ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲಗೂರಿನಲ್ಲಿ ಭಾರತಾಂಬೆ ತೇರು

Last Updated 9 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ತೇರು ಅಥವಾ ರಥದ ಮೇಲೆ ತಳಿರು ತೋರಣಗಳ ವಿನ್ಯಾಸದ ಜತೆಗೆ ಸಾಲು ಸಾಲು ದೇವರ ಪ್ರತಿಮೆಗಳನ್ನು ಕೆತ್ತಿಸಿರುತ್ತಾರೆ. ಆದರೆ, ಈ ಬೆಲಗೂರಿನಲ್ಲಿ ಇತ್ತೀಚೆಗೆ ಲೋಕಾರ್ಪಣೆಯಾದ ರಥದಲ್ಲಿ ಅಡಿಯಿಂದ ಮುಡಿಯವರೆಗೆ, ದೇಶಕ್ಕಾಗಿ ಜೀವ– ಜೀವನವನ್ನೇ ಮುಡುಪಾಗಿಟ್ಟವರ ಶಿಲ್ಪಗಳನ್ನು ಕೆತ್ತಿಸಿದ್ದಾರೆ.

ಹೌದು, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೆಲಗೂರಿನ ವೀರಪ್ರತಾಪ ಆಂಜನೇಯ ಮತ್ತು ಲಕ್ಷ್ಮಿನಾರಾಯಣ ಸ್ವಾಮಿ ದೇವರುಗಳ ಉತ್ಸವಕ್ಕಾಗಿ ಸಿದ್ಧಪಡಿಸಿರುವ ಬೃಹತ್‌ ರಥದಲ್ಲಿ ಭಾರತಾಂಬೆ ಸೇರಿದಂತೆ, ರಾಷ್ಟ್ರೀಯ ನಾಯಕರು, ಚಿಂತಕರು, ಕವಿ ಸಾರ್ವಭೌಮರು, ವಿದ್ವಾಂಸರು, ಅವಧೂತರು, ಎಂಜಿನಿಯರ್‌, ಕಲಾವಿದರು, ಶಿವಶರಣರು, ದಾಸವರೇಣ್ಯರು, ಸಾಧು–ಸಂತರು.. ಸೇರಿದಂತೆ ಅಂದಾಜು 221 ಹೆಚ್ಚು ಗಣ್ಯರ ಉಬ್ಬುಶಿಲ್ಪಗಳಿವೆ.

ನಲ್ವತ್ತು ಶಿಲ್ಪಿಗಳ ಸೇವೆ

ಚಕ್ರದ ಮೇಲ್ಭಾಗದಿಂದ ಹಿಡಿದು, ನಡು ಭಾಗದ ಸುತ್ತ ಹಾಗೂ ಶಿಖರದವರೆಗೂ ಈ ಶಿಲ್ಪಗಳನ್ನು ಕೆತ್ತಿಸಿದ್ದಾರೆ. ಮಾರುತಿಪೀಠದ ಅವಧೂತ ಬಿಂದುಮಾಧವ ಶರ್ಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಶಿಲ್ಪಿ ಉಡುಪಿಯ ರಾಜಶೇಖರ್‌ ಹೆಬ್ಬಾರ್‌, 40 ಮಂದಿ ಶಿಲ್ಪಿಗಳೊಂದಿಗೆ ರಥ ನಿರ್ಮಾಣ ಮಾಡಿದ್ದಾರೆ. 59 ಅಡಿ ಎತ್ತರ, 21 ಅಡಿ ಅಗಲ, 75 ಸಾವಿರ ಕೆ.ಜಿ ತೂಕವಿರುವ ಈ ರಥವನ್ನು ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಿ ಮಾಡಲಾಗಿದೆ. ರಥ ನಿರ್ಮಾಣಕ್ಕೆ ತಗುಲಿರುವ ವೆಚ್ಚ ₹ 3.5 ಕೋಟಿ.

‘ದೇವರನ್ನು ನಾವು ಮನುಷ್ಯನಲ್ಲೇ ಕಾಣಬೇಕು. ಸಾಯುವರಾರೂ ದೇವರಾಗುವುದಿಲ್ಲ. ಸತ್ತು ಬದುಕಿದವನು ಮಾತ್ರ ದೇವರಾಗುತ್ತಾನೆ. ನಮ್ಮನ್ನು ನಾದಲೋಕಕ್ಕೆ ಕರೆದೊಯ್ದು ನಮ್ಮಲ್ಲಿ ಕರ್ಣಾನಂದ, ಆತ್ಮಾನಂದ, ಬ್ರಹ್ಮಾನಂದ, ಜ್ಞಾನಾನಂದವನ್ನುಂಟು ಮಾಡುವ ಎಲ್ಲರನ್ನೂ ಕೂಡ ರಥದಲ್ಲಿ ತೋರಿಸಲಾಗಿದೆ. ಮನುಷ್ಯನಲ್ಲಿ ದೈವತ್ವವನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಅವರ ಸಾಧನೆಯನ್ನು ತೋರಿಸಬೇಕೆನ್ನುವ ಉದ್ದೇಶವಾಗಿ ಈ ರಥವನ್ನು ನಿರ್ಮಾಣ ಮಾಡಿದ್ದೇವೆ. ಇದಕ್ಕೆ ‘ಲಕ್ಷ್ಮಿನಾರಾಯಣ ಸ್ವಾಮಿ ತೇರು’ ಎನ್ನುತ್ತೇವಾದರೂ ದೇಶದ ಮಹಾನ್ ನಾಯಕರ ಶಿಲ್ಪಿಗಳು ಇರುವುದರಿಂದ ಭಾರತಾಂಬೆ ರಥ ಅಥವಾ ಭಾರತ ಮಾತಾ ರಥ ಎಂದೂ ಕರೆಯುತ್ತೇವೆ. ಈ ರಥವನ್ನು ಹನುಮ ಜಯಂತಿಯಂದು ಲೋಕಾರ್ಪಣೆ ಮಾಡಿದ್ದೇವೆ’ ಎನ್ನುತ್ತಾರೆ ಶ್ರೀಕ್ಷೇತ್ರ ಬೆಲಗೂರಿನ ಮಾರುತಿ ಪೀಠದ ಆಡಳಿತಾಧಿಕಾರಿ ಗುರುದತ್ತ.

ರಥದಲ್ಲಿ ಏನೇನಿದೆ?

221 ಉಬ್ಬುಶಿಲ್ಪ ಅಳವಡಿಸಿದ್ದಾರೆ. 4 ದ್ವಾರಗಳಿವೆ. ಮೊದಲನೆಯದರಲ್ಲಿ ಲಕ್ಷ್ಮೀನಾರಾಯಣ, ಎರಡನೆಯದರಲ್ಲಿ ಭಾರತಾಂಬೆ, ಮೂರನೆಯದರಲ್ಲಿ ಸೀತಾ,ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕನೆಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಇದು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥವಾದರೂ ಇದರಲ್ಲಿ ದೇವರ ಮೂರ್ತಿಗಳ ಸಂಖ್ಯೆ ವಿರಳ. ದೇಶದ ಏಳ್ಗೆಗಾಗಿ ವಿವಿಧ ಕ್ಷೇತ್ರದಲ್ಲಿ ದುಡಿದಂತಹ ಸುಮಾರು 221 ಮಹಾನ್‌ ವ್ಯಕ್ತಿಗಳ ಉಬ್ಬು ಶಿಲ್ಪಗಳನ್ನು ಅಳವಡಿಸಿರುವುದು ಬಹುವಿಶೇಷ.

‘ಅಪರೂಪದ ಈ ರಥದಲ್ಲಿ ಒಂದು ಪ್ರಧಾನ ಕಳಶ, 33 ಉಪಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇವೆ. ಈ ರಥವನ್ನು ಎಳೆಯಲು ಸುಮಾರು 1 ಸಾವಿರ ಜನ ಅವಶ್ಯಕ’ ಎನ್ನುತ್ತಾರೆ ಶಿಲ್ಪಿ ರಾಜಶೇಖರ್‌ ಹೆಬ್ಬಾರ್‌.

ಈ ರಥಕ್ಕೆ ‘ಭಾರತಾಂಬೆ ತೇರು’ ಎಂದೇ ಹೆಸರಿಟ್ಟಿದ್ದಾರೆ. ಈ ರಾಷ್ಟ್ರಪ್ರೇಮದ ತೇರು ನಿನ್ನೆ (ಡಿ. 9) ಹನುಮ ಜಯಂತಿಯಂದು ಹಲವು ಮಠಾಧೀಶರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿದೆ.

ರಥದಲ್ಲಿರುವ ಉಬ್ಬು ಶಿಲ್ಪಗಳು

ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್‌, ಲಾಲ್‌ಬಹದ್ದೂರ್ ಶಾಸ್ತ್ರಿ, ವಲ್ಲಭಬಾಯಿ ಪಟೇಲ್‌, ಚಂದ್ರಶೇಖರ್‌ ಆಜಾದ್‌, ಸರ್‌ಎಂ. ವಿಶ್ವೇಶ್ವರಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಸ್ವಾಮಿ ವಿವೇಕಾನಂದ, ಸರ್ವಪಲ್ಲಿ ರಾಧಾಕೃಷ್ಣನ್‌, ಪುರಂದರದಾಸ, ಕನಕದಾಸ, ವಾಲ್ಮೀಕಿ ಮಹರ್ಷಿ, ಕಾಳಿದಾಸ, ಅಗಸ್ತ್ಯ ಮುನಿ, ಜಮದಗ್ನಿ, ವಸಿಷ್ಟಋಷಿ, ರಾಮಕೃಷ್ಣ ಪರಮಹಂಸ, ಭಗತ್‌ಸಿಂಗ್‌, ಕೃಷ್ಣದೇವರಾಯ, ಛತ್ರಪತಿ ಶಿವಾಜಿ, ಮದಕರಿ ನಾಯಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಜನರಲ್‌ ಕಾರಿಯಪ್ಪ, ಪಂಪ, ರನ್ನ, ಜನ್ನ, ತರಾಸು, ಎಂ.ಕೆ.ಇಂದಿರಾ, ಅಬ್ದುಲ್‌ ಕಲಾಂ, ಕುವೆಂಪು, ಜಿ.ಎಸ್‌.ಶಿವರುದ್ರಪ್ಪ, ದ.ರಾ.ಬೇಂದ್ರೆ, ಎಸ್‌.ಎಲ್‌.ಭೈರಪ್ಪ, ಮಾಧವನ್‌ ನಾಯರ್‌, ಸಿ.ಎನ್‌.ಆರ್‌.ರಾವ್‌, ಡಾ.ರಾಜಕುಮಾರ್‌, ವಿಷ್ಣುವರ್ಧನ್‌, ಎಂ.ಎಸ್‌.ಸುಬ್ಬುಲಕ್ಷ್ಮಿ, ತ್ಯಾಗರಾಜರು, ಎಸ್‌.ಟಿ.ರಾಮರಾವ್‌ ಸೇರಿದಂತೆ ಸುಮಾರು 221 ಮಹನೀಯ ವಿಗ್ರಹಗಳು ರಥದಲ್ಲಿ ಅನಾವರಣಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT