ಮಂಗಳವಾರ, ಏಪ್ರಿಲ್ 20, 2021
32 °C

ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ: ಜನರ ಕೂಗಾಟ ಕೇಳಿ ಪರಾರಿಯಾಗಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕಲ್ಯಾಣನಗರದ ಬೈಪಾಸ್‌ ಮಾರ್ಗದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಮನೆಗೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿ ಹಾಕಿ ನಗ, ನಗದು ಕದ್ದೊಯಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಂಟರಮಕ್ಕಿಯ ಮೋಹನ್‌ (28) ಮತ್ತು ಸಚಿನ್‌ (23) ಬಂಧಿತರು.

ಶನಿವಾರ ಬೆಳಿಗ್ಗೆ 11 ಗಂಟೆ ಹೊತ್ತಿನಲ್ಲಿ ಇಬ್ಬರು ಹೆಲ್ಮೆಟ್‌ಧಾರಿಗಳು ಮನೆಗೆ ನುಗ್ಗಿದ್ದಾರೆ. ಅಡುಗೆಮನೆಯಲ್ಲಿದ್ದ ಸರೋಜಮ್ಮ ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿದ್ದಾರೆ.

ಬೀರುವಿನಲ್ಲಿದ್ದ ನಗ, ನಗದನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಸರೋಜಮ್ಮ ಅವರ ಪುತ್ರ ಮನೆಗೆ ಬಂದು ಕರೆಗಂಟೆ ಒತ್ತಿದ್ದಾರೆ. ಯಾರೂ ಬಾಗಿಲು ತೆರೆದಿಲ್ಲ. ಸಂಶಯಗೊಂಡು ಕೂಗಿದ್ದಾರೆ. ಅಕ್ಕಪಕ್ಕದ ಮನೆಯವರು ಹೊರಬಂದಿದ್ದಾರೆ.

ಹೆಲ್ಮೆಟ್‌ಧಾರಿಗಳು ಚಾಕು ಹಿಡಿದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪರಾರಿಯಾಗಲು ಬೈಕ್‌ ಏರಿ ಸಾಗಲು ಮುಂದಾಗಿದ್ದಾರೆ. ಆ ಮಾರ್ಗದಲ್ಲಿ ಸಾಗುತ್ತಿದ್ದ ಅಗ್ನಿಶಾಮಕ ವಾಹನ ಅವರಿಬ್ಬರನ್ನು ಅಡ್ಡಗಟ್ಟಿದೆ. ಬ್ಯಾಗ್‌ನಲ್ಲಿದ್ದ 76 ಗ್ರಾಂ ಒಡವೆ, ₹ 50 ಸಾವಿರ ನಗದು ತೆಗೆದುಕೊಂಡು, ಬ್ಯಾಗ್‌ ಬಿಸಾಕಿ ಓಡಿಹೋಗಿದ್ದಾರೆ.

ನಗರ ಠಾಣೆ ಪಿಎಸ್‌ಐ ಎನ್‌.ಗುರುಪ್ರಸಾದ್‌ ನೇತೃತ್ವದ ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳು ಸಾಲ ಮಾಡಿದ್ದಾರೆ. ಚಂದ್ರೇಗೌಡ ಅವರ ಮನೆಯಲ್ಲಿ ಹಣ ಇರುವುದನ್ನು ತಿಳಿದು ಇಬ್ಬರು ಒಟ್ಟಾಗಿ ಕಳವು ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.