ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 162 ಮಂದಿ ನೆರೆ ಸಂತ್ರಸ್ತರಿಗೆ ಸೂರು

2018ರ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರು, ಇಂದು ಮನೆಗಳ ಹಸ್ತಾಂತರ
Last Updated 22 ಏಪ್ರಿಲ್ 2021, 14:06 IST
ಅಕ್ಷರ ಗಾತ್ರ

ಮಡಿಕೇರಿ: 2018ರ ಪ್ರಾಕೃತಿಕ ವಿಕೋಪದಲ್ಲಿ ಕೊಡಗು ಜಿಲ್ಲೆಯಲ್ಲಿ ಸೂರು ಕಳೆದುಕೊಂಡಿದ್ದ ಸಂತ್ರಸ್ತರಿಗೆ ನಾಲ್ಕನೇ ಹಂತದ ಮನೆ ಹಸ್ತಾಂತರಕ್ಕೆ ಕೊಡಗು ಜಿಲ್ಲಾಡಳಿತ ಮುಂದಾಗಿದೆ.

ಎರಡು ಸ್ಥಳಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಏ.23ರಂದು (ಶುಕ್ರವಾರ) ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸ್ಥಳೀಯರ ಶಾಸಕರು ಹಸ್ತಾಂತರ ಮಾಡಲಿದ್ದಾರೆ. ಇನ್ನೇನು ಮತ್ತೊಂದು ಮಳೆಗಾಲ ಆರಂಭಗೊಳ್ಳಲಿದ್ದು, ಮತ್ತೆ 162 ಮಂದಿಗೆ ಸೂರಿನ ಭಾಗ್ಯ ದೊರೆಯಲಿದೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಳಿಗಿರಿ ಗ್ರಾಮದಲ್ಲಿ ನಿರ್ಮಿಸುತ್ತಿರುವ 22 ಮನೆಗಳೂ ಪೂರ್ಣಗೊಂಡಿದ್ದು, ಸಂತ್ರಸ್ತರ ಕೈಸೇರಲಿವೆ. ಅದೇ ರೀತಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಗಾಳಿಬೀಡು ಗ್ರಾಮದಲ್ಲಿ 140 ಮನೆಗಳಿಗೆ ಶುಕ್ರವಾರ ಗೃಹಪ್ರವೇಶದ ಭಾಗ್ಯ ದೊರೆಯಲಿದೆ.

ಕರ್ಣಂಗೇರಿಯಲ್ಲಿ ನಿರ್ಮಿಸಿದ್ದ 35 ಮನೆಗಳನ್ನು ಮೊದಲ ಬಾರಿಗೆ ಹಸ್ತಾಂತರ ಮಾಡಲಾಗಿತ್ತು. ಅದಾದ ಮೇಲೆ, ಕಳೆದ ವರ್ಷ ಜಂಬೂರು ಹಾಗೂ ಮದೆಯಲ್ಲಿ ನಿರ್ಮಿಸಿದ್ದ ಮನೆಗಳನ್ನು ಹಸ್ತಾಂತರಿಸಲಾಗಿತ್ತು. ಇದೀಗ ಬಿಳಿಗಿರಿ ಹಾಗೂ ಗಾಳಿಬೀಡು ಭಾಗದಲ್ಲಿ ಮನೆ ಆಯ್ಕೆ ಮಾಡಿಕೊಂಡ ಸಂತ್ರಸ್ತರಿಗೆ ಮನೆ ದೊರೆಯಲಿವೆ.

ಸರಳ ಕಾರ್ಯಕ್ರಮ: ಕೋವಿಡ್‌–19 ಹಿನ್ನೆಲೆಯಲ್ಲಿ ಕಾರ್ಯಕ್ರಮವು ಸಾಂಕೇತಿಕವಾಗಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಸಂತ್ರಸ್ತ ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಲಿದ್ದಾರೆ.

‘ಕೊಡಗಿನಲ್ಲಿ ಬೇಸಿಗೆಯ ಮಳೆ ಆರ್ಭಟಿಸುತ್ತಿದೆ. ಇನ್ನು ಮಳೆಗಾಲದ ಕಥೆ ಏನು ಎಂಬುದು ತಿಳಿಯುತ್ತಿಲ್ಲ. ಇಷ್ಟು ದಿನ ಬಾಡಿಗೆಯ ಮನೆಯಲ್ಲಿದ್ದೆವು. ಇನ್ನಾದರೂ ಮನೆ ಸಿಗಲಿದೆ. ನೆಮ್ಮದಿ ಜೀವನ ನಡೆಸುತ್ತೇವೆ’ ಎಂದು ಸಂತ್ರಸ್ತರೊಬ್ಬರು ತಿಳಿಸಿದರು.

ಅದೇ ಮಾದರಿಯ ಮನೆ: ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮನೆ ನಿರ್ಮಿಸಲಾಗಿದ್ದು, ಪ್ರತಿ ಮನೆಗೆ ₹9.85 ಲಕ್ಷ ವೆಚ್ಚವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಮನೆ ನಿರ್ಮಿಸಲಾಗಿದೆ. ಒಂದು ಹಾಲ್‌, ಒಂದು ಬೆಡ್‌ ರೂಂ ಹಾಗೂ ಅಡುಗೆ ಕೋಣೆ ಒಳಗೊಂಡಂತೆ ಮನೆ ನಿರ್ಮಿಸಿದ್ದು, ನೋಡಲು ಮನೆಗಳು ಸುಂದರವಾಗಿವೆ.

‘ಓವರ್‌ಹೆಡ್‌ ಟ್ಯಾಂಕ್‌ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ’ ಎಂದು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಯೋಜನಾ ನಿರ್ದೇಶಕ ಶ್ರೀನಿವಾಸ್‌ ತಿಳಿಸಿದರು.

ಕರ್ಣಂಗೇರಿಯಲ್ಲಿ 35, ಮದೆ 80, ಜಂಬೂರು 383 ಮನೆಗಳನ್ನು ಇದುವರೆಗೂ ಹಸ್ತಾಂತರ ಮಾಡಲಾಗಿದೆ. ಶುಕ್ರವಾರ 162 ಮನೆ ಹಸ್ತಾಂತರಿಸಿದರೆ ಒಟ್ಟು 660 ಮನೆಗಳನ್ನು ಹಸ್ತಾಂತರ ಮಾಡಿದಂತೆ ಆಗಲಿದೆ. ಜತೆಗೆ, ಜಂಬೂರಿನಲ್ಲಿ ಇನ್ಪೊಸಿಸ್‌ ಸಹ 200 ಮನೆಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಎರಡು ವರ್ಷದಿಂದ ಬಾಧಿಸುತ್ತಿರುವ ಕೋವಿಡ್‌ ಮತ್ತಿತರ ಕಾರಣದಿಂದ ಈ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಎಂಜಿನಿಯರ್‌ಗಳು.

‘ಮೈತ್ರಿ’ ಸರ್ಕಾರ ಅವಧಿಯಲ್ಲಿ ಕಾಮಗಾರಿ ಆರಂಭ

ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸಿತ್ತು. ಭೂಕುಸಿತದಿಂದ ಕಾಫಿ ತೋಟಕ್ಕೂ ಹಾನಿಯಾಗಿತ್ತು. ಭೂಕುಸಿತ ಹಾಗೂ ಪ್ರವಾಹದಿಂದ ನೂರಾರು ಮಂದಿ ನೆಲೆ ಕಳೆದುಕೊಂಡಿದ್ದರು. ಅಂದಾಜು 840 ಮಂದಿಯ ಪೂರ್ಣ ಮನೆಗಳು ಹಾನಿಯಾಗಿದ್ದವು. ಅವರಿಗೆ ಜಿಲ್ಲೆಯ ಆರು ಸ್ಥಳಗಳಲ್ಲಿ, ಮನೆ ನಿರ್ಮಿಸಲು ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜಂಬೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT