ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುಂಡ ಕ್ಷೇತ್ರಗಳಲ್ಲಿ ‘ಅಮಿತಾಸ್ತ್ರ’ ಪ್ರಯೋಗ

ಹೊಸ ಮುಖಗಳಿಗೆ ಆದ್ಯತೆ ಸಾಧ್ಯತೆ; ಬಿಜೆಪಿಯಲ್ಲಿ ಮಿಂಚಿನ ಸಂಚಲನ
Last Updated 28 ಜನವರಿ 2023, 6:25 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ (ಕಿತ್ತೂರು ತಾ.): ಬೆಳಗಾವಿ ಗ್ರಾಮೀಣ, ಬೈಲಹೊಂಗಲ ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರ
ಗಳಲ್ಲಿ ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಆದ್ಯತೆ ನೀಡಲಿದೆಯೇ?

ಈ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚನ್ನಮ್ಮನ ಕಿತ್ತೂರು ಹೊರತುಪಡಿಸಿ ಉಳಿದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈ ನಾಲ್ಕೂ ಕ್ಷೇತ್ರಗಳಿಗೆ ಕೇಂದ್ರಬಿಂದುವಾದ ಎಂ.ಕೆ.ಹುಬ್ಬಳ್ಳಿಯಲ್ಲಿ ಜ. 28ರಂದು ಕೇಂದ್ರ ಗೃಹಮಂತ್ರಿ
ಅಮಿತ್‌ ಶಾ ಜನಸಂಕಲ್ಪ ಯಾತ್ರೆ ನಡೆಸಲಿದ್ದಾರೆ.

ಕಳೆದ ಬಾರಿ ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆಯೋ ಅಲ್ಲಿಂದಲೇ ಗೆಲುವಿನ ಕಮಲ ಅರಳಿಸಬೇಕು ಎಂಬುದು ಅಮಿತ್‌ ಶಾ ಸೂತ್ರ. ಗುಜರಾತ್‌ ರಾಜ್ಯದಲ್ಲಿ ಸೋಲುಂಡಿದ್ದ ಕ್ಷೇತ್ರಗಳನ್ನು ಗೆಲ್ಲಲು ಹೊಸ ಮುಖಗಳಿಗೆ ಟಿಕೆಟ್‌ ನೀಡಿ ಯಶಸ್ವಿಯಾದರು. ಅದೇ ಮಾದರಿಯನ್ನು ಜಿಲ್ಲೆಯಲ್ಲೂ ಅನುಸರಿಸಲಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವುದಕ್ಕೆ ಹಳಬರ ನಡುವಿನ ಜಿದ್ದಾಜಿದ್ದಿಯೂ ಕಾರಣವಾಯಿತು. ಹೀಗಾಗಿ, ಈ ಬಾರಿ ಹೊಸ ಮುಖಗಳನ್ನು ಕಣಕ್ಕಿಳಿಸುವುದು ಶಾ ತಂತ್ರಗಳಲ್ಲಿ ಒಂದು.
ಸಹಜವಾಗಿಯೇ ಇದು ಆಕಾಂಕ್ಷಿಗಳಲ್ಲಿ, ಕಾರ್ಯಕರ್ತರಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ನಾಯಕರಾದ ಡಾ.ವಿಶ್ವನಾಥ ಪಾಟೀಲ ಹಾಗೂ ಜಗದೀಶ ಮೆಟಗುಡ್ಡ ಅವರ ಮಧ್ಯದ ಜಿದ್ದಿನಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರು. ಖಾನಾಪುರದಲ್ಲಿ ಬಿಜೆಪಿಗೆ ನಿಷ್ಠರಾಗಿರುವ ಎಂಇಎಸ್ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾಗಿಯೂ ಕಾಂಗ್ರೆಸ್‌ಗೆ ಗೆಲುವಾಯಿತು. ಬಿಜೆಪಿ ಅಭ್ಯರ್ಥಿಯಾಗಿದ್ದ ವಿಠಲ ಹಲಗೇಕರ, ಬಂಡಾಯ ಅಭ್ಯರ್ಥಿ ಜ್ಯೋತಿಬಾ ರೇಮಾನಿ, ಎಂಇಎಸ್‌ನಿಂದ ಕಣಕ್ಕಿಳಿದ ಅರವಿಂದ ಪಾಟೀಲ ಅವರ ಮಧ್ಯೆ ಮತಗಳು ಚದುರಿದವು. ಹೀಗಾಗಿ, ಎಂಇಎಸ್‌– ಬಿಜೆಪಿ
ಮುಷ್ಟಿಯಲ್ಲಿದ್ದ ಕ್ಷೇತ್ರದಲ್ಲೂ ಸೋಲು ಉಂಟಾಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಮರಾಠಿ ಮತಗಳನ್ನು ಎಂಇಎಸ್‌ ಕಸಿದುಕೊಂಡಿತು. ಹಿಂದೂ ನಿಷ್ಠರಾದ ಕಾರ್ಯಕರ್ತರಲ್ಲೇ ಒಡಕು ಮೂಡಿತು. ‘ಎಲ್ಲೆ ಮೀರಿದ ಮಾತು’ ಕೂಡ ಮಹಿಳಾ ಮತದಾರರನ್ನು ಕಾಂಗ್ರೆಸ್‌ನತ್ತ ವಾಲುವಂತೆ ಮಾಡಿತು.

ಇಂಥ ಯಾವುದೇ ತಪ್ಪು ಮರುಕಳಿಸಬಾರದು ಎಂಬ ಉದ್ದೇಶದಿಂದ ಹೊಸಬರಿಗೆ ಅವಕಾಶ ನೀಡುವ ಚಿಂತನೆ ನಡೆದಿದೆ. ಇದರೊಂದಿಗೆ ಕಿತ್ತೂರು ಕರ್ನಾಟಕ ಭಾಗಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡಿದ ಕೊಡುಗೆಗಳ ಲಾಭ ಪಡೆಯಲು ಈ ಸಂಕಲ್ಪ ಯಾತ್ರೆ ನಡೆದಿದೆ ಎನ್ನುವುದು ಮೂಲಗಳ ಮಾಹಿತಿ.

‘ಇದು ಜನಸಂಕಲ್ಪ ಯಾತ್ರೆ ಮಾತ್ರವಲ್ಲ ‘ಅಮಿತಾಸ್ತ್ರ’
ಎಂದೂ ಪಕ್ಷದ ಹಿರಿಯರು ವಿಶ್ಲೇಷಿಸಿದ್ದಾರೆ.

*

1 ಲಕ್ಷ ಕಾರ್ಯಕರ್ತರ ಭಾಗಿ ನಿರೀಕ್ಷೆ

ಅಮಿತ್‌ ಶಾ ಕಾರ್ಯಕ್ರಮಕ್ಕೆ 1 ಲಕ್ಷ ಕಾರ್ಯಕರ್ತರನ್ನು ನಿರೀಕ್ಷಿಸಲಾಗಿದೆ. ಇವರೆಲ್ಲರೂ ವಿಶೇಷ ಆಸಕ್ತಿಯ ಕಾರ್ಯಕರ್ತರೇ ಆಗಿರಬೇಕು ಎಂದೂ ಸೂಚಿಸಲಾಗಿದೆ. ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಸೇರಿ 1200 ಬೂತ್‌ಗಳಿವೆ. ಪ್ರತಿ ಬೂತ್‌ನಲ್ಲಿ 100 ಸುಶಿಕ್ಷಿತ ಹಾಗೂ ಆಸಕ್ತರನ್ನು ಕರೆತರಬೇಕು ಎಂದು ಗುರಿ ನೀಡಲಾಗಿದೆ. ಇಂಥ ಕಾರ್ಯಕರ್ತರನ್ನು ಮೊದಲು ಗಟ್ಟಿಗೊಳಿಸಬೇಕು. ಅವರ ಮೂಲಕ ಸಾಮಾನ್ಯರಿಗೂ ಬಿಜೆಪಿ ಸಾಧನೆಗಳನ್ನು ತಿಳಿಸಬೇಕು ಎಂಬ ‘ಸಂಕಲ್ಪ’ ಮಾಡಲಾಗಿದೆ ಎನ್ನುತ್ತವೆ ಮೂಲಗಳು.

ಹಾಲಿ, ಮಾಜಿ ಶಾಸಕರು, ಟಿಕೆಟ್‌ ಆಕಾಂಕ್ಷಿಗಳು ಸಾಮರ್ಥ್ಯ ಪ್ರದರ್ಶಿಸಲು ಈ ವೇದಿಕೆ ಮುಕ್ತವಾಗಿದೆ. ಮುಂದೆ ಪಕ್ಷವು ಯಾರಿಗೆ ಟಿಕೆಟ್‌ ನೀಡುವುದೋ ಅವರನ್ನು ಒಪ್ಪಿಕೊಳ್ಳುವುದು ಉಳಿದೆಲ್ಲರಿಗೂ ಅನಿವಾರ್ಯ. ಈ ಬಾರಿ ‘ಕಮಲವೇ ಅಭ್ಯರ್ಥಿ, ಕಮಲದ ಹಿಂದಿನ ವ್ಯಕ್ತಿ ಅಲ್ಲ’ ಎಂಬ ಸಂದೇಶವನ್ನೂ ಹೈಕಮಾಂಡ್‌ ರವಾನಿಸಿದೆ. ಜ.28ಕ್ಕೆ ಜನಸಂಕಲ್ಪ ಯಾತ್ರೆ ಮುಗಿಯುತ್ತಿದ್ದಂತೆಯೇ ಜ.29 ಹಾಗೂ 30ರಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಂಕಲ್ಪ ಯಾತ್ರೆಯ ಪೂರ್ವಾಪರಗಳೂ ಅಲ್ಲಿ ಚರ್ಚೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT