ಬುಧವಾರ, ಮೇ 18, 2022
23 °C
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನ

ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ–2015ರ ತಿದ್ದುಪಡಿ ಮಸೂದೆಗೆ ಕೇಂದ್ರ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ. ಉದ್ದೇಶಿತ ತಿದ್ದುಪಡಿಗಳು ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವುದಲ್ಲದೆ ಮಕ್ಕಳ ರಕ್ಷಣಾ ಘಟಕಗಳು ಹಾಗೂ ಬಾಲ ನ್ಯಾಯ ಪೊಲೀಸ್‌ ಘಟಕಗಳನ್ನು ಅವರ ಅಧಿಕಾರ ವ್ಯಾಪ್ತಿಯೊಳಗೆ ತರುತ್ತವೆ ಎಂದು ಸರ್ಕಾರ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ‘ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ-2021’ ಅನ್ನು ಮಂಡಿಸುವ ಸಾಧ್ಯತೆ ಇದೆ. ತಿದ್ದುಪಡಿ ಮಸೂದೆಯು ಅಂಗೀಕಾರವಾದರೆ ಬಾಲ ನ್ಯಾಯವನ್ನು ಜಾರಿ ಮಾಡುವ ಎಲ್ಲಾ ಘಟಕಗಳ ಮೇಲುಸ್ತುವಾರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಲಭಿಸಲಿದೆ.

‘ಮಕ್ಕಳ ಕಲ್ಯಾಣ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆಯನ್ನು ತರುವ ಉದ್ದೇಶದಿಂದ ಇಂಥ ಸಮಿತಿಗಳಿಗೆ ಸದಸ್ಯರಾಗಿ ಆಯ್ಕೆಯಾಗುವವರ ಹಿನ್ನೆಲೆಯನ್ನು ಪರೀಕ್ಷಿಸಲು ಸಹ ಅವಕಾಶ ನೀಡಲಾಗಿದೆ. ಪ್ರಸಕ್ತ ಅಂಥ ವ್ಯವಸ್ಥೆ ಇಲ್ಲ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

‘ಮಕ್ಕಳ ಆರೈಕೆ ಕೇಂದ್ರದ ನೋಂದಣಿಗಾಗಿ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೂ ಮುನ್ನ, ಜಿಲ್ಲಾಧಿಕಾರಿಯು ಅಂಥ ಸಂಸ್ಥೆಯ ಹಿನ್ನೆಲೆ ಮತ್ತು ಅದರ ಸಾಮರ್ಥ್ಯವನ್ನು ಕುರಿತು ಪರಿಶೀಲನೆ ನಡೆಸಬೇಕಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಸಂಸ್ಥೆಯೊಂದರ ಸಾಮರ್ಥ್ಯ ಹಾಗೂ ಇತರ ಸೌಲಭ್ಯಗಳ ಪರಿಶೀಲನೆ ನಡೆಸಲು ಅವಕಾಶ ಇಲ್ಲ. ಮಕ್ಕಳ ಕಲ್ಯಾಣ ಸಮಿತಿಗಳು, ಬಾಲನ್ಯಾಯ ಪೊಲೀಸ್‌ ಘಟಕಗಳು ಹಾಗೂ ನೋಂದಾಯಿತ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆಯೂ ಜಿಲ್ಲಾಧಿಕಾರಿ ಮೌಲ್ಯಮಾಪನ ಮಾಡಬಹುದು. ಮಾನವ ಕಳ್ಳಸಾಗಾಣಿಕೆ, ಮಾದಕ ವ್ಯಸನ, ಪಾಲಕರಿಂದ ತ್ಯಜಿಸಲ್ಪಟ್ಟವರು ಮತ್ತು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆಗೆ ಒಳಗಾದ ಮಕ್ಕಳನ್ನು ‘ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು’ ಎಂದು ಪರಿಗಣಿಸಲು ಸಾಧ್ಯವಾಗುವಂತೆ ಬಾಲನ್ಯಾಯ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ’ ಎಂದು ಸ್ಮೃತಿ ತಿಳಿಸಿದರು.

ದೂರಸಂಪರ್ಕ ಕ್ಷೇತ್ರಕ್ಕೆ ₹12 ಸಾವಿರ ಕೋಟಿ ಕೊಡುಗೆ
ದೂರಸಂಪರ್ಕ ಸಲಕರಣೆಗಳನ್ನು ಭಾರತದಲ್ಲಿ ತಯಾರಿಸುವುದಕ್ಕೆ ಉತ್ತೇಜನ ನೀಡಲು ₹12,195 ಕೋಟಿ ಕೊಡುಗೆಯ (ಐದು ವರ್ಷಗಳಲ್ಲಿ) ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

‘ಈ ಕ್ರಮವು ₹2.44 ಲಕ್ಷ ಕೋಟಿ ಮೌಲ್ಯದ ಸಲಕರಣೆಗಳ ತಯಾರಿಕೆಗೆ ಉತ್ತೇಜನ ನೀಡುವುದರ ಜತೆಗೆ ನೇರ ಹಾಗೂ ಪರೋಕ್ಷವಾಗಿ ಸುಮಾರು 40,000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. 2021ರ ಏಪ್ರಿಲ್‌ 1ರಿಂದ ಇದು ಜಾರಿಯಾಗಲಿದೆ’ ಎಂದು ಕೇಂದ್ರದ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದರು.

‘ತಯಾರಿಕಾ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದ ಶಕ್ತಿಶಾಲಿ ರಾಷ್ಟ್ರವಾಗಿ ರೂಪಿಸುವುದು ಮತ್ತು ವ್ಯಾಪಾರ ಮಾಡಲು ಭಾರತವು ಸೂಕ್ತ ರಾಷ್ಟ್ರ ಎಂಬ ವಾತಾವರಣವನ್ನು ನಿರ್ಮಿಸುವುದು ಸರ್ಕಾರದ ಉದ್ದೇಶ. ದೂರಸಂಪರ್ಕ ಕ್ಷೇತ್ರಕ್ಕೆ ಅಗತ್ಯವಿರುವ ಸಾಧನಗಳ ತಯಾರಿಕೆ ಆರಂಭಿಸುವ ಮೂಲಕ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯನ್ನು ಇನ್ನಷ್ಟು ಚುರುಕುಗೊಳಿಸಲು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿತ್ತು.

‘ಈ ಯೋಜನೆಯಿಂದ ದೂರಸಂಪರ್ಕ ಕ್ಷೇತ್ರದ ಸುಮಾರು ₹50,000 ಕೋಟಿ ಮೌಲ್ಯದ ಉಪಕರಣಗಳ ಆಮದು ಕಡಿಮೆಯಾಗುವುದು. ‘ಮೇಡ್‌ ಇನ್‌ ಇಂಡಿಯಾ’ ಟ್ಯಾಗ್‌ ಹೊಂದಿದ ಉತ್ಪನ್ನಗಳು ದೇಶೀಯ ಮಾರುಕಟ್ಟೆಗೆ ಬರುವುದಲ್ಲದೆ ರಫ್ತು ಕೂಡ ಆಗಲಿವೆ. ಶೀಘ್ರದಲ್ಲೇ ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ ತಯಾರಿಕೆಗೂ ಇಂಥ ಪ್ರೋತ್ಸಾಹ ಯೋಜನೆಯನ್ನು ರೂಪಿಸಲಾಗುವುದು’ ಎಂದು ರವಿಶಂಕರ್ ತಿಳಿಸಿದರು.

‘2014ರಲ್ಲಿ ದೇಶದಲ್ಲಿ ₹1.9 ಲಕ್ಷ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. 2019–20ನೇ ಸಾಲಿನಲ್ಲಿ ಅದರ ಪ್ರಮಾಣ  ₹5.5 ಲಕ್ಷ ಕೋಟಿಗೆ ಏರಿಕೆಯಾಗಿದೆ. ನೆರೆ ರಾಷ್ಟ್ರದಿಂದ 14 ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ’ ಎಂದು ಯಾವ ದೇಶದ ಹೆಸರನ್ನೂ ಉಲ್ಲೇಖಿಸದೆ ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು