ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ವಿದ್ಯಾರ್ಥಿನಿಯರಿಗೆ 72 ಚಿನ್ನದ ಪದಕ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಇಂದು-: ಆನ್‌ಲೈನ್‌ನಲ್ಲಿ ವೀಕ್ಷಣೆಗೆ ಅವಕಾಶ
Last Updated 27 ನವೆಂಬರ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವವು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಶನಿವಾರ (ನ.28) ನಡೆಯಲಿದೆ. ಒಟ್ಟು 986 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 41 ವಿದ್ಯಾರ್ಥಿನಿಯರು 72 ಚಿನ್ನದ ಪದಕಗಳನ್ನು ಗಳಿಸಿರುವುದು ಈ ಘಟಿಕೋತ್ಸವದ ವಿಶೇಷ.

‘ರಾಜ್ಯಪಾಲ ವಜುಭಾಯಿ ವಾಲಾ ಪದವಿ ಪ್ರದಾನ ಮಾಡಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ಕೆ.ಶಿವನ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ ಉಪಸ್ಥಿತರಿರುವರು. ಇಡೀ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲೂ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಈ ಬಾರಿ ಒಟ್ಟು 121 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ. ಒಟ್ಟಾಾರೆ 121 ಚಿನ್ನದ ಪದಕಗಳಲ್ಲಿ 20 ಪಿಎಚ್‌.ಡಿ ವಿದಾರ್ಥಿಗಳ ಪಾಲಾಗಿವೆ. ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಕ್ರಮವಾಗಿ ತಲಾ 54 ಮತ್ತು 47 ಪದಕಗಳನ್ನು ಗಳಿಸಿದ್ದಾರೆ. 18 ಯುವಕರು 49 ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅವರು ಹೇಳಿದರು.

‘ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು ಕೃಷಿ ವಿಜ್ಞಾನದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ’ ಎಂದು ಹೇಳಿದರು.

ಪದವಿ ಪಡೆದವರಲ್ಲಿ 107 ಜನ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಪರಿಷತ್), 51 ಅನಿವಾಸಿ ಭಾರತೀಯರು ಹಾಗೂ ಮೂವರು ವಿದೇಶಿಯರಿದ್ದಾಾರೆ. ಅದೇ ರೀತಿ, ಸ್ನಾತಕೋತ್ತರ ಪದವೀಧರರಲ್ಲಿ 77 ವಿದ್ಯಾರ್ಥಿಗಳು ಐಸಿಎಆರ್/ ಜೆಎನ್‌ಯು, ಐವರು ಅನಿವಾಸಿ ಭಾರತೀಯ ಮತ್ತು ಮೂವರು ವಿದೇಶಿಗರಾಗಿದ್ದಾರೆ. ಡಾಕ್ಟೊರಲ್ ಪದವಿಯಲ್ಲೂ ಮೂವರು ವಿದೇಶಿಗರಿದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವವು ಸಾಮಾನ್ಯವಾಗಿ ಫೆಬ್ರುವರಿಯಲ್ಲಿ ನಡೆಯುತ್ತಿತ್ತು. ಕೊರೊನಾ ಬಿಕ್ಕಟ್ಟಿನ ಕಾರಣ ಈ ಬಾರಿ ವಿಳಂಬವಾಗಿದೆ.

ಏಳು ವಿದ್ಯಾರ್ಥಿಗಳಿಂದ ಚಿನ್ನದ ಬೇಟೆ
ಒಟ್ಟು 121 ಚಿನ್ನದ ಪದಕಗಳಲ್ಲಿ 38 ಚಿನ್ನದ ಪದಕಗಳನ್ನು ಏಳು ವಿದ್ಯಾರ್ಥಿಗಳು ಬಾಚಿಕೊಂಡಿದ್ದಾಾರೆ. ಇದರಲ್ಲಿ ಬಿಎಸ್ಸಿಯಲ್ಲಿ (ಕೃಷಿ) ಶರತ್ ಕೊಥಾರಿ 11 ಹಾಗೂ ರಾಹುಲ್ ಗೌಡ 9 ಮತ್ತು ಬಿಎಸ್ಸಿಯಲ್ಲಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಪಿ. ಹಂಸ 7 ಚಿನ್ನದ ಪದಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ.

ಇದಲ್ಲದೆ ಘಟಿಕೋತ್ಸವದಲ್ಲಿ 22 ದಾನಿಗಳ ಚಿನ್ನದ ಪದಕ ಪ್ರಮಾಣಪತ್ರ ಕೂಡ ಪ್ರದಾನ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT