ಭಾನುವಾರ, ಮೇ 9, 2021
25 °C

ಆಕಾಶದ ಕೆಳಗೇ ನಿಂತಿರುವ ಅಂಬೇಡ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊನ್ನೆ ಡಿಸೆಂಬರ್ 6ರಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಸರ್ಕಾರಗಳು, ಸಾವಿರಾರು ದಲಿತ ಸಂಘಟನೆಗಳು ಹಾಗೂ ಇನ್ನಿತರ ವೇದಿಕೆಗಳು ಅಂಬೇಡ್ಕರ್ ಅವರನ್ನು ನೆನೆದವು. ಇದು ಇತಿಹಾಸವನ್ನು ನೆನೆಯುವ ಒಂದು ಕ್ರಮವಾದರೆ, ಅದೇ ದಿನ ಈಚಿನ ಇತಿಹಾಸದ ಗಾಯವೊಂದನ್ನು ನೆನೆಯುವ ಎರಡು ವಿಭಿನ್ನ ಪ್ರತಿಕ್ರಿಯೆಗಳೂ ಕಂಡವು: ಡಿಸೆಂಬರ್ ಆರರಂದೇ ಬಾಬರಿ ಮಸೀದಿಯ ಮೇಲಿನ ಹಲ್ಲೆಯಿಂದ ಗಾಸಿಗೊಂಡವರು ವ್ಯಕ್ತಪಡಿಸಿದ ವಿರೋಧದ ಸಭೆಯೂ, ಈ ಹಲ್ಲೆಯನ್ನು ಬೆಂಬಲಿಸಿ ಮೆರೆದವರ ಸಭೆಯೂ ನಡೆದವು.ಅದೇ ದಿನ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅತಿ ಪ್ರಚಾರದ ‘ಬೆಂಗಳೂರು ಸಾಹಿತ್ಯೋತ್ಸವ’ದಲ್ಲಿ ಅಂಬೇಡ್ಕರ್ ಪ್ರಸ್ತಾಪವೆಲ್ಲಾದರೂ ಇದೆಯೇ ಎಂದು ವರದಿಗಳಲ್ಲಿ ಹುಡುಕಿದೆ; ಅಲ್ಲಿದ್ದ ಮಿತ್ರರನ್ನೂ ಕೇಳಿದೆ. ಅಲ್ಲಿ ಅಂಬೇಡ್ಕರ್ ಪ್ರಸ್ತಾಪವೇ ಇದ್ದಂತಿರಲಿಲ್ಲ. ದೇಶದ ಇವತ್ತಿನ ಸಮಸ್ಯೆಗಳನ್ನು ಚರ್ಚಿಸುತ್ತಿದ್ದ ಬುದ್ಧಿಜೀವಿಗಳಿಗೆ ಅಂಬೇಡ್ಕರ್ ಪರಿನಿರ್ವಾಣದ ದಿನ ಕೂಡ ಅಂಬೇಡ್ಕರ್ ನೆನಪಾಗಲಿಲ್ಲವಲ್ಲ ಎನ್ನಿಸಿ ಈ ಹುಸಿ ‘ವಿಸ್ಮೃತಿ’ ವಿಚಿತ್ರವೆನ್ನಿಸಿತು.23 ವರ್ಷಗಳ ಕೆಳಗೆ ಬಾಬರಿ ಮಸೀದಿಯ ಮೇಲಿನ ಹಲ್ಲೆಗೆ ಡಿಸೆಂಬರ್ ಆರನ್ನು ಆಯ್ಕೆ ಮಾಡಿದ್ದರ ಹಿಂದೆ  ಅಂಬೇಡ್ಕರ್ ಪರಿನಿರ್ವಾಣ ದಿನದ ಸಾಂಕೇತಿಕ ಮಹತ್ವವನ್ನು ಹಿಮ್ಮೆಟ್ಟಿಸಿ, ಅಂಬೇಡ್ಕರ್ ನೆನಪಿಗೆ ವಿಸ್ಮೃತಿಯನ್ನುಂಟು ಮಾಡುವ ಹುನ್ನಾರವೂ ಸೇರಿರಬಹುದೆಂಬ ಅನುಮಾನವಿತ್ತು. ಅದು ನಿಜವೆಂಬುದು ಬರಬರುತ್ತಾ ಎಲ್ಲರಿಗೂ ಸ್ಪಷ್ಟವಾದಂತಿದೆ. ಬುದ್ಧ ತತ್ವದ ಮಹತ್ವವೇ ಗೊತ್ತಿರದ ಸಿನಿಕ ವಿಜ್ಞಾನಿಗಳು, ಬುದ್ಧವಿರೋಧಿಗಳಾದ ಮೂಲಭೂತವಾದಿಗಳು ಅಣುಸ್ಫೋಟಕ್ಕೆ ‘ಬುದ್ಧ ಸ್ಮೈಲ್ಸ್’ ಎಂಬ ಗುಪ್ತನಾಮವನ್ನಿಟ್ಟುಕೊಂಡದ್ದನ್ನೂ ನೆನೆಸಿಕೊಂಡರೆ ಚರಿತ್ರೆಯುದ್ದಕ್ಕೂ ನಡೆದಿರುವ ಇಂಥ ‘ಕೈಕೆಲಸ’ಗಳ ಹಿಂದೆ ಹಲಬಗೆಯ ಸಂಚುಗಳಿರುತ್ತವೆ ಎಂಬುದು ಗೊತ್ತಾಗುತ್ತದೆ.ಈ ಕುರಿತು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಖಚಿತವಾಗಿ ಹೇಳಿದ್ದರು: ‘ಬಾಬ್ರಿ ಮಸೀದಿ ಕೆಡವೋಕೆ ಡಿಸೆಂಬರ್ ಆರನೇ ತಾರೀಕು ನಿಗದಿ ಆಗಿದ್ದು ವಾಷಿಂಗ್ಟನ್‌ನಲ್ಲಿ. ಆ ಹೊತ್ತಿಗೆ ಒಂದು ಮುಖ್ಯವಾದ ಸಭೆ ಜಿನಿವಾದಲ್ಲಿ ನಡೀತಾ ಇತ್ತು. ದೇಶದ ಜನರ ಗಮನ ಆ ಕಡೆ ಹೋಗಬಾರದು ಅನ್ನೋ ದೃಷ್ಟಿಯಿಂದಾನೇ ಆ ತಾರೀಕನ್ನು ನಿಗದಿ ಮಾಡಿದ್ದು. ಅಂತರರಾಷ್ಟ್ರೀಯವಾಗಿ ನಡೆಯುವ ಕುತಂತ್ರಗಳು ಇವೆಲ್ಲ’. ಅಂದರೆ, ಡಿಸೆಂಬರ್ ಆರರ ಅಂಬೇಡ್ಕರ್ ನೆನಪಿನ ದಿನದ ಮಹತ್ವವನ್ನು ಮಸುಕಾಗಿಸುವಲ್ಲಿ ಮತೀಯವಾದಿಗಳ ಜೊತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಜಾಗತೀಕರಣದ ಶಕ್ತಿಗಳ ಕುತಂತ್ರವೂ ಸೇರಿತ್ತು.ಈ ಥರದ ಶಕ್ತಿಗಳು ಅಂಬೇಡ್ಕರ್ ಪ್ರಭಾವವನ್ನು ಮಸುಕಾಗಿಸಲೆತ್ನಿಸುತ್ತಿದ್ದರೂ, ಅಂಬೇಡ್ಕರ್ ಮಹತ್ವ ಬೆಳೆಯುತ್ತಲೇ ಸಾಗುತ್ತಿದೆ. ಇಪ್ಪತ್ತನೆಯ ಶತಮಾನದ ಐದು ದಶಕಗಳು ಹಾಗೂ ಇಪ್ಪತ್ತೊಂದನೆಯ ಶತಮಾನದಲ್ಲೂ ಇಂಡಿಯಾದ ಅತ್ಯಂತ ಪ್ರಭಾವಶಾಲಿ ಚಿಂತಕರಾಗಿ ಅಂಬೇಡ್ಕರ್ ವಿಕಾಸಗೊಂಡಿದ್ದಾರೆ. ಇವತ್ತು ಇಂಡಿಯಾದಲ್ಲಿ ಅಂಬೇಡ್ಕರ್ ಎಂಥ ಮಹತ್ವದ ಸ್ಥಾನದಲ್ಲಿದ್ದಾರೆಂದರೆ ಅಂಬೇಡ್ಕರ್ ಅವರನ್ನು ಒಲ್ಲದ ಮತೀಯವಾದಿಗಳೂ ಅವರ ಪ್ರತಿಮೆಯನ್ನು ವಿದೇಶದಲ್ಲಿ ಸ್ಥಾಪಿಸಬೇಕಾಗುತ್ತದೆ; ಅಂಬೇಡ್ಕರ್ ಹುಟ್ಟುಹಬ್ಬದ ದಿನ, ಪರಿನಿರ್ವಾಣ ದಿನವಾದರೂ ಅವರನ್ನು ನೆನೆಯಬೇಕಾಗುತ್ತದೆ.ಮೊನ್ನೆ ಡಿಸೆಂಬರ್ ಆರರಂದು ಕುತೂಹಲಕ್ಕೆ ಯಾರು ಯಾವ ಅಂಬೇಡ್ಕರರನ್ನು ನೆನೆದರು ಎಂದು ಅನೇಕ ಪತ್ರಿಕೆಗಳನ್ನು ಗಮನಿಸಿದೆ.  ಬಹುತೇಕ ನಾಯಕರು ಅಂಬೇಡ್ಕರರನ್ನು ನೆಪವಾಗಿಟ್ಟುಕೊಂಡು ತಾವು ಯಾವುದನ್ನು ‘ಸಮಕಾಲೀನ’ ಎಂದು ತಿಳಿದಿದ್ದಾರೋ ಅಂಥ ವಿಷಯಗಳನ್ನು ಪ್ರಸ್ತಾಪಿಸಿದ್ದರು. ದೊಡ್ಡ ವ್ಯಕ್ತಿತ್ವಗಳಲ್ಲಿ ನಾವು ಏನನ್ನು ನೆನೆಯುತ್ತೇವೆ ಎಂಬುದು ಯಾವುದನ್ನು ಬಿಂಬಿಸಲು ಯತ್ನಿಸುತ್ತೇವೆ ಎಂಬುದನ್ನೂ ಅವಲಂಬಿಸಿರುತ್ತದೆ. ಅವತ್ತು ವರದಿಯಾಗಿರುವ ಭಾಷಣಗಳನ್ನು ಗಮನಿಸಿದರೆ, ಅಂಬೇಡ್ಕರ್ ವ್ಯಕ್ತಿತ್ವದ ಬಹುಮುಖ್ಯ ಅಂಶಗಳನ್ನು ಅನೇಕರು ನೆನೆದಂತೆ ತೋರಲಿಲ್ಲ. ಈ ಬಗ್ಗೆ ಯೋಚಿಸುತ್ತಿದ್ದಂತೆ ಬಾಬಾಸಾಹೇಬರ ಹಲವು ಚಿತ್ರಗಳು ತೇಲಿ ಬಂದವು: ಸ್ವಂತ ಅವಮಾನದ ಮೂಲಕ  ಸಮುದಾಯಗಳ ಅವಮಾನಗಳ ಚರಿತ್ರೆ-ವರ್ತಮಾನಗಳನ್ನು ಅಧ್ಯಯನ ಮಾಡಿದ ಚಿಂತಕ; ಕೊಲಂ ಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ‘ಎಲ್ಲರಿಗಿಂ ತಲೂ ಮೊದಲು ಬಂದು ಎಲ್ಲರೂ ಹೋದ ನಂತರ ಹೋಗುತ್ತಿದ್ದ’ ವಿದ್ಯಾರ್ಥಿ– ವಿದ್ವಾಂಸ; ಭಾರತೀಯ ಸಮಾ ಜದ ಹತ್ತಾರು ಸಮಸ್ಯೆಗಳ ಬಗ್ಗೆ ಇಂಗ್ಲಿಷ್ ಹಾಗೂ ಮರಾಠಿಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳ ವಿಶ್ಲೇಷಣೆ ಬರೆದ ಲೇಖಕ; ಸಮಾನತೆಯ ಹೋರಾಟಗಳನ್ನು ರೂಪಿಸಿದ ಜನನಾಯಕ; ಚಿಂತಕನೊಬ್ಬ ಸಮಾ ಜದ ರೋಗಮೂಲಗಳನ್ನು ವಿಶ್ಲೇಷಿಸಿದರಷ್ಟೇ ಸಾಲದು, ಪರಿಹಾರಗಳನ್ನೂ ಹುಡುಕಬೇಕೆಂದು ಹೊರಟ ಡಾಕ್ಟರ್; ಪರಿಹಾರ ಸೂಚಿಸಿದರಷ್ಟೇ ಸಾಲದು, ಅದನ್ನು ಬದಲಾಯಿ ಸಲೂಬೇಕು ಎಂಬ ಗುರಿ ಹೊತ್ತು  ಜಡ ಭಾರತದ ರಚನೆಯನ್ನು ಬದಲಿಸಿದ ಭಾರತೀಯ ಸಂವಿಧಾನದ ಸೃಷ್ಟಿಕರ್ತ; ಮೊಗಳ್ಳಿ ಗಣೇಶ್ ಹೇಳಿದಂತೆ ‘ಪ್ರತಿರೋಧದ ಚರಿತ್ರೆಯನ್ನು ರೂಪಿಸಿದ ಚರಿತ್ರಕಾರ; ರೇಸ್‌, ಕ್ಯಾಸ್ಟ್, ಟ್ರೈಬ್‌ಗಳನ್ನು ಆಳವಾಗಿ ಗ್ರಹಿಸಿದ ಸಮಾಜ ವಿಜ್ಞಾನಿ’; 20ನೇ ಶತಮಾನದಲ್ಲಿ ಬೌದ್ಧ ಧರ್ಮವನ್ನು ಮರುಜೀವ ಗೊಳಿಸಿದ ‘ಮಹಾ ಬೌದ್ಧ ಬಿಕ್ಷು’; ಇಷ್ಟೆಲ್ಲದರ ನಡುವೆ ಎಲ್ಲೋ ಕೆಲ ಗಳಿಗೆ ವಯೊಲಿನ್ ನುಡಿಸುತ್ತಾ, ಕಬೀರ್ ಭಜನೆ ಹಾಡುತ್ತಾ ಎಲ್ಲವನ್ನೂ ಮೀರಲೆತ್ನಿಸಿದ ಕಲಾವಿದ.ಅಂಬೇಡ್ಕರ್ ವ್ಯಕ್ತಿತ್ವದ ಅನೇಕ ಮುಖಗಳಲ್ಲಿ ಕೆಲವನ್ನಾದರೂ ಗ್ರಹಿಸಿ ಜನರಿಗೆ ಹೇಳುವ ಕೆಲಸವನ್ನು ಮಾಡುವ ಗೋಜಿಗೇ ನಮ್ಮ ಅನೇಕ ಸಾರ್ವಜನಿಕ ಭಾಷಣಕಾರರು ಹೋಗದಿರುವ ಪ್ರವೃತ್ತಿ ಹೆಚ್ಚತೊಡಗಿದೆ. ಹಿಂದುಳಿದ ವರ್ಗಗಳ ಬಹುತೇಕ ನಾಯಕರು ಅಂಬೇಡ್ಕರ್ ಹಿಂದುಳಿದ ವರ್ಗಗಳಿಗೂ ವಿಮೋಚನೆಯ ಹಾದಿ ತೋರಿಸಿದವರು ಎಂಬುದನ್ನು ಈತನಕ ತಮ್ಮ ಅನುಯಾಯಿಗಳಿಗೆ ಮನವರಿಕೆ ಮಾಡಿಕೊಟ್ಟಿಲ್ಲ.ಅಂಬೇಡ್ಕರ್ ಹಾಗೂ ಅಂಬೇಡ್ಕರ್‌ವಾದಿಗಳು ರೂಪಿಸಿರುವ ಜಾತ್ಯತೀತ ನೋಟಗಳಿಂದಾಗಿ ತಮ್ಮ ಸಮುದಾಯಗಳಿಗೆ ಕೊಂಚವಾದರೂ ಭದ್ರತೆ ದೊರೆತಿರುವುದನ್ನು ಮುಸ್ಲಿಂ ಹಾಗೂ ಕ್ರೈಸ್ತ ನಾಯಕರು ತಂತಮ್ಮ ಸಮುದಾಯಗಳಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಂತಿಲ್ಲ. ಕನ್ನಡದ ದಲಿತ ಸಾಹಿತ್ಯ ಹಾಗೂ ಬಂಡಾಯ ಸಾಹಿತ್ಯಗಳಲ್ಲಿ ವ್ಯಾಪಕವಾಗಿ ಮೂಡಿಬಂದ ಅಂಬೇಡ್ಕರ್ ಚಿಂತನಾಕ್ರಮದಿಂದ ಕನ್ನಡ ಸಾಹಿತ್ಯ ಹೊಸ ಕಣ್ಣು ಪಡೆದಿರುವ ಬಗ್ಗೆ ಹೊಸ ತಲೆಮಾರಿನ ಸಾಹಿತಿಗಳು ಆಳವಾಗಿ ಚಿಂತಿಸಿ ಬರೆಯುತ್ತಿಲ್ಲ. ಕೆಲವರನ್ನು ಬಿಟ್ಟರೆ, ಕನ್ನಡದ ಸ್ತ್ರೀವಾದಿಗಳು ಕೂಡ ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಆಳವಾಗಿ ಚರ್ಚಿಸಿದಂತಿಲ್ಲ.ವಿಶ್ವವಿದ್ಯಾಲಯಗಳ  ಸಂಶೋಧನೆಗಳಲ್ಲಿ ಅಂಬೇಡ್ಕರ್ ಸಂಶೋಧನಾ ಕ್ರಮವನ್ನು ಗಂಭೀರವಾಗಿ ಅಧ್ಯಯನ ಮಾಡಿ ಅದನ್ನು ಇವತ್ತಿನ ಅಗತ್ಯಗಳಿಗೆ ತಕ್ಕಂತೆ ವಿಸ್ತೃತವಾಗಿ ಬೆಳೆಸುವ ಕೆಲಸ ಆದಂತಿಲ್ಲ. ಹಿಂದೆ ಪ್ರೊ. ಮ.ನ.ಜವರಯ್ಯನವರು ಅಂಬೇಡ್ಕರ್ ಕೃತಿಗಳನ್ನು ಅಧ್ಯಯನ ಮಾಡಿ ಬರೆದ ಪುಸ್ತಕಗಳನ್ನು ಬಿಟ್ಟರೆ, ಅಂಬೇಡ್ಕರ್ ಸಮಗ್ರ ಕೃತಿಗಳ ಅಧ್ಯಯನ ಕನ್ನಡದಲ್ಲಿ ನಡೆದಿರುವುದು ನನ್ನ ಕಣ್ಣಿಗೆ ಬಿದ್ದಿಲ್ಲ. ಅದರಲ್ಲೂ ಕರ್ನಾಟಕ ಸರ್ಕಾರ ಅಂಬೇಡ್ಕರ್ ಸಂಪುಟಗಳ ಕನ್ನಡ ಆವೃತ್ತಿಗಳನ್ನು ನಿರಂತರವಾಗಿ ಪ್ರಕಟಿಸುತ್ತಿರುವಾಗ ಈ ‘ಸಂಶೋಧನಾಸೋಮಾರಿತನ’ ಅರ್ಥಹೀನ.ಇದೊಂದು ಆರೋಪಪಟ್ಟಿಯೆಂದು ಓದುಗರು ಭಾವಿಸಬಾರದು. ಶ್ರೇಷ್ಠ ಚಿಂತಕರನ್ನು ನೆನೆಯುವುದು ಯಾಂತ್ರಿಕ ಆಚರಣೆಯಾಗದೆ, ನಮ್ಮ ಚಿಂತಕ-ಚಿಂತಕಿಯರು ದೊಡ್ಡ ಮಟ್ಟದಲ್ಲಿ ಇಂಥವರ ಚಿಂತನೆಗಳನ್ನು ಸಮುದಾಯಕ್ಕೆ ವಿವರಿಸುವ, ವಿಸ್ತರಿಸುವ ಕೆಲಸ ಶುರುವಾಗಬೇಕು ಎಂಬುದಷ್ಟೇ ಈ ಬರಹದ ಆಶಯ. ಹಾಗೆಯೇ, ಡಿಸೆಂಬರ್ ಆರನ್ನು ಕಪ್ಪು ದಿನವನ್ನಾಗಿ ಆಚರಿಸುವವರು ತಮ್ಮ ಆಲೋಚನೆಯ ದಿಕ್ಕು ಬದಲಿಸಿ, ಅಂಬೇಡ್ಕರ್ ನೆನಪಿನ ದಿನವನ್ನು ಆಚರಿಸಲಾರಂಭಿಸಿದರೆ ದೇಶದಾದ್ಯಂತ ಹೊಸ ಸಂಚಲನ ಉಂಟಾಗಬಲ್ಲದು. ಬಾಬರಿ ಮಸೀದಿಯ ಮೇಲಿನ ಹಲ್ಲೆಯನ್ನು ವೈಭವೀಕರಿಸುತ್ತಾ ಕೋಮು ದಳ್ಳುರಿ ಹಬ್ಬಿಸುವವರು ಕೂಡ ಅಂಬೇಡ್ಕರ್ ನೆನಪಿನ ದಿನವನ್ನು ಆಚರಿಸಿದರೆ ಅವರ ಮಾನಸಿಕ ಕಾಯಿಲೆಗಳು ವಾಸಿಯಾಗಬಲ್ಲವು.ಇದೇ ಸಮಯದಲ್ಲಿ ಬಾಬರಿ ಮಸೀದಿವಾದಿಗಳು ಹಾಗೂ ರಾಮಜನ್ಮಭೂಮಿವಾದಿಗಳಿಬ್ಬರೂ ದೇವನೂರ ಮಹಾದೇವರ ‘ನನ್ನ ದೇವರು’ ಎಂಬ ಪುಟ್ಟ ಬರಹವನ್ನು ವ್ಯವಧಾನದಿಂದ ಓದಬೇಕು. ಈ ಬರಹ ಕವಿ ಸಿದ್ಧಲಿಂಗಯ್ಯನವರು ಹೇಳಿದ ಮನೆಮಂಚಮ್ಮನ ಘಟನೆಯನ್ನು ವಿಸ್ತರಿಸುತ್ತದೆ. ತನಗೆ ಗುಡಿ ಕಟ್ಟಲು ಹೊರಟಿರುವ ಭಕ್ತರನ್ನು ಮಂಚಮ್ಮ ಕೇಳುತ್ತಾಳೆ: ‘ಓಹೋ! ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲ ಮನೆ ಉಂಟಾ ನನ್ನ ಮಕ್ಕಳಾ?’ ‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ. ‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’–ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ! ಮಹಾದೇವ ಬರೆಯುತ್ತಾರೆ: ‘ಈ ರೀತಿಯಲ್ಲಿ ಛಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ’.ಡಿಸೆಂಬರ್ ಆರರಂದು ಮಸೀದಿ ಕೆಡವಿಸಿದ ರಾಜಕಾರಣಿಗಳು, ಹಿಂದೆ ನಿಂತು ಸಂಚು ಮಾಡಿದ ಪುರೋಹಿತರು;  ಮಂದಿರ ಕಟ್ಟಲು ಕೋಟ್ಯಂತರ ಹಣ ಎತ್ತಿ ನುಂಗಿದವರು, ಹಣ ಎತ್ತುತ್ತಲೇ ಇರುವವರು; ‘ಬುದ್ಧ ಸ್ಮೈಲ್ಸ್’ ಎಂದು ಬುದ್ಧನನ್ನು ಹಿಂಸೆಯ ಸಂಕೇತವಾಗಿಸಲೆತ್ನಿಸಿದ ವಿಜ್ಞಾನಿಗಳು- ಈ ಎಲ್ಲರೂ ಮನೆ ಮಂಚಮ್ಮನ ಕತೆಯಿಂದಲೂ ಮಹಾದೇವ ಮಂಡಿಸುತ್ತಿರುವ ಬುದ್ಧನಿಂದಲೂ  ಪುಟ್ಟ ಪಾಠ ಕಲಿತು, ಸೂರಿಲ್ಲದ ಲಕ್ಷಾಂತರ ಜನರಿಗೆ ಸೂರು ಒದಗಿಸುವ ಕೆಲಸಕ್ಕೆ  ಮುಂದಾದರೆ ಮಂದಿರ-ಮಸೀದಿಗಳ ಗಲಾಟೆಯಿಂದ ದೇಶವನ್ನು ಪಾರು ಮಾಡಬಹುದು; ಇವತ್ತಿಗೂ ಆಕಾಶದ ಕೆಳಗೇ ನಿಂತಿರುವ ಅಂಬೇಡ್ಕರ್  ದೇಶದ ಸೂರಿಲ್ಲದ ಜನರಿಗೆ ಸೂರು ಒದಗಿಸಲು ಮಾಡಿದ ಚಿಂತನೆ, ಕಾರ್ಯಕ್ರಮಗಳನ್ನು ವೇಗವಾಗಿ ಜಾರಿಗೊಳಿಸುವ ಯೋಜನೆಗಳನ್ನೂ ರೂಪಿಸಬಹುದು.‘ಅಂಬೇಡ್ಕರ್ ಅವರ ಕನಸನ್ನು ಸಾಕಾರಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿಯೇ ತೀರುತ್ತೇವೆ’ ಎಂದು ಪ್ರಧಾನಿ ಹೇಳಿದ್ದಾರೆ; ಅದನ್ನು ಅವರೂ ಅವರ ಸರ್ಕಾರವೂ ಗಂಭೀರವಾಗಿ ತೆಗೆದುಕೊಳ್ಳಲೆಂದು ಆಶಿಸೋಣ. ಜೊತೆಗೆ, ಅಂಬೇಡ್ಕರ್ ತಮ್ಮ ಕೊನೆಯ ಪುಸ್ತಕದಲ್ಲಿ ವಿವರಿಸಿದ ಬುದ್ಧ ಧಮ್ಮದ ಆಧುನಿಕ ರೂಪ ಇಂದಿನ ಇಂಡಿಯಾಕ್ಕೆ ಹಿಂದೆಂದಿಗಿಂತ ಹೆಚ್ಚಿಗೆ ಬೇಕಾಗಿರುವುದನ್ನೂ ಅರಿತರೆ ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದಿಗಳು ಸದಾ ಹಿಂದೆ ನೋಡುವುದನ್ನು ಬಿಟ್ಟು ಇನ್ನಾದರೂ ಭವಿಷ್ಯದತ್ತ ನೋಡಬಹುದೆನ್ನಿಸುತ್ತದೆ.    

                           

ಕೊನೆ ಟಿಪ್ಪಣಿ: ಕೊನೆಯ ರಾತ್ರಿಯ ಸಂದೇಶ

1956ರ ಡಿಸೆಂಬರ್ 5. ಆ ಸಂಜೆ ಅಂಬೇಡ್ಕರ್ ಉದ್ವಿಗ್ನರಾಗಿದ್ದರು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಜೈನ ಸಮಾಜದ ನಾಯಕರು ಬಂದು ‘ಜೈನ್ ಔರ್ ಬುದ್ಧ’ ಪುಸ್ತಕ ಕೊಟ್ಟು ಅವರನ್ನು ಜೈನಸಭೆಯೊಂದಕ್ಕೆ ಆಹ್ವಾನಿಸಿ ಹೋದರು. ಆನಂತರ,  ಅಂಬೇಡ್ಕರ್ ದಣಿದ ತಮ್ಮ ಕಾಲನ್ನೊತ್ತುತ್ತಿದ್ದ ಶಿಷ್ಯ ನಾನಕಚಂದ್ ರತ್ತುವನ್ನು ‘ತಲೆಗೆ ಎಣ್ಣೆ ಹಚ್ಚು’ ಎಂದರು. ಎಣ್ಣೆ ಹಚ್ಚಿದ ಮೇಲೆ ಹಾಯೆನ್ನಿಸಿದಂತಾಗಿ, ಅಂಬೇಡ್ಕರ್ ಕಂಠದಿಂದ ಮೆಲುವಾಗಿ ಹೊರಟ ‘ಬುದ್ಧಂ ಶರಣಂ ಗಚ್ಛಾಮಿ’ ಬರಬರುತ್ತಾ ಗಟ್ಟಿಯಾಗಿ ಕೇಳತೊಡಗಿತು.ಅವರ ಬಲಗೈ ಬೆರಳುಗಳು ಸೋಫಾದ ಮೇಲೆ ತಾಳ ಹಾಕುತ್ತಿದ್ದವು. ಅವರ ಇಚ್ಛೆಯಂತೆ ರತ್ತು ರೇಡಿಯೊಗ್ರಾಮಿನಲ್ಲಿ ‘ಬುದ್ಧಂ ಶರಣಂ ಗಚ್ಛಾಮಿ’ ಹಾಡು ಹಾಕಿದ. ಅಂಬೇಡ್ಕರ್ ಆ ಹಾಡಿಗೆ ದನಿಗೂಡಿಸಿದರು. ನಂತರ ಕಪಾಟುಗಳಿಂದ ಹಲವು ಪುಸ್ತಕಗಳನ್ನು ತೆಗೆದುಕೊಂಡರು. ಊಟವಾದ ನಂತರ ಅವರ ಬಾಯಿಂದ ‘ಚಲ್ ಕಬೀರ್ ತೇರಾ ಭವಸಾಗರ್ ದೇರಾ’ ಹಾಡು ತೇಲಿಬರುತ್ತಿತ್ತು.11.15ರ ಹೊತ್ತಿಗೆ ಮನೆಗೆ ಹೊರಟ ರತ್ತು ಹೊರಬಾಗಿಲು ದಾಟುವಷ್ಟರಲ್ಲೇ ಮತ್ತೆ ಕರೆ ಬಂತು. ರತ್ತುವಿನಿಂದ ‘ಬುದ್ಧ ಅಂಡ್ ಹಿಸ್ ಧಮ್ಮ’ ಪುಸ್ತಕದ ಮುನ್ನುಡಿಯ ಟೈಪಾದ ಹಾಳೆಗಳನ್ನೂ, ಬರೆದಿಟ್ಟಿದ್ದ ಪತ್ರಗಳನ್ನೂ ತರಿಸಿಕೊಂಡ ಅಂಬೇಡ್ಕರ್ ನಾಳೆ ಅವನ್ನೆಲ್ಲಾ ಕಳಿಸಬೇಕಾಗಿರುವುದರಿಂದ ರಾತ್ರಿಯೇ ಓದಿ ಮುಗಿಸುತ್ತೇನೆಂದು ಹೇಳಿದರು.ಡಿಸೆಂಬರ್ 6ರ ಬೆಳಗ್ಗೆ ಪತ್ನಿ ಸವಿತಾ ರೂಮು ಹೊಕ್ಕಾಗ ಬಾಬಾಸಾಹೇಬರು ನಿಶ್ಚಲವಾಗಿದ್ದರು. ಅವರ ಕೊನೆಯ ರಾತ್ರಿಯ ಕರ್ತವ್ಯ ಪ್ರಜ್ಞೆ  ನಮ್ಮೆಲ್ಲರ  ಕರ್ತವ್ಯಪ್ರಜ್ಞೆಯನ್ನೂ ಸದಾ ಎಚ್ಚರಿಸುತ್ತಿರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.