ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಇಟ್ಟರೆ ಕೊಡಲಿಯಿಂದ ಕಡಿಯುತ್ತೇನೆ: ಸಕ್ಕರೆ ಕಾರ್ಖಾನೆ ಎಂಡಿ ಬೆದರಿಕೆ ಆರೋಪ

ಕಾರ್ಮಿಕರಿಗೆ ಹಲ್ಯಾಳ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಧಮಕಿ
Last Updated 9 ಸೆಪ್ಟೆಂಬರ್ 2021, 22:04 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ‘ಯಾವುದಾದರೂ ಬೇಡಿಕೆಯನ್ನು ನನ್ನ ಬಳಿಗೆ ತಂದರೆ ನಿಮ್ಮನ್ನು ಕೊಡಲಿಯಿಂದ ಕಡಿಯುತ್ತೇನೆ’ ಎಂದು ಹಲ್ಯಾಳ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಕಾರ್ಮಿಕರಿಗೆ ಧಮಕಿ ಹಾಕಿದ್ದಾರೆ’ ಎಂದು ಆರೋಪಿಸಿ ಕಾರ್ಮಿಕರು ಗುರುವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆ ಈಡೇರಿಸಲು ಕೋರಿ ದೂರವಾಣಿ ಮೂಲಕ ಕರೆ ಮಾಡಿದ್ದ ಕಾರ್ಮಿಕರಿಗೆ, ‘ಏನಾದರೂ ಕೇಳಿದರೆ ಹಾಗೂ ಯಾವುದಾದರೂ ಬೇಡಿಕೆ ನಮ್ಮ ಬಳಿ ಇಟ್ಟರೆ ನಿಮ್ಮನ್ನ ಕೊಡಲಿಯಿಂದ ಕಡಿಯುತ್ತೇನೆ. ಕೆಲಸದಿಂದ ತೆಗೆಯುತ್ತೇನೆ’ ಎಂದೆಲ್ಲ ಪಾಟೀಲರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷರಿಂದ ಮನವೊಲಿಕೆ ಯತ್ನ: ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ‘ವ್ಯವಸ್ಥಾಪಕ ನಿರ್ದೇಶಕರಿಂದ ನಿಮಗೆ ಕ್ಷಮೆ ಕೇಳಿಸುತ್ತೇನೆ, ಪ್ರತಿಭಟನೆ ಹಿಂದಕ್ಕೆ ಪಡೆಯಿರಿ’ ಎಂದು ಮನವಿ ಮಾಡಿದರು. ಅದನ್ನು ನಿರಾಕರಿಸಿದ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದರು.

ಕಾರ್ಮಿಕರ ಸಂಘದ ಅಧ್ಯಕ್ಷ ಗುರು ಬೋರ್ಗಿಕರ ಮಾತನಾಡಿ, ‘ಹಲವು ವರ್ಷಗಳಿಂದ ದಬ್ಬಾಳಿಕೆ ನಡೆಯುತ್ತಿದೆ. ಆಡಳಿತದ ವಿರುದ್ಧ ಕಾರ್ಮಿಕರು ಮಾತನಾಡಲು ಆರಂಭಿಸಿದರೆ ಅವರಿಗೆ ಕೆಲಸದಿಂದ ಬಿಡುವು ಕೊಟ್ಟು, ಸಂಬಳ ನೀಡದೆ ಕಿರುಕುಳ ನೀಡುತ್ತಿದ್ದಾರೆ. ಯಾರ ವಿರುದ್ಧವೂ ಮಾತನಾಡುವುದಿಲ್ಲ ಎಂದು ಬಾಂಡ್‌ ಬರೆಸಿಕೊಳ್ಳಲಾಗುತ್ತಿದೆ. ಈ ಘಟನೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕ್ಷಮೆ ಕೇಳಿದರೆ ಸಾಲದು. ಅವರನ್ನು ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

‘ಆರೋಪ ಸುಳ್ಳು, ನಾನು ಹಾಗೇ ಹೇಳಿಲ್ಲ’

‘ಕೊಡಲಿಯಿಂದ ಕಡಿಯುತ್ತೇನೆ ಎಂದು ನಾನು ಹೇಳಿಲ್ಲ. ಕೆಲ ಕಾರ್ಮಿಕರು ಮಾಡಿರುವ ಆರೋಪ ಸುಳ್ಳು’ ಎಂದು ಜಿ.ಎಂ. ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಕೆಲಸ ಕಾಯಂ ಮಾಡಬೇಕು ಎಂದು ಆಗ್ರಹಿಸಿ ಅವರು ಬೇಡಿಕೆ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಗೆ ತಿಳಿಸಲಾಗುವುದು ಎಂದು ಹೇಳಿದ್ದೇನೆ. ಕಾರ್ಮಿಕರು ಗುರುವಾರ ಮಧ್ಯಾಹ್ನದಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT