ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಯಡಿಯೂರಪ್ಪ–ಸಂತೋಷ್‌ ಸಭೆ: ನಾಯಕತ್ವ ಬದಲಾವಣೆ ತೂಗುಗತ್ತಿ ದೂರ?

Last Updated 23 ಆಗಸ್ಟ್ 2020, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದ ನಾಯಕತ್ವ ಬದಲಾವಣೆಯ ‘ತೂಗುಗತ್ತಿ’ ಸದ್ಯಕ್ಕೆ ದೂರವಾಗಿದ್ದು, ರಾಜ್ಯದ ಸಂಪನ್ಮೂಲ ಸಂಗ್ರಹವನ್ನು ಬಲಪಡಿಸಿ ಅಭಿವೃದ್ಧಿ ಕಡೆಗೆ ಗಮನಹರಿಸುವಂತೆ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

‘ಸಚಿವ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ಸ್ವತಂತ್ರರಿದ್ದು, ವಿಸ್ತರಣೆಗೆ ಮುನ್ನ ಗಮನಕ್ಕೆ ತಂದರೆ ಸಾಕು’ ಎಂಬ ಸಂದೇಶ ರವಾನಿಸಲಾಗಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಗಣೇಶ ಹಬ್ಬದ ದಿನ ಸಿ.ಎಂ ಮನೆಗೆ ಭೇಟಿ ನೀಡಿದ್ದಾಗ ಕೆಲ ವಿಷಯಗಳನ್ನು ಗಮನಕ್ಕೆ ತಂದರು ಎಂದು ಮೂಲಗಳು ಹೇಳಿವೆ.

‘ವರಿಷ್ಠರು ನಿಮ್ಮ ಜತೆ ಸರಿ ಇಲ್ಲ, ಮುನಿಸಿಕೊಂಡಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿದೆ. ಅದು ಸರಿಯಲ್ಲ, ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅಧ್ಯಕ್ಷ ಜೆ.ಪಿ. ನಡ್ಡಾ ನಿಮ್ಮ ಬಗ್ಗೆ ಗೌರವ ಹೊಂದಿದ್ದಾರೆ’ ಎಂಬ ಅಭಿಪ್ರಾಯ ಸಂತೋಷ್‌ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಪದಾಧಿಕಾರಿಗಳ ಸರಣಿ ಸಭೆ

ಪಕ್ಷದ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಬಳಿಕ ಇದೇ ಮೊದಲ ಬಾರಿಗೆ ಸಂತೋಷ್‌ ಅವರು ಸರಣಿ ಸಭೆ ನಡೆಸಿ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಸಾಮಾಜಿಕ ಜಾಲತಾಣ ವಿಭಾಗ, ಪ್ರಧಾನಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿದರು. ಪಕ್ಷದ ಸಂಘಟನೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರು, ಪದಾಧಿಕಾರಿಗಳ ಸಭೆಯ ಕುರಿತು ಸುದ್ದಿಗಾರರ ಜತೆ ಮಾತನಾಡಿ, ಸಚಿವರ ಮೌಲ್ಯಮಾಪನ, ನಾಯಕತ್ವ ಬದಲಾವಣೆ ವಿಚಾರಗಳು ಚರ್ಚೆಗೆ ಬರಲಿಲಿಲ್ಲ. ಡಿ.ಜೆ.ಹಳ್ಳಿ ಗಲಭೆ, ಕೋವಿಡ್‌ ಕುರಿತಂತೆ ಸಚಿವರಿಂದ ಮಾಹಿತಿ ಪಡೆದರು. ನಾಯಕತ್ವ ಬದಲಾವಣೆ, ಮೌಲ್ಯಮಾಪನ ಬಗ್ಗೆ ಚರ್ಚೆ ನಡೆದಿದೆ ಎಂದು ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದರು.

ಸಿಎಂ ಬದಲಾವಣೆ ಚರ್ಚೆ ಆಗಿಲ್ಲ

‘ಬಿ.ಎಲ್‌.ಸಂತೋಷ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚಿಸಲಿಲ್ಲ. ಸರ್ಕಾರ ಮತ್ತು ಪಕ್ಷವನ್ನು ಬಲಪಡಿಸುವ ಕುರಿತು ಮಾತುಕತೆ ನಡೆದಿದೆ. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ’ ಎಂದು ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಪಕ್ಷವನ್ನು ಹೇಗೆ ಬಲಪಡಿಸಬೇಕು. ಪಕ್ಷವನ್ನು ಮತ್ತಷ್ಟು ಹೇಗೆ ಚುರುಕುಗೊಳಿಸಬಹುದು ಎಂಬ ಬಗೆ ಚರ್ಚೆ ನಡೆಯಿತು. ರಾಜಕೀಯ ಪ್ರಸ್ತಾಪ ಆಗಲಿಲ್ಲ ಎಂದೂ ಹೇಳಿದರು.

ದೂರವಾಣಿ ಕದ್ದಾಲಿಕೆ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿ ಸರ್ಕಾರ ಅಂತಹ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಕಾಂಗ್ರೆಸ್‌ ನಾಯಕರು ಹತಾಶೆಯಿಂದ ಈ ರೀತಿ ಟೀಕೆ ಮಾಡುತ್ತಿದ್ದಾರೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ದೂರಿದರು.

ಅಧಿವೇಶನಕ್ಕೂ ಮುನ್ನ ಬಿಎಸ್‌ವೈ ದೆಹಲಿಗೆ?

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಧಿವೇಶನಕ್ಕೂ ಮೊದಲೇ ದೆಹಲಿಗೆ ತೆರಳಿ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ತಿಂಗಳು ಅವರು ದೆಹಲಿಗೆ ಹೋಗಬೇಕಿತ್ತು. ಆದರೆ, ಕೊರೊನಾ ಸೋಂಕಿಗೆ ಒಳಗಾಗಿದ್ದು ಮತ್ತು ರಾಜ್ಯದಲ್ಲಿ ಪ್ರವಾಹ ಬಂದ ಕಾರಣ ದೆಹಲಿ ಯಾತ್ರೆಯನ್ನು ಮುಂದೂಡಿದರು. ಅಧಿವೇಶನಕ್ಕೆ ಮೊದಲೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಚಿವ ಸ್ಥಾನ ಪಡೆಯಲು ಅಥವಾ ಉಳಿಸಿಕೊಳ್ಳುವ ಉದ್ದೇಶದಿಂದ ಪ್ರಭಾವ ಬೀರಲು ದೆಹಲಿಗೆ ಯಾವುದೇ ಶಾಸಕರು ಬರಬಾರದು ಎಂಬ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT