ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ಚಕ್ರತೀರ್ಥ ನೇಮಕಕ್ಕೆ ಆಕ್ಷೇಪ

Last Updated 14 ಸೆಪ್ಟೆಂಬರ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ಬರಹಗಾರ ರೋಹಿತ್‌ ಚಕ್ರತೀರ್ಥ ಅವರನ್ನು ನೇಮಿಸಿರುವುದಕ್ಕೆ ಶೈಕ್ಷಣಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಹಿಂದುತ್ವ ವಿಚಾರಧಾರೆಯ ಪ್ರಬಲ ಪ್ರತಿಪಾದಕ ರೋಹಿತ್‌ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ನೇಮಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಹಲವು ಮಂದಿ ಶಿಕ್ಷಣ ತಜ್ಞರು, ‘ಇದು ಪಠ್ಯಪುಸ್ತಕಗಳ ಕೇಸರೀಕರಣದ ಭಾಗ’ ಎಂದು ವ್ಯಾಖ್ಯಾನಿಸಿದ್ದಾರೆ.

‘ಇದು ಕರ್ನಾಟಕದಲ್ಲಿ ಶಿಕ್ಷಣದ ಕೇಸರೀಕರಣದ ಮೊದಲ ಹೆಜ್ಜೆ. ಭಾರತೀಯ ಸಂಪ್ರದಾಯ ಮತ್ತು ಮೌಲ್ಯಗಳ ಆಧಾರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಅದಕ್ಕೆ ಪೂರಕವಾಗಿಯೇ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸಲಾಗಿದೆ’ ಎನ್ನುತ್ತಾರೆ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ.

‘ಇತಿಹಾಸವನ್ನು ಹೊಸದಾಗಿ ಬೆರಯುವ ಕೆಲಸ ಬೇರೆ ರಾಜ್ಯಗಳಿಗಿಂತ ಮೊದಲು ಕರ್ನಾಟಕದಲ್ಲಿ ಆರಂಭವಾಗಿದೆ. ಮೊದಲ ಹಂತದಲ್ಲೇ ಇದನ್ನು ಬಲವಾಗಿ ವಿರೋಧಿಸಬೇಕು. ಉಗ್ರ ಬಲಪಂಥೀಯರಾಗಿರುವ ಸಂಘ ಪರಿವಾರದ ಈ ಜನರು ತಮಗೆ ಬೇಕಾದಂತೆ ಪಠ್ಯ ಪುಸ್ತಕಗಳನ್ನು ತಿರುಚುವ ಅಪಾಯವಿದೆ. 17 ತಿಂಗಳು ಶಾಲೆಗಳು ಕೋವಿಡ್‌ನಿಂದ ಮುಚ್ಚಿದ್ದಾಗಲೇ ಈ ಪ್ರಯತ್ನ ನಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೋವಿಡ್‌ನಿಂದ ಎದುರಾಗಿರುವ ತುರ್ತು ಸ್ಥಿತಿಯನ್ನು ಪರಿಹರಿಸಲು ಈ ಜನರು ಸಣ್ಣ ಪ್ರಮಾಣದ ಕಾಳಜಿ ಅಥವಾ ಒಳ್ಳೆಯ ಆಲೋಚನೆಯನ್ನು ಮಾಡಿಲ್ಲ. ಪಠ್ಯ ಪುಸ್ತಕ ತಿದ್ದುವಂತಹ ಕೀಳುಮಟ್ಟದ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷ ರಾಜಕೀಯ ಸಲ್ಲದು

ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೆ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ‘ಪಠ್ಯಪುಸ್ತಕ ಪರಿಶೀಲನೆಗಾಗಿ 172 ಸದಸ್ಯರನ್ನು ಒಳಗೊಂಡಿರುವ 27 ವಿಷಯ ಸಮಿತಿಗಳಿವೆ. ಯಾವುದಾದರೂ ಬದಲಾವಣೆ ಅಗತ್ಯವಿದ್ದರೆ ಆ ಸಮಿತಿಗಳೇ ಅದನ್ನು ಮಾಡಬೇಕು. ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಒಪ್ಪಬಹುದು. ಆದರೆ, ಇಡೀ ಪಠ್ಯಪುಸ್ತಕವನ್ನೇ ಮರು ಪರಿಶೀಲನೆಗೆ ಒಳಪಡಿಸುವುದು ಒಪ್ಪತಕ್ಕ ನಿರ್ಧಾರವಲ್ಲ’ ಎಂದರು.

ಪಕ್ಷ ರಾಜಕಾರಣವು ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯಲ್ಲಿ ತಲೆ ಹಾಕಬಾರದು ಎಂದು ಅವರು ಸಲಹೆ ನೀಡಿದರು.

ಬದಲಾವಣೆಗೆ ಆಗ್ರಹ

ಸಮಿತಿ ಅಧ್ಯಕ್ಷರನ್ನು ಬದಲಿಸುವಂತೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿರುವ ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು, ‘ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ರಚಿಸಿರುವ ಸಮಿತಿಯ ಅಧ್ಯಕ್ಷ ಹಿಂದುತ್ವ ವಿಚಾರಧಾರೆಯ ಪ್ರಬಲ ಪ್ರತಿಪಾದಕ. ಇದು ಎಲ್ಲರಿಗೂ ತಿಳಿದಿರುವ ಸತ್ಯ. ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ದುಷ್ಪರಿಣಾಮಗಳು ಆಗಲಿವೆ’ ಎಂದಿದ್ದಾರೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕೂಡ ಈ ಸಮಿತಿಯನ್ನು ವಿರೋಧಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ‘ಸರ್ಕಾರದ ಆದೇಶದ ಪ್ರಕಾರ ಶಾಲಾ ಆಡಳಿತ ಮಂಡಳಿಗಳ ಸದಸ್ಯರೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸದಸ್ಯರಾಗಿರಬೇಕು. ಆದರೆ, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಹೊರಗಿಟ್ಟು ಸಮಿತಿ ರಚಿಸಿರುವುದನ್ನು ವಿರೋಧಿಸುತ್ತೇವೆ’ ಎಂದರು.

‘ವರದಿ ಬಂದ ಬಳಿಕ ನಿರ್ಧಾರ’

‘ಪಠ್ಯಪುಸ್ತಕಗಳ ಪರಿಷ್ಕರಣೆ ನನ್ನ ಆದ್ಯತೆಯ ವಿಚಾರವಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹಿಂದೆ ಹೇಳಿದ್ದರು. ಆದರೆ, ಸೆಪ್ಟೆಂಬರ್ 8ರಂದು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಎಸ್‌. ಸುರೇಶ್‌ ಕುಮಾರ್‌ ಸಚಿವರಾಗಿದ್ದಾಗಲೇ ಈ ಸಮಿತಿ ನೇಮಿಸಿದ್ದರು. ಅದು ತನ್ನ ಕೆಲಸವನ್ನೂ ಆರಂಭಿಸಿತ್ತು. ಆದರೆ, ಈಗ ಅಧಿಕೃತ ಆದೇಶ ಹೊರಬಿದ್ದಿದೆ ಎಂಬ ಮಾಹಿತಿ ಲಭಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿ.ಸಿ. ನಾಗೇಶ್, ‘ನಾನು ಸಚಿವನಾದ ಬಳಿಕ ವಿವಿಧ ಸ್ಥಳಗಳಿಗೆ ಪ್ರವಾಸ ಹೋಗಿದ್ದಾಗಲೂ ಪಠ್ಯ ಪುಸ್ತಕಗಳಲ್ಲಿನ ಲೋಪ ಸರಿಪಡಿಸುವಂತೆ ಹಲವರು ಮನವಿ ಸಲ್ಲಿಸಿದ್ದರು. ಈಗ ಸಮಿತಿ ರಚಿಸಿದ್ದೇನೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

ಸೆ.8ರಂದು ಹೊರಡಿಸಿರುವ ಆದೇಶದ ಪ್ರಕಾರ, ಈ ಸಮಿತಿಯು 1ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ, ಭಾಷಾ ವಿಷಯಗಳು ಮತ್ತು ಪರಿಸರ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT