ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಷನ್‌’ ಸ್ವಚ್ಛತಾ ಅಭಿಯಾನ

Last Updated 3 ಅಕ್ಟೋಬರ್ 2019, 9:32 IST
ಅಕ್ಷರ ಗಾತ್ರ

ರಸ್ತೆಯ ಇಕ್ಕೆಲಗಳು ಸ್ವಚ್ಛವಾಗಿ ಕಂಡರೂ ಸ್ವಾಮೀಜಿಗೆ ಮಾತ್ರ ಅಲ್ಲೇ ಒತ್ತರಿಸಿ ಇಟ್ಟಿರುವ ಕಸದ ರಾಶಿ ಕಾಣಿಸುತ್ತದೆ. ಆ ಜಾಗವನ್ನು ತೆರವು ಮಾಡಿ ಅಲ್ಲೊಂದು ಪುಟ್ಟ ಪಾರ್ಕ್‌ ನಿರ್ಮಾಣ ಮಾಡಿದರೆ ಹೇಗೆ ಎಂದು ಯೋಚಿಸುತ್ತಾರೆ.

ಯೋಚನೆಯು ಮೋಡದಂತೆ ಕರಗದೇ, ಭಾನುವಾರವೇ ಆ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗುತ್ತಾರೆ. ರಾಮಕೃಷ್ಣ ಮಿಷನ್‌ನ ಸ್ವಾಮಿ ಜಿತಕಾಮಾನಂದ ಮತ್ತು ಸ್ವಾಮಿ ಏಕಗಮ್ಯಾನಂದ ಅವರ ಈ ಮುತುವರ್ಜಿಯಿಂದಲೇ ನಗರದ ಹಲವೆಡೆ ಕಸದ ರಾಶಿಗಳು ಉದ್ಯಾನಗಳಾಗಿ ಬದಲಾಗಿವೆ. ತಿಪ್ಪೆ ರಾಶಿಯಲ್ಲಿ ಮುಚ್ಚಿ ಹೋದ ದಾರಿಗಳು ತೆರವುಗೊಂಡಿವೆ. ಬೀಡಾಡಿ ನಾಯಿಗಳ ತಾಣಗಳಿಂದ ಮಕ್ಕಳು ನಡೆಯಲು ಭಯಪಡುತ್ತಿದ್ದ ಸ್ಥಳಗಳು ಬದಲಾಗಿ ಈಗ ಬಣ್ಣದ ಕಂಬಿಗಳನ್ನು ಹಿಡಿದುಕೊಂಡು ಮಕ್ಕಳು ಖುಷಿಯಿಂದ ಹೆಜ್ಜೆ ಇಡುವುದು ಸಾಧ್ಯವಾಗಿದೆ.

ಐದು ವರ್ಷಗಳ ಕಾಲ ನಿರಂತರವಾಗಿ ನಡೆದ ಸ್ವಚ್ಛ ಮಂಗಳೂರು ಅಭಿಯಾನ ಕೇವಲ ರಸ್ತೆ ಬದಿಯ ಕಸ ಗುಡಿಸುವುದಕ್ಕೆ ಸೀಮಿತವಾಗಿ ಉಳಿಯಲ್ಲ. ಈ ಅಭಿಯಾನದ ನೆಪದಲ್ಲಿ ನಗರದಾದ್ಯಂತ ಸ್ವಚ್ಛತೆ ಮತ್ತು ಸೌಂದರ್ಯದ ಬಗ್ಗೆ ಯೋಚಿಸುವ ತಂಡವೊಂದು ರೂಪುಗೊಂಡಿದೆ. ಇದಕ್ಕೆ ಕಾರಣ ಮಂಗಳೂರಿನ ರಾಮಕೃಷ್ಣ ಮಿಷನ್‌.

ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನವನ್ನು ಘೋಷಿಸಿದಾಗ ಕೆಲವು ಪ್ರಮುಖ ಸಂಸ್ಥೆಗಳಿಗೆ ಈ ಅಭಿಯಾನವನ್ನು ಮುನ್ನಡೆಸುವಂತೆ ಮನವಿ ಮಾಡಿತು. 2014ರಲ್ಲಿ ನಗರ ಅಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯನಾಯ್ಡು ಅವರು ರಾಮಕೃಷ್ಣ ಮಿಷನ್‌, ಕಂಚಿ ಕಾಮಕೋಟಿ ಪೀಠ, ಕೆಥೋಲಿಕ್‌ ಬಿಷಪ್ ಸಮೂಹ ಮತ್ತು ಮುಸ್ಲಿಂ ಧರ್ಮಗುರುಗಳು, ಶ್ರೀಶ್ರೀರವಿಶಂಕರ್‌ ಗುರೂಜಿ ಅವರಿಗೆ ಪತ್ರ ಬರೆದು ಸ್ವಚ್ಛತಾ ಅಭಿಯಾನವನ್ನು ಜನರ ಸಹಭಾಗಿತ್ವದಲ್ಲಿ ಮುನ್ನಡೆಸುವಂತೆ ಕೋರಿದರು.

ಪ್ರಧಾನಮಂತ್ರಿ ಅವರ ಘೋಷಣೆ ಮತ್ತು ಈ ಮನವಿಯ ಪ್ರೇರಣೆಯಿಂದಾಗಿ ರಾಮಕೃಷ್ಣ ಮಿಷನ್‌ ಸ್ವಚ್ಛ ಭಾರತ್‌ ಅಭಿಯಾನವನ್ನು ಕೆಲಕಾಲ ದೇಶದ ವಿವಿಧೆಡೆ ನಡೆಸಿತು. ಆದರೆ ಮಂಗಳೂರು ರಾಮಕೃಷ್ಣ ಮಿಷನ್‌ನ ಅಭಿಯಾನ ನಿರಂತರ ಐದು ವರ್ಷಗಳ ಕಾಲ ನಡೆದುದಲ್ಲದೆ, ಸ್ವಚ್ಛತೆ ಅರ್ಥವನ್ನು ವಿಸ್ತರಿಸುವ ರೀತಿಯಲ್ಲಿ ಕಾರ್ಯಕ್ರಮಗಳು ನಡೆದವು. ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿಯೂ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮಗಳು ಆರಂಭವಾದವು.

ಮೊದಲ ವರ್ಷದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ನಗರದ ವಿವಿಧೆಡೆಗಳಲ್ಲಿ ಸ್ವಚ್ಛತೆಗಾಗಿ ನೂರಾರು ಮಂದಿ ಸ್ವಯಂ ಸೇವಕರು ಕೈ ಜೋಡಿಸಿದರು. ಆದರೆ ಸ್ವಚ್ಛಗೊಳಿಸಿದ ಬೀದಿಗಳೇ ಕೆಲವು ದಿನಗಳಲ್ಲಿ ಮತ್ತೆ ಕೊಚ್ಚೆಯಾಗುವುದನ್ನು ಕಂಡು ಸ್ವಯಂಸೇವಕರಿಗೆ ಬೇಸರವೆನಿಸುತ್ತಿತ್ತು. ಈ ಅಭಿಯಾನದ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ ಅವರು ಸ್ವಚ್ಛತೆಯು ನೆಲದಲ್ಲಿ ಇಲ್ಲ, ಬದಲಾಗಿ ಜನರ ಮನಸ್ಸಿನಲ್ಲಿದೆ ಎಂಬುದನ್ನು ಗುರುತಿಸಿ ಶಾಲೆಗಳಲ್ಲಿ ಸ್ವಚ್ಛ ಮನಸ್ಸು ಮತ್ತು ಕಾಲೇಜುಗಳಲ್ಲಿ ‘ಸ್ವಚ್ಛ ಸೋಚ್‌’ ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಮನೆಮನೆಗೆ ತೆರಳಿ ಗೃಹಿಣಿಯರಿಗೆ ಹಸಿ ಕಸವನ್ನು ಕಾಂಪೋಸ್ಟ್‌ ಮಾಡುವ ಮಾದರಿ ಹೇಳಿಕೊಟ್ಟರು. ಮಣ್ಣಿನ ಸಾವಿರಾರು ಕಾಂಪೋಸ್ಟ್‌ ಮಡಕೆಗಳನ್ನು ರಿಯಾಯಿತಿ ದರದಲ್ಲಿ ಆಸಕ್ತರಿಗೆ ವಿತರಿಸಿ ಹಸಿಕಸವನ್ನು ಮನೆಯಲ್ಲಿಯೇ ವಿಲೇವಾರಿ ಮಾಡಲು ಅನುವು ಮಾಡಿಕೊಡಲಾಯಿತು.

ಇದೀಗ ಸ್ವಚ್ಛಭಾರತ ಅಭಿಯಾನದ ಸಮಾರೋಪದ ಸಂದರ್ಭದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಜೊತೆ ಕೈ ಜೋಡಿಸಿದ 2,500 ಮಂದಿ ಸ್ವಯಂ ಸೇವಕರು ಅಭಿಯಾನವನ್ನು ಮುಂದುವರೆಸುವ ಹುಮ್ಮಸ್ಸಿನಲ್ಲಿದ್ದಾರೆ. ಮಂಗಳೂರು ನಗರ ಸೌಂದರ್ಯಕ್ಕೆ ಪೂರಕವಾಗಿ ಕೆಲಸ ಮಾಡುವ ರಚನಾತ್ಮಕ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲಲು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿವೆ ಎನ್ನುತ್ತಾರೆ ಸಂಚಾಲಕ ಸ್ವಾಮಿ ಏಕಗಮ್ಯಾನಂದಜೀ.

ಸ್ವಚ್ಛಭಾರತ ಅಭಿಯಾನ ಘೋಷಣೆಯಾದಾಗ ಅದಕ್ಕೆ ಪೂರಕವಾದ ಮಾರ್ಗದರ್ಶಿ ನಿಯಮಗಳಿರಲಿಲ್ಲ. ಪ್ರತಿ ಭಾನುವಾರ ಸ್ವಚ್ಛತೆಗಾಗಿ ಎರಡು ಗಂಟೆ ವ್ಯಯಿಸಬೇಕು ಎಂಬುದಷ್ಟೇ ಸೂಚನೆಯಾಗಿತ್ತು. ಆದರೆ ಮಂಗಳೂರಿನಲ್ಲಿ ಈ ಕೆಲಸಗಳನ್ನು ನಿರ್ವಹಿಸುತ್ತ ಸ್ವಚ್ಛತೆಯ ಪರಿಕಲ್ಪನೆ ವಿಸ್ತಾರವಾಗುತ್ತಾ ಹೋಯಿತು. ಕರಾವಳಿಯ ಜನರೂ ಈ ಅಭಿಯಾನಕ್ಕೆ ಉತ್ತಮವಾಗಿ ಸ್ಪಂದಿಸಿದರು. ಕಲಾವಿದರು, ವಿದ್ಯಾರ್ಥಿಗಳು, ಉದ್ಯಮಿಗಳು, ಸಂಘ ಸಂಸ್ಥೆಗಳು ತಮ್ಮ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ಕೆಲಸ ಮಾಡಿದ್ದಾರೆ ಎಂದು ಸ್ವಾಮೀಜಿ ವಿವರಿಸುತ್ತಾರೆ.

‘ಸ್ವಚ್ಚಗೊಳಿಸಿದ ಬೀದಿಯಲ್ಲಿ ರಾತ್ರಿ ಕಳ್ಳರಂತೆ ಕಸ ಹಾಕುವವರನ್ನು ಗುರುತಿಸಿ ಬೆಳಿಗ್ಗೆ ಅವರ ಮನೆಗೆ ಹೋಗಿ ಮನವೊಲಿಸುವ ಕೆಲಸವನ್ನೂ ಮಾಡಲಾಗಿದೆ. ಅವರಿಗೆ ಕಸ ವಿಲೇವಾರಿಯ ಸುಲಭ ವಿಧಾನಗಳನ್ನು ಅದಕ್ಕೆ ಪೂರಕ ಪರಿಕರಗಳನ್ನೂ ಒದಿಸಲಾಗಿದೆ. ಹೀಗೆ ಪ್ರೀತಿಯ ಮಾತುಗಳು ಮನುಷ್ಯನನ್ನು ಪರಿವರ್ತಿಸಬಲ್ಲದು’ ಎನ್ನುವುದು ಸ್ವಾಮೀಜಿ ಅವರ ಅನುಭವದ ನುಡಿ.

ಇದೀಗ ಸ್ವಯಂಸೇವಕರು ಸ್ವಚ್ಛತಾ ಫೌಂಡೇಶನ್‌ ರೂಪಿಸಿ ಈ ಕೆಲಸವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ರಾಮಕೃಷ್ಣ ಮಿಷನ್‌ ಈ ಫೌಂಡೇಷನ್‌ಗೆ ಮಾರ್ಗದರ್ಶನ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT