ನೂ ಸ್ವೀಕರಿಸಿದರು;

ಬರಬರುತ್ತಾ ರಾಜಕೀಯ ಚೌಕಟ್ಟುಗಳ ಸರ್ವಾಧಿಕಾರವನ್ನೂ ಧಿಕ್ಕರಿಸಿದರು. ಕೀರಂ ಸಾಹಿತ್ಯಕೃತಿಗಳನ್ನು ರಾಜಕೀಯ ಚೌಕಟ್ಟುಗಳಲ್ಲಿ ಇಟ್ಟು ನೋಡಲೊಪ್ಪದೆ,  ಕೃತಿಯೊಂದು ಸದಾ ತೆರೆದ ಪಠ್ಯ ಎಂದು ನಂಬಿದವರು. ಕವಿಯ ರೂಪಕದ ವಿಸ್ತರಣೆ ಹಾಗೂ ರೂಪಕರಕ್ಷಣೆ ಕೀರಂಗೆ ಆಳದ ಕರ್ತವ್ಯವಾಗಿತ್ತು. ನಿಸಾರ್ ಅಹಮದ್ ಅವರ ‘ಕುರಿಗಳು ಸಾರ್ ಕುರಿಗಳು’ ಎಂಬ ಒರಿಜಿನಲ್ ರೂಪಕವನ್ನು ಸಿನಿಮಾದವರು ಕದ್ದಾಗ ಅಥವಾ ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು’ ನಿವೇದನೆಯನ್ನು ಈಟೀವಿಯವರು ‘ಎದೆ ತುಂಬಿ ಹಾಡುವೆನು’ ಎಂದು ತಿರುಚಿಕೊಂಡಾಗ ಕೀರಂ ರೇಗುತ್ತಿದ್ದರು. ಹಾಗೆಯೇ ಗಂಭೀರ ಕಾವ್ಯದ ಅಪಕ್ವ ಗ್ರಹಿಕೆಗಳ ವಿರುದ್ಧ ಬೀದಿ ಜಗಳಕ್ಕೂ ಇಳಿಯುತ್ತಿದ್ದರು.

ಕನ್ನಡ ಅಧ್ಯಾಪಕರಾಗಿದ್ದ ಕೀರಂ ಹಾಗೂ ಡಿ.ಆರ್. ಇಡೀ ಜಗತ್ತಿನ ಬೌದ್ಧಿಕ ಲೋಕಕ್ಕೆ ಮುಕ್ತವಾಗಿ ತೆರೆದುಕೊಂಡ ರೀತಿಯಿಂದ ಕೂಡ ಕನ್ನಡ ಸಂಸ್ಕೃತಿ ಅನೇಕ ಪಾಠಗಳನ್ನು ಕಲಿಯುವುದಿದೆ. ಡಿ.ಆರ್. ಬಳಿ ಜಗತ್ತಿನ ಇತ್ತೀಚಿನ ಕಾದಂಬರಿಗಳು ಹಾಗೂ ಥಿಯರಿಗಳ ಪುಸ್ತಕಗಳೆಲ್ಲ ಇರುತ್ತಿದ್ದವು.  ಡೆರಿಡಾ, ರೋಲಾ ಬಾರ್ಥ್, ಚಾಮ್ ಸ್ಕಿ, ಫ್ಯಾನನ್, ಫಿಲಿಪ್ ರಾತ್ ಪುಸ್ತಕಗಳನ್ನು ನಾನು ಕಂಡದ್ದು ಡಿ.ಆರ್. ಮನೆಯಲ್ಲಿ. ಚಿಂತಕಿ ಸಿಮೋನ್ ವೇಲ್,  ಎರಿಕ್ ಆರ್ಬಾಕ್, ಅಂಬರ್ತೋ ಇಕೋ ಪುಸ್ತಕಗಳು ನನಗೆ ಸಿಕ್ಕಿದ್ದು ಕೀರಂ ಮನೆಯಲ್ಲಿ. ಡಿ.ಆರ್. ಅನ್ಯದೇಶಗಳಿಂದ ಪಡೆಯಬೇಕಾದದ್ದೇನು ಎಂಬುದರ ಬಗ್ಗೆ ಖಚಿತವಾಗಿದ್ದರು. ಕೀರಂ ಸಾಹಿತ್ಯ ಕೃತಿ ಹಾಗೂ ಸಂಸ್ಕೃತಿ ಚಿಂತನೆಗಳನ್ನು ಬೆಳೆಸಬಲ್ಲ ಯಾವುದೇ ದೇಶದ ಒಳನೋಟಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.

ಅರಿಸ್ಟಾಟಲನಂತೆ ‘ಜ್ಞಾನ ಎಲ್ಲರಿಗೂ ಸೇರಿದ್ದು’ ಎಂದು ನಂಬಿದ್ದ ಕೀರಂ ಸಾಹಿತ್ಯೋನ್ಮಾದದಲ್ಲಿ ಸಿಡಿಸಿದ ಒಳನೋಟಗಳಿಂದ ಮಹತ್ವದ್ದನ್ನು ಪಡೆದ ಹಲವರಿದ್ದಾರೆ. ಕೆಲವೊಮ್ಮೆ ಕೀರಂ ಕೊಟ್ಟ ಒಳನೋಟಗಳು ತಮಗೆ ಬೆಳಕಾದದ್ದನ್ನು ಡಿ.ಆರ್. ಕೂಡ ನೆನೆಯುತ್ತಿದ್ದರು.

ವಿಮರ್ಶೆ ಸಾಹಿತ್ಯ ಕೃತಿಗಳ ಪರಾವಲಂಬಿಯೆಂಬ ಹಳೆಯ ನಂಬಿಕೆಯಲ್ಲೇ ಇರುವ ಕನ್ನಡ ಸಂಸ್ಕೃತಿಗೆ ವಿಮರ್ಶೆಯೆನ್ನುವುದು ಸ್ವತಂತ್ರ ಚಿಂತನಾಕ್ರಮವೆಂಬುದನ್ನು ತೋರಿಸಿಕೊಟ್ಟವರಲ್ಲಿ ಕೀರಂ ಹಾಗೂ ಡಿ.ಆರ್. ಮುಖ್ಯರು. ಆಳವಾದ ವಿಮರ್ಶೆಯಿಂದ ಓದುಗರು, ಸಾಹಿತಿಗಳು ಬೆಳೆಯುವ ಕ್ರಮವನ್ನು ಕನ್ನಡ ಸಾಹಿತ್ಯಲೋಕ ಸರಿಯಾಗಿ ಗುರುತಿಸಿದಂತಿಲ್ಲ. ಉದಾಹರಣೆಗೆ, ಡಿ.ಆರ್.   ‘ದಲಿತಕಾವ್ಯದಲ್ಲಿ ದಲಿತಲೋಕವೇ ಕಾಣೆಯಾಗಿದೆ’ ಎಂದು ಎಪ್ಪತ್ತರ ದಶಕದಲ್ಲಿ ಬರೆದ ನಂತರ ದಲಿತ ಕವಿಗಳು ತಂತಮ್ಮ ಅಥೆಂಟಿಕ್ ಲೋಕವನ್ನು ಹುಡುಕಿಕೊಳ್ಳಲೆತ್ನಿಸಿರಬಹುದು; ಅಥವಾ ಬೇಂದ್ರೆ, ಅಡಿಗರ ಬಗ್ಗೆ ಕೀರಂ ಮಾಡಿದ ಭಾಷಣಗಳನ್ನು ಕೇಳುತ್ತಲೇ ತಂತಮ್ಮ ಕವಿತೆಗಳ ದೋಷಗಳನ್ನು ತಿದ್ದಿಕೊಂಡ ಕವಿಗಳಿರಬಹುದು;

ಕೀರಂ ರಾತ್ರಿ ಸುಮ್ಮನೆ ಚೆಲ್ಲಿದ ಕಾವ್ಯದ ಸಾಲುಗಳ ಮೂಲಕವೇ ಯಾವುದು ಅಸಲಿ ಕಾವ್ಯ ಎಂಬುದನ್ನು ಕಲಿತ ಎಳೆಯರಿರಬಹುದು. ಶ್ರೇಷ್ಠವಾದದ್ದನ್ನು ತೋರಿಸಿಕೊಡುವ ಮೂಲಕವೇ ಒಂದು ಸಂಸ್ಕೃತಿಯನ್ನು ತಿದ್ದುವ, ಪೊರೆಯುವ ಈ ಕೆಲಸ ಅತ್ಯಂತ ಮಹತ್ವದ್ದು. ಜಾನಪದವಿರಲಿ, ಲಿಖಿತ ಸಾಹಿತ್ಯವಿರಲಿ, ಶ್ರೇಷ್ಠವಾದದ್ದರ ಜೊತೆ ಒಡನಾಡುತ್ತಾ ಅದ್ಭುತ ಕಾಣ್ಕೆಗಳನ್ನು ಮಂಡಿಸುವ ಶಕ್ತಿ ಇಬ್ಬರಲ್ಲೂ ಇತ್ತು. ಡಿ.ಆರ್. ಅವರ ಸಾಮಾಜಿಕ ಚಿಂತನೆಯ ವಿಸ್ತಾರ ಕೀರಂಗಿಂತ ವಿಶಾಲವಾಗಿತ್ತು; ಖಚಿತವಾಗಿತ್ತು. ದಲಿತಚಿಂತನೆ, ನಿರ್ವಸಾಹತೀಕರಣ, ಆಧುನಿಕ ಹಿಂಸೆಯ ರೂಪಗಳು, ದೇಶಿ ಲೋಕಗಳ ಕಣ್ಮರೆ ಇವೆಲ್ಲದರ ಬಗ್ಗೆ ಡಿ.ಆರ್. ಯೋಚಿಸಿದಷ್ಟು ಥಿಯರಿಟಿಕಲ್ ಆಗಿ ಕೀರಂ ಯೋಚಿಸದಿದ್ದರೂ ಈ ಎಲ್ಲವನ್ನೂ ಸಾಹಿತ್ಯದ ಮೂಲಕ ತಲುಪಲೆತ್ನಿಸುತ್ತಿದ್ದರು. 1997ರ ಒಂದು ಸಭೆಯಲ್ಲಿ ಡಿ.ಆರ್. ‘ಆಧುನಿಕ ಕನ್ನಡ ಕಾವ್ಯದ ತಮ್ಮ ಇಂದಿನ ಅಂತಿಮ ಆಯ್ಕೆಗಳು ಬೇಂದ್ರೆ, ಅಡಿಗ, ಕೆ.ಎಸ್.ನ., ಕಂಬಾರ’ ಎಂದಿದ್ದರು. ಕೀರಂಗೆ ಇಷ್ಟು ಖಚಿತ ಆಯ್ಕೆಗಳಿರಲಿಲ್ಲ.  ಅವರು ಆ ಪಟ್ಟಿಯನ್ನು ಮುಕ್ತವಾಗೇ ಇರಿಸಲೆತ್ನಿಸುತ್ತಿದ್ದರು.

ತೀವ್ರ ಬೌದ್ಧಿಕ ಗಳಿಗೆಗಳಂತೆಯೇ, ತಮಾಷೆ, ಗಾಸಿಪ್, ಪರನಿಂದೆ, ಮದ್ಯಪಾನ ಎಲ್ಲಕ್ಕೂ ವೇಳೆಯನ್ನಿಟ್ಟುಕೊಂಡಿದ್ದ ಡಿ.ಆರ್. ಹಾಗೂ ಕೀರಂ ಸದಾ ಜೀವಂತವಾಗಿರುವ ಕಲೆಯನ್ನೂ ನಮಗೆಲ್ಲ ಹೇಳಿಕೊಟ್ಟರು. ನನ್ನಂಥವರು ಜಗಳವಾಡುವುದಕ್ಕೂ ವಿರೋಧ ವ್ಯಕ್ತಪಡಿಸುವುದಕ್ಕೂ ಅವರ ಸಂಬಂಧದಲ್ಲಿ ಅವಕಾಶವಿತ್ತು. ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಬಲಾಢ್ಯವಾಗಿ ಹಬ್ಬಿಕೊಂಡ ವ್ಯಕ್ತಿಗಳನ್ನಾಗಲೀ ಲಾಬಿಗಳನ್ನಾಗಲೀ ‘ಪ್ರತಿಷ್ಠಿತ’ ಸಂಸ್ಥೆಗಳನ್ನಾಗಲೀ ಸ್ವಂತದ ಲಾಭ ನಷ್ಟಗಳಿಗೆ ಕೇರ್ ಮಾಡದೆ ಎದುರಾಗಬಲ್ಲ ನೈತಿಕ ಶಕ್ತಿ ಇಬ್ಬರಲ್ಲೂ ಇತ್ತು. ಅವರು ಇವತ್ತಿಗೂ ಜೀವಂತವಾಗಿರಲು ಅವರ ಪ್ರತಿಭೆಯಂತೆಯೇ ಅವರ ನಿರ್ಭೀತ ಬೌದ್ಧಿಕತೆ ಕೂಡ ಕಾರಣವಿರಬಹುದು.

ಕೊನೆ ಟಿಪ್ಪಣಿ: ಕನಸಿನಲ್ಲಿ ಡಿ.ಆರ್; ಮಂಪರಿನಲ್ಲಿ ಕೀರಂ
ಡಿ.ಆರ್. ಹಾಗೂ ಕೀರಂಗೆ ಪ್ರಿಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿಯವರ  ಕನಸಿನಲ್ಲಿ ಡಿ.ಆರ್. ಬಂದು ‘ಈ ಪುಸ್ತಕ ಓದಿದ್ದೀಯ ಗುರೂ?’ ಎಂದು ಹೆದರಿಸಿದ್ದರಂತೆ. ಈ ಕನಸು ಡಿ.ಆರ್. ಓದಿಕೊಂಡಿದ್ದ ಪುಸ್ತಕಗಳ ಬಗ್ಗೆ ಅವರ ಸಮಕಾಲೀನರಲ್ಲಿದ್ದ ದಿಗಿಲನ್ನೂ ಸೂಚಿಸುತ್ತಿರಬಹುದು! ಇನ್ನೊಂದು ಘಟನೆ: ಒಂದು ಮದ್ಯರಾತ್ರಿಯ ಮಂಪರಿನಲ್ಲಿ ಕೀರಂ, ಕೃಷ್ಣಮೂರ್ತಿಯವರಿಗೆ ‘ನಾನೀಗ ನಿನಗೆ ಕುಮಾರವ್ಯಾಸನ್ನ  ಓದಬೇಕು’ ಎಂದರು. ‘ಸರಿ’ ಎಂದು ಕೃಷ್ಣಮೂರ್ತಿ ಕೂತರು. ಕೀರಂ ಓದುತ್ತಲೇ ಹೋದರು. ನಡುವೆ ನಿದ್ದೆಗೆ ಜಾರಿದ ಕೃಷ್ಣಮೂರ್ತಿ ಬೆಳಗಾಗೆದ್ದು ನೋಡಿದರೆ ಕೀರಂ ಕುಮಾರವ್ಯಾಸನನ್ನು ಓದುತ್ತಲೇ ಇದ್ದರು. ಹಾಗೆ ಮೈಮರೆತು ಓದದಿದ್ದರೆ ಅಷ್ಟೊಂದು ಪಠ್ಯಗಳು ಕೀರಂ ಎದೆಯಲ್ಲಿ ಇರುತ್ತಿರಲಿಲ್ಲ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT