ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ಅಧಿಕಾರಿಗಳಿಂದ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಬಂಧನ

Last Updated 10 ಮಾರ್ಚ್ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಅಸಹಕಾರ ತೋರಿದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪೊಲೀಸ್ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.

ವಿಕ್ಟರ್‌ ಸೈಮನ್‌ ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ರಾಜ್ಯದ 28 ಸ್ಥಳಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದರು. ಸೈಮನ್‌ ಅವರ ಬಳಿ ಈವರೆಗೆ ಆದಾಯಕ್ಕಿಂತಲೂ ₹ 2.28 ಕೋಟಿ ಮೌಲ್ಯದ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.

ಎಲ್ಲ ಪ್ರಶ್ನೆಗಳಿಗೂ ‘ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದರು. ತನಿಖೆಗೆ ಅಸಹಕಾರ ತೋರಿದ ಕಾರಣದಿಂದ ಎಸಿಬಿ ಡಿವೈಎಸ್‌ಪಿ ವಜೀರ್‌ ಅಲಿಖಾನ್‌ ನೇತೃತ್ವದ ತನಿಖಾ ತಂಡ, ವಿಕ್ಟರ್‌ ಅವರನ್ನು ಬುಧವಾರ ಬೆಳಿಗ್ಗೆ ಬಂಧಿಸಿದೆ.

‘ವಿಕ್ಟರ್‌ ಸೈಮನ್‌ ಅವರನ್ನು ಬಂಧಿಸಿದ ಬಳಿಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯತು. ತನಿಖಾ ತಂಡದ ಕೋರಿಕೆಯಂತೆ ಆರೋಪಿಯನ್ನು ಶನಿವಾರದವರೆಗೂ ಎಸಿಬಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

‘ವಿಕ್ಟರ್‌ ಬಳಿಯಲ್ಲಿ ದುಬಾರಿ ಬೆಲೆ ಕಾರುಗಳ ಹಲವು ಕೀಗಳು ದೊರಕಿವೆ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮೊಬೈಲ್‌ ತೆರೆಯಲು ಪಾಸ್‌ವರ್ಡ್‌ ನೀಡುತ್ತಿಲ್ಲ. ಮನೆಯಲ್ಲಿ ಪತ್ತೆಯಾಗಿರುವ ಭಾರಿ ಮೌಲ್ಯದ ಆಸ್ತಿ ದಾಖಲೆಗಳ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಈ ಕಾರಣದಿಂದಾಗಿಯೇ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ಅಧಿಕಾರಿಗಳಿಂದ ತಪಾಸಣೆ: ಬೆಳಗಾವಿಯ ಉಪ ಮುಖ್ಯ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಹಣಮಂತ ಶಿವಪ್ಪ ಚಿಕ್ಕಣ್ಣನವರ ಮೇಲೂ ಮಂಗಳವಾರ ಎಸಿಬಿ ದಾಳಿ ನಡೆದಿತ್ತು. ಅವರು ಅಲ್ಲಿ ಎಲೆಕ್ಟ್ರಿಕ್‌ ಉಪಕರಣಗಳ ಮಳಿಗೆ ಹೊಂದಿರುವುದು ಪತ್ತೆಯಾಗಿತ್ತು. ಅಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಎಂಟು ಅಧಿಕಾರಿಗಳ ತಂಡ ಬುಧವಾರ ತಪಾಸಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಕ್ಟರ್ ಸೈಮನ್‌ ಮನೆಯಲ್ಲಿ 22.36 ಲೀಟರ್‌ ಹಾಗೂ ಹಾವೇರಿಯ ಕೈಗಾರಿಕೆಗಳು ಮತ್ತು ಬಾಯ್ಲರ್ಸ್‌ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ್‌ ಮನೆಯಲ್ಲಿ 34.5 ಲೀಟರ್‌ ಮದ್ಯದ ದಾಸ್ತಾನು ಪತ್ತೆಯಾಗಿತ್ತು. ಇಬ್ಬರ ವಿರುದ್ಧವೂ ಅಬಕಾರಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT