ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸಿಬಿ ಪ್ರಕರಣಗಳಲ್ಲಿ ವಿಚಾರಣೆಗೆ ಅನುಮತಿ’: ಬಸವರಾಜ ಬೊಮ್ಮಾಯಿ

ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶವಿರುವ ಪ್ರಕರಣ : ಭ್ರಷ್ಟರ ರಕ್ಷಣೆ ಸರಿಯಲ್ಲ – ಮುಖ್ಯಮಂತ್ರಿ ಬೊಮ್ಮಾಯಿ
Last Updated 10 ಮಾರ್ಚ್ 2022, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನು ಮುಂದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿಚಾರಣೆಗೆ ಅನುಮತಿ ಕೇಳಿದ ಪ್ರಕರಣಗಳಲ್ಲಿ, ಪ್ರಾಥಮಿಕ ತನಿಖೆಯಲ್ಲಿ ಸತ್ಯಾಂಶ ಕಂಡುಬಂದಿದ್ದರೆ ಅನುಮತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ವಿಚಾರಣೆಗೆ ಅನುಮತಿ ಕೇಳಿದ ಪ್ರಕರಣಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ’ಎಂದು ಹೇಳಿದರು.

‘ನಗರಾಭಿವೃದ್ಧಿ ಹಾಗೂ ಇತರ ಹಲವು ಇಲಾಖೆಗಳು ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಉಪಕಾರ್ಯದರ್ಶಿ ಸೇರಿದಂತೆ ತಮ್ಮದೇ ಅಧಿಕಾರಿಗಳ ಆಂತರಿಕ ಸಮಿತಿ ರಚಿಸಿಕೊಂಡು ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೆ ಕಡತವನ್ನು ತಳ್ಳಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ’ ಎಂದು
ತಿಳಿಸಿದರು.

‘ಪ್ರಾಥಮಿಕ ತನಿಖೆ ವೇಳೆ ಅಪರಾಧ ಸತ್ಯಾಂಶ ಕಂಡುಬಂದ ಪ್ರಕರಣಗಳಲ್ಲಿ ವಿಚಾರಣೆಗೆ ಅವಕಾಶ ನೀಡದೆ ಭ್ರಷ್ಟರನ್ನು ರಕ್ಷಿಸುವುದು ಸರಿಯಲ್ಲ. ಈ ಕಾರಣಕ್ಕೆ ವಿವಿಧ ಇಲಾಖೆಗಳಲ್ಲಿ ಆಂತರಿಕವಾಗಿ ರಚನೆಯಾಗಿರುವ ಎಲ್ಲ ಸಮಿತಿಗಳನ್ನು ರದ್ದು ಮಾಡುವಂತೆ ಆದೇಶಿಸಿದ್ದೇನೆ’ ಎಂದರು‌.

‘ಐದು ವರ್ಷಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 310 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದೆ. 371 ನೌಕರರು, ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಆ ಪೈಕಿ, 63 ಪ್ರಕರಣಗಳ ತನಿಖೆ ಮುಕ್ತಾಯಗೊಂಡಿದೆ. 223 ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಎಸಿಬಿ ಶಿಫಾರಸು ಮಾಡಿದೆ’ ಎಂದೂ ಮುಖ್ಯಮಂತ್ರಿ ವಿವರಿಸಿದರು.

––––

ಬೆಂಗಳೂರು: ‘ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ನಷ್ಟ ಪರಿಹಾರ ವ್ಯವಸ್ಥೆ ಮುಂದುವರೆಸಬೇಕು ಎಂಬ ರಾಜ್ಯದ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಪರವಾಗಿ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘2018-19ರಲ್ಲಿ ₹ 52,147.20 ಕೋಟಿ, 2019-20ರಲ್ಲಿ ₹ 57,522.74 ಕೋಟಿ, 2020-21ರಲ್ಲಿ ₹ 64,527.57 ಕೋಟಿ, 2021-22ನೇ ಸಾಲಿನ ಫೆಬ್ರವರಿ ವೇಳೆಗೆ ₹ 70,108,68 ಕೋಟಿ ಜಿಎಸ್‌ಟಿ ಸಂಗ್ರಹ ಆಗಿದೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರ ಕಳೆದ ವರ್ಷ‌ ತೆರಿಗೆ ಹಂಚಿಕೆ, ಸಹಾಯಧನ ಸೇರಿದಂತೆ 2018ರಿಂದ 2021ರವರೆಗೆ ಕ್ರಮವಾಗಿ ₹ 35,895, ₹ 30,919, ₹ 21,694 ಕೋಟಿ ಹಂಚಿಕೆ ಮಾಡಿದೆ. ಸಹಾಯಧನದ ರೂಪದಲ್ಲಿ ₹ 14,727 ಕೋಟಿ, ₹ 19,983 ಕೋಟಿ, ₹ 16,287 ಕೋಟಿ ನೀಡಲಾಗಿದೆ. 2018-19ರಲ್ಲಿ ₹ 10,754 ಕೋಟಿ, 2019-20ರಲ್ಲಿ ₹ 14,496 ಕೋಟಿ, 2020-21ರಲ್ಲಿ ₹ 26,196 ಕೋಟಿ, 2021-22ರ ಫೆಬ್ರವರಿವರೆಗೆ ₹ 25,267 ಕೋಟಿ ಜಿಎಸ್‌ಟಿ ನಷ್ಟ ಪರಿಹಾರ ನೀಡಲಾಗಿದೆ’ ಎಂದರು.

‘ಈ ಮೊದಲು ನಷ್ಟ ಪರಿಹಾರ ಸಮರ್ಪಕವಾಗಿ ಪಾವತಿಸಲಾಗಿದೆ. ಕೋವಿಡ್‌ನಿಂದಾಗಿ ಎರಡು ವರ್ಷದಲ್ಲಿ ಕೇಂದ್ರ, ರಾಜ್ಯದಲ್ಲಿ ತೆರಿಗೆ ವಸೂಲಿ ಕಡಿಮೆಯಾಗಿದೆ. ಹೀಗಾಗಿ, ನಷ್ಟ ಪರಿಹಾರವನ್ನು ನೇರವಾಗಿ ಪಾವತಿಸದೆ ಸಾಲದ ರೂಪದಲ್ಲಿ ನೀಡಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT