ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ₹ 4,000 ಕೋಟಿ ವೆಚ್ಚ

Last Updated 29 ಸೆಪ್ಟೆಂಬರ್ 2021, 16:28 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಮತ್ತು ಸಚಿವರ ಬಂಗಲೆಗಳ ನವೀಕರಣ, ವಾಹನಗಳ ಖರೀದಿ, ತ್ರಿತಾರಾ ಹೋಟೆಲ್‌ ನಿರ್ಮಾಣ, ನ್ಯಾಯಾಧೀಶರ ವಸತಿ ಗೃಹಗಳ ದುರಸ್ತಿ ಸೇರಿದಂತೆ ಹಲವು ಕೆಲಸಗಳಿಗೆ ‘ತುರ್ತು ಅವಕಾಶ’ ಬಳಸಿಕೊಂಡಿರುವ ರಾಜ್ಯ ಸರ್ಕಾರ 2018 ರಿಂದ ಈಚೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯನ್ನು ಉಲ್ಲಂಘಿಸಿ ₹ 4,000 ಕೋಟಿ ವೆಚ್ಚ ಮಾಡಿದೆ.

ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯ್ತಿ ಪಡೆದುಕೊಂಡು ಟೆಂಡರ್‌ ಇಲ್ಲದೇ ಕಾಮಗಾರಿ ಮತ್ತು ಖರೀದಿ ನಡೆಸಿರುವುದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಕಾಂತರಾಜು ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಉತ್ತರದಲ್ಲಿ ಬಹಿರಂಗವಾಗಿದೆ. ಮುಖ್ಯಮಂತ್ರಿಯವರ ನಿವಾಸಕ್ಕೆ ಎಲ್‌ಇಡಿ ಟಿವಿಗಳ ಖರೀದಿ, ವಿವಿಧ ಇಲಾಖೆಗಳ ಬಳಕೆಗಾಗಿ ತಂತ್ರಾಂಶ ಅಭಿವೃದ್ಧಿಪಡಿಸುವುದಕ್ಕೂ ಈ ರೀತಿ ಹಣ ವ್ಯಯಿಸಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ, ವಿಜಯಪುರ ವಿಮಾನ ನಿಲ್ದಾಣದ ಪ್ರಾಥಮಿಕ ಹಂತದ ಕಾಮಗಾರಿಗಳು, ಹಂಪಿ, ಬೇಲೂರು, ವಿಜಯಪುರ ಮತ್ತು ಬಾದಾಮಿಯಲ್ಲಿ ₹ 79.98 ಕೋಟಿ ವೆಚ್ಚದಲ್ಲಿ ತ್ರಿತಾರಾ ಹೋಟೆಲ್‌ಗಳ ನಿರ್ಮಾಣ ಕಾಮಗಾರಿಗಳಿಗೂ ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4–ಜಿ ಯಿಂದ ವಿನಾಯ್ತಿ ನೀಡಲಾಗಿತ್ತು.

₹ 15 ಕೋಟಿ ವೆಚ್ಚದಲ್ಲಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳೆತ್ತುವ ಕಾಮಗಾರಿ, ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ₹ 99.80 ಲಕ್ಷ ವೆಚ್ಚದಲ್ಲಿ ‘ಡಿಜಿಟಲ್‌ ಬ್ರಾಡ್‌ಕಾಸ್ಟಿಂಗ್‌ ಅಳವಡಿಕೆ’, ಕೃಷ್ಣಾಕ್ಕೆ ₹ 88.50 ಲಕ್ಷ ವೆಚ್ಚದಲ್ಲಿ 130 ಇಂಚಿನ ಎಲ್‌ಇಡಿ ಪರದೆ ಖರೀದಿ, ಶಾಸಕರು, ಸಂಸದರು, ಅಧಿಕಾರಿಗಳ ಬಳಕೆಗೆ ವಾಹನಗಳ ಖರೀದಿಗೆ ಟೆಂಡರ್‌ ಇಲ್ಲದೆ ಹಣ ವೆಚ್ಚ ಮಾಡಲಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಮತ್ತು ನಿರ್ಮಿತಿ ಕೇಂದ್ರಗಳ ಮೂಲಕ ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4–ಜಿ ವಿನಾಯ್ತಿ ಪಡೆದು ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. 2019ರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದಿಂದ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಬೇಲಿ ನಿರ್ಮಾಣ, ಕಟ್ಟಡ ಮತ್ತು ಶೆಡ್‌ಗಳ ನಿರ್ಮಾಣ, ಮೆಟ್ರೊ ಮಾರ್ಗದುದ್ದಕ್ಕೂ ವಿವಿಧ ತೆರವು ಕೆಲಸಗಳನ್ನು ಸೆಕ್ಷನ್‌ 4–ಜಿ ಅಡಿ ವಿನಾಯಿತಿ ನೀಡಿ ಕೆಆರ್‌ಐಡಿಎಲ್‌ಗೆ ವಹಿಸಲಾಗಿತ್ತು. ಅದೇ ವರ್ಷ ಬಿಡದಿಯಲ್ಲಿ ₹ 10 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೂ ಕೆಆರ್‌ಐಡಿಎಲ್‌ಗೆ ನೇರ ಗುತ್ತಿಗೆ ನೀಡಲಾಗಿತ್ತು.

‘2018 ರಿಂದ 2021ರ ಆಗಸ್ಟ್‌ ಅವಧಿಯಲ್ಲಿ ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯಿತಿ ನೀಡಿ 1,498 ಕೆಲಸಗಳನ್ನು ನಿರ್ವಹಿಸಲಾಗಿದೆ. ಯಾವುದರಲ್ಲಿಯೂ ಕಾನೂನು ಉಲ್ಲಂಘನೆಯಾಗಿಲ್ಲ’ ಎಂದು ಮುಖ್ಯಮಂತ್ರಿ ಉತ್ತರದಲ್ಲಿ ತಿಳಿಸಿದ್ದಾರೆ.

‘ತುರ್ತು ಅಗತ್ಯ ಅಥವಾ ಸಂಪುಟದ ಒಪ್ಪಿಗೆ ಪಡೆದು 4–ಜಿ ವಿನಾಯ್ತಿ ನೀಡಿ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಸಹಜವಾಗಿಯೇ ಸರ್ಕಾರ ಈ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತದೆ. ಕೆಲವು ಕಾಮಗಾರಿಗಳಲ್ಲಿ ಟೆಂಡರ್‌ ಅಗತ್ಯವಿದ್ದರೂ, ಪರಿಣಿತರ ಸೇವೆ ಅಗತ್ಯವಿರುವುದರಿಂದ ವಿನಾಯ್ತಿ ನೀಡಲಾಗುತ್ತದೆ’ ಎನ್ನುತ್ತವೆ ಸರ್ಕಾರದ ಮೂಲಗಳು.

4–ಜಿ ವಿನಾಯ್ತಿ ವಿವರ

ವರ್ಷ;ಮೊತ್ತ(₹ ಕೋಟಿಗಳಲ್ಲಿ)

2018;₹1,235.4

2019;₹1,000.99

2020;₹1,466.99

2021(ಆಗಸ್ಟ್‌ವರೆಗೆ);₹ 473.6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT