ಶನಿವಾರ, ಜನವರಿ 28, 2023
15 °C
ಕೋವಿಡ್‌ ಪರೀಕ್ಷೆ ಸರ್ಟಿಫಿಕೇಟ್‌ ತೋರಿಸಿದರೆ ಕಲಾಪಕ್ಕೆ ಪ್ರವೇಶ

ಎಂಟು ದಿನಗಳ ಅಧಿವೇಶನ: 31 ಮಸೂದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಮತ್ತು ಆ ಬಳಿಕ ಹೊರಡಿಸಿದ ಪ್ರಮುಖ 19 ಸುಗ್ರೀವಾಜ್ಞೆಗಳು ಸೇರಿ ಒಟ್ಟು 31 ಮಸೂದೆಗಳನ್ನು ಇದೇ 21 ರಿಂದ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ.

ವೈಯಕ್ತಿಕ ಅಂತರ, ಸೋಂಕು ನಿರೋಧಕ ವ್ಯವಸ್ಥೆಯ ಕಠಿಣ ಕ್ರಮಗಳ ಮಧ್ಯೆ ವಿಧಾನಸಭೆ ಅಧಿವೇಶನ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಎಂಟು ದಿನಗಳ ಕಲಾಪದಲ್ಲಿ ಎಲ್ಲ ಮಸೂದೆಗಳಿಗೂ ಒಪ್ಪಿಗೆ ಪಡೆಯಬೇಕು. ಅಲ್ಲದೆ, ಅಧಿವೇಶನದಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಸೋಂಕು ಇರುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಇದರ ಅಂಗವಾಗಿ ಎಲ್ಲ ಶಾಸಕರು, ಸಚಿವರು, ವಿಧಾನಸಭೆ ಕಲಾಪಕ್ಕೆ ಹಾಜರಾಗಬೇಕಾದ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಅಧಿವೇಶನ ಆರಂಭವಾಗುವುದಕ್ಕೆ ಮೂರು ದಿನಗಳ ಮೊದಲು (ಸೆ.18 ರಂದು) ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ಅದರ ಸರ್ಟಿಫಿಕೇಟ್ ಕಡ್ಡಾಯವಾಗಿ ತರಬೇಕು. ಕೋವಿಡ್‌ ಸೋಂಕು ಇಲ್ಲದಿದ್ದರೆ ಮಾತ್ರ ಸದನಕ್ಕೆ ಪ್ರವೇಶ ನೀಡಲಾಗುವುದು ಎಂದರು. 

70 ವರ್ಷ ಮೇಲ್ಪಟ್ಟ ಸದಸ್ಯರೂ ಕಲಾಪಕ್ಕೆ ಹಾಜರಾಗಬಹುದು, ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಲಾಪಕ್ಕೆ ಹಾಜರಾಗುವ ಎಲ್ಲರಿಗೂ ಮಾಸ್ಕ್‌ ಮತ್ತು ಫೇಸ್‌ ಶೀಲ್ಡ್‌ ನೀಡಲಾಗುವುದು ಎಂದು ಕಾಗೇರಿ ತಿಳಿಸಿದರು.

ಸಾರ್ವಜನಿಕರಿಗೆ ಈ ಬಾರಿ ಕಲಾಪ ವೀಕ್ಷಣೆಗೆ ಪ್ರವೇಶ ಇರುವುದಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಹಿಂದಿನಂತೆ ಮಾಧ್ಯಮಗಳ ಗ್ಯಾಲರಿಯಲ್ಲಿ ಪತ್ರಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಎಲ್ಲ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಾಗೇರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು