ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಿಸಿ: ಶ್ರೀ ಪ್ರಣವಾನಂದ ಸ್ವಾಮೀಜಿ

ಬೇಡಿಕೆ ಈಡೇರದಿದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ
Last Updated 1 ಅಕ್ಟೋಬರ್ 2021, 12:59 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಶೀಘ್ರವೇ ಅಭಿವೃದ್ಧಿ ನಿಗಮ ಘೋಷಿಸಬೇಕು. ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ದಿವಂಗತ ಎಸ್‌.ಬಂಗಾರಪ್ಪನವರ ಹೆಸರಿಡಬೇಕು. ಇಲ್ಲದೇ ಹೋದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ಸಮುದಾಯವು ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ’ ಎಂದು ರಾಣೆಬೆನ್ನೂರು ತಾಲ್ಲೂಕು ಅರೆಮಲ್ಲಾಪುರದ ಶ್ರೀ ಶರಣ ಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ‘ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು. ಸರ್ಕಾರದ ಈ ನಿರ್ಧಾರವನ್ನು ಈಡಿಗ ಸಮುದಾಯ ಬಲವಾಗಿ ಖಂಡಿಸುತ್ತದೆ’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಳಿಯ ಅಧ್ಯಕ್ಷರೂ ಆಗಿರುವ ಸ್ವಾಮೀಜಿ ತಿಳಿಸಿದರು.

‘ಸಮುದಾಯದ ಜನರನ್ನು ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಸಿಂಧನೂರು ಹಾಗೂ ಯಾದಗಿರಿ ಜಿಲ್ಲೆಯ ಕೆಲ ಭಾಗಗಳ ಹಲವು ಕುಟುಂಬಗಳು ಈಗಾಗಲೇ ಮತಾಂತರವಾಗಿವೆ. ಇದು ಕೂಡಲೇ ನಿಲ್ಲಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಕಾನೂನನ್ನೂ ಸರ್ಕಾರ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿರುವ ಎಲ್ಲಾ ಸಮುದಾಯಗಳಿಗೂ ನಿಗಮ ಮಂಡಳಿ ಘೋಷಿಸಲಾಗಿದೆ. ಈ ವಿಚಾರದಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ. ಒಟ್ಟು 26 ಒಳಪಂಗಡ ಸೇರಿ ಸುಮಾರು 80 ಲಕ್ಷ ಜನರಿರುವ ನಮ್ಮ ಸಮಾಜ ಆರ್ಥಿಕವಾಗಿ ಹಿಂದುಳಿದಿದೆ. ಆಡಳಿತರೂಢ ಬಿಜೆಪಿಯಲ್ಲಿ ಸಮುದಾಯದ ಏಳು ಮಂದಿ ಶಾಸಕರಿದ್ದಾರೆ. ಇಬ್ಬರು ಸಚಿವರಾಗಿದ್ದಾರೆ. ಅಭಿವೃದ್ಧಿ ನಿಗಮದ ವಿಚಾರದಲ್ಲಿ ಅವರು ಕೂಡ ಗಟ್ಟಿ ಧ್ವನಿ ಎತ್ತುತ್ತಿಲ್ಲ’ ಎಂದರು.

‘ನಮ್ಮ ಕುಲ ಬಾಂಧವರು ಸೇಂದಿ ಇಳಿಸುವ ಮತ್ತು ಮಾರುವ ಕಸುಬು ನಂಬಿಕೊಂಡೇ ಬದುಕು ಸಾಗಿಸುತ್ತಿದ್ದರು. ಅದನ್ನು ನಿಲ್ಲಿಸಿದ ಮೇಲೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಮಸ್ಕಿ ವಿಧಾನಸಭೆಯ ಉಪ ಚುನಾವಣೆಯ ಫಲಿತಾಂಶ ಬಂದ ಕೂಡಲೇ ಅಭಿವೃದ್ಧಿ ನಿಗಮ ಪ್ರಕಟಿಸುವುದಾಗಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಹಲವು ಸಲ ಮನವಿ ಮಾಡಿದ್ದೇವೆ. ಅವರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತರ ಬೇಡಿಕೆಗಳು
* ಈಚಲು ಮರ, ತಾಳೆ ಗಿಡ, ತೆಂಗಿನ ಮರ ಇರುವ ಪ್ರದೇಶಗಳಾದ ರಾಯಚೂರು, ಸಿಂದನೂರು, ಕೊಪ್ಪಳ, ಯಾದಗಿರಿ, ಮಸ್ಕಿ ಭಾಗಗಳಲ್ಲಿ ಸೇಂದಿ ಇಳಿಸುವುದಕ್ಕೆ ಅನುಮತಿ ನೀಡಬೇಕು.
* ಈಡಿಗ ಸಮುದಾಯದವರಿಗೆ ವಾಸಯೋಗ್ಯ ಮನೆಗಳೇ ಇಲ್ಲ. ಹೀಗಾಗಿ 10 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು.
* ಎಂಎಸ್‌ಐಎಲ್‌ ಸಂಸ್ಥೆಯಲ್ಲಿ ಸಮುದಾಯದ ಯುವಕರಿಗೆ ಶೇ 50ರಷ್ಟು ಮೀಸಲಾತಿ ನೀಡಬೇಕು.
* ಹಳ್ಳಿಗಳಲ್ಲಿ ಗುಣಮಟ್ಟದ ಚಿಲ್ಲರೆ ಮದ್ಯ ಮಾರಾಟ ಮಾಡಲು ಪರವಾನಗಿ ನೀಡಬೇಕು.
* ಪಹಣಿಯಲ್ಲಿ ಸೇಂದಿ ವನ ಮತ್ತು ಈಚಲು ಮರದ ಉಲ್ಲೇಖವಿರುವ ಜಮೀನನ್ನು ಸಮುದಾಯದವರಿಗೆ ಮರಳಿಸಿ ಅದರಲ್ಲಿ ಕೃಷಿ ಮಾಡಲು ಅವಕಾಶ ಮಾಡಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT