ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

261 ಎಕರೆ ಭೂಕಬಳಿಕೆ: ಎಸಿಬಿ ತನಿಖೆ; ಸಚಿವ ಆರ್‌. ಅಶೋಕ

ಹೊಸಕೋಟೆ: ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣ
Last Updated 16 ಫೆಬ್ರುವರಿ 2022, 18:40 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿಯ ಶಾಂತನಪುರ ಗ್ರಾಮದ ಸರ್ವೆ ನಂ. 9ರಲ್ಲಿ ಒಟ್ಟು 261.13 ಎಕರೆ ಜಮೀನಿಗೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ, ಭೂ ಕಬಳಿಕೆ ಮಾಡಿರುವ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ರಘುನಾಥ್‌ ರಾವ್‌ ಮಲ್ಕಾಪೂರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಒಟ್ಟು 46.24 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 9 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಮೂರು ಪ್ರಕರಣಗಳಲ್ಲಿ ಪ್ರತಿವಾದಿಗಳು ಮೃತಪಟ್ಟಿರುವುದರಿಂದ ಅವರ ಕಾನೂನುಬದ್ಧ ವಾರಸುದಾರರ ಮಾಹಿತಿ ಪಡೆದು ಹೊಸತಾಗಿ ವಿಚಾರಣೆ ನಡೆಸಲಾಗುವುದು’ ಎಂದರು.

‘ಇದು ಸರ್ಕಾರಿ ಖರಾಬು ಜಮೀನು ಆಗಿದ್ದು, ದಾಖಲೆಗಳು ಅಕ್ರಮವೆಂದು ಕಂಡುಬಂದ ಪ್ರಕರಣಗಳಲ್ಲಿ ಮಂಜೂರಾತಿ ಮತ್ತು ಖಾತೆ ಬದಲಾವಣೆಯ ನೈಜತೆ ಬಗ್ಗೆ ಭೂ ಕಂದಾಯ ಕಾಯ್ದೆಯಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದರು.

‘ತಾಲ್ಲೂಕು ಕಚೇರಿಯಲ್ಲಿ ಲಭ್ಯವಿರುವ ಮೂಲ ದಾಖಲೆಯಂತೆ ಈ ಜಮೀನಿನಲ್ಲಿ ತಲಾ 4 ಎಕರೆಯಂತೆ ಒಟ್ಟು 50 ಜನರಿಗೆ 200 ಎಕರೆ ಮಂಜೂರು ಆಗಿರುವುದು ಭೂ ಮಂಜೂರಿ ಕಡತದಿಂದ ಗೊತ್ತಾಗಿದೆ. ಈ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸರ್ಕಾರ ಮಂಜೂರು ಮಾಡಿದ್ದರೂ ಅವರನ್ನು ಬಲವಂತವಾಗಿ ಹೊರ ಹಾಕಿ ಭೂ ಕಬಳಿಕೆ ಮಾಡಿರುವ ಪ್ರಕರಣಗಳಲ್ಲಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಭೂ ಪರಭಾರೆ ನಿಷೇಧ ಕಾಯ್ದೆ’ (ಪಿಟಿಸಿಎಲ್) ಉಲ್ಲಂಘನೆಗೆ ಸಂಬಂಧಿಸಿದಂತೆ ಉಪ ವಿಭಾಗ ಕಚೇರಿಯಲ್ಲಿ ಆರು ಪ್ರಕರಣಗಳ ದಾಖಲಿಸಲಾಗಿದೆ. ಅಲ್ಲದೆ, ಈ ಜಮೀನು ವಶಕ್ಕೆ ಪಡೆದು, ಮೂಲ ಮಂಜೂರಿದಾರರಿಗೆ ಮರು ಮಂಜೂರಾತಿ ಆದೇಶ ಹೊರಡಿಸಲಾಗಿದೆ’ ಎಂದರು.

‘ಎರಡನೇ ಬಾರಿಯೂ ಮೂಲ ಮಂಜೂರಿದಾರರು ಜಮೀನು ಮಾರಾಟ ಮಾಡಿದ್ದಾರೆ. ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿ ಜಮೀನು ಪರಬಾರೆ ಆಗಿರುವುದನ್ನು ಗಮನಿಸಿ ಎರಡನೇ ಬಾರಿಗೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಬಳಿಕ ಆ ಜಮೀನುಗಳನ್ನು ಕೂಡಾ ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದೂ ಅಶೋಕ ವಿವರಿಸಿದರು. ‌

‘ಜಮೀನು ವಶಕ್ಕೆ ಪಡೆದಿರುವ ಉಪ ವಿಭಾಗಾಧಿಕಾರಿಯ ಆದೇಶ ಪ್ರಶ್ನಿಸಿ ಮಂಜೂರಿದಾರರ ವಾರಾಸುದಾರರು ಮತ್ತು ಕ್ರಯದಾರರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪಿಟಿಸಿಎಲ್ ಕಾಯ್ದೆಯ ಕಲಂ 5(ಎ) ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಜಮೀನು ಮಂಜೂರಿದಾರರ ವಾರಾಸುದಾರರು ದಾಖಲಿಸಿರುವ ಆರು ಮೇಲ್ಮನವಿ ಪ್ರಕರಣಗಳು ಜಿಲ್ಲಾಧಿಕಾರಿಗಳನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಅವರು ಹೈಕೋರ್ಟ್‌ನಲ್ಲಿ ಆರು ರಿಟ್ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ಪೈಕಿ, ನಾಲ್ಕರಲ್ಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಎರಡು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಹೀಗಾಗಿ ಮಂಜೂರಿದಾರರಿಗೆ ಜಮೀನು ಹಿಂದಿರುಗಿಸಲು ಸಾಧ್ಯ ಆಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT