ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಕಣ್ಣು: ಕಾಮಗಾರಿಗೆ ಒತ್ತು

ಬಜೆಟ್‌ನಲ್ಲಿ ನೀಡಿದ ಮೊತ್ತಕ್ಕಿಂತ ಮೂರುಪಟ್ಟು ಹೆಚ್ಚು ಮೊತ್ತಕ್ಕೆ ಮಂಜೂರಾತಿ
Last Updated 11 ಆಗಸ್ಟ್ 2022, 20:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಣಿಗೊಳ್ಳುತ್ತಿರುವ ಹೊತ್ತಿನಲ್ಲೇ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒದಗಿಸಿದ ಮೊತ್ತಕ್ಕಿಂತ ಸುಮಾರು ಮೂರು ಪಟ್ಟು ಅಧಿಕ ವೆಚ್ಚದ 13 ಸಾವಿರಕ್ಕೂ ಹೆಚ್ಚು ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ಮಂಜೂರಾತಿ ನೀಡಿದೆ.

ಒಂದೇ ಲೆಕ್ಕ ಶೀರ್ಷಿಕೆಯಡಿ (5054) ಈ ಎಲ್ಲ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ ಬಹುತೇಕ ಕಾಮಗಾರಿಗಳಿಗೆ ಶಾಸಕರ ಬೇಡಿಕೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡಿದ್ದಾರೆ.

ಬಜೆಟ್‌ನಲ್ಲಿ ಅನುದಾನ ಒದಗಿಸದೇ ಇದ್ದರೂ, ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಮೂಲಕ ಶಾಸಕರನ್ನು ಸಂತೃಪ್ತಿಪಡಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

2021–22 ಮತ್ತು 2022–23ನೇ ಸಾಲಿನ ಬಜೆಟ್‌ನಲ್ಲಿ ₹ 1,520 ಕೋಟಿ ಮೊತ್ತವನ್ನು ಈ ಉದ್ದೇಶಕ್ಕೆ ನೀಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ₹ 4,248.61 ಕೋಟಿ ವೆಚ್ಚದ ಒಟ್ಟು 13,850 ರಸ್ತೆ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ.

ಒಟ್ಟು ಕಾಮಗಾರಿಯಲ್ಲಿ ಐದನೇ ಎರಡು ಭಾಗದಷ್ಟು ಕಾಮಗಾರಿಗಳನ್ನು ಬಿಜೆಪಿ ಪಾಲಿಗೆ ಮಹತ್ವದ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ತುಮಕೂರು ಜಿಲ್ಲೆಗಳಿಗೆ ಮಂಜೂರು ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಬಿಜೆಪಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವ ಹಾಸನ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಹೊಸ ರಸ್ತೆ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ.

ಆದರೆ, ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪೈಕಿ ಹಲವು ರಸ್ತೆಗಳ ಕಾಮಗಾರಿ ಇನ್ನೂ ಆರಂಭ ಆಗದಿರುವುದನ್ನು ಗಮನಿಸಿರುವ ಮುಖ್ಯಮಂತ್ರಿ, ಶೀಘ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕಾಮಗಾರಿಗಳು ಪೂರ್ಣಗೊಂಡ ಬಳಿಕ ಬಿಲ್‌ಗಳ ಪಾವತಿಗಾಗಿ ಆಡಳಿತಾತ್ಮಕ ಅನುಮೋದನೆಗೆ ಕಳುಹಿಸಲಾಗುತ್ತದೆ. ಈ ಬಿಲ್‌ಗಳನ್ನು ಬಾಕಿ ಬಿಲ್‌ಗಳೆಂದು ಪರಿಗಣಿಸಿ ಪೂರಕ ಅಂದಾಜಿನಲ್ಲಿ ಸೇರಿಸಲಾಗುತ್ತದೆ. ಆ ಮೂಲಕ, ಬಜೆಟ್‌ ಹಂಚಿಕೆಗಿಂತಲೂ ಹೆಚ್ಚು ಎಂದು ಪರಿಗಣಿಸಿ ಪಾವತಿಸಲಾಗುತ್ತದೆ’ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ (2018–19) ಅವಧಿಯಿಂದಲೂ 5054 ಲೆಕ್ಕ ಶೀರ್ಷಿಕೆಯಡಿ ಮಂಜೂರಾತಿ ನೀಡಿದ ಕಾಮಗಾರಿಗಳ ಬಿಲ್‌ ಬಾಕಿ ಇದೆ. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ₹ 983 ಕೋಟಿ ಮೊತ್ತದ ಬಿಲ್‌ಗಳನ್ನು ವಿಲೇವಾರಿ ಮಾಡಿದ್ದರು. ಆ ಬಳಿಕ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ₹ 2,100 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT