ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಆರೋಪ: ರೋಶನ್‌ ಬೇಗ್‌ ವಿರುದ್ಧ ವಿಚಾರಣೆಗೆ ಅಸ್ತು

ಅಕ್ರಮ ಆಸ್ತಿ ಹೊಂದಿರುವ ಆರೋಪದ ಪ್ರಕರಣ
Last Updated 4 ನವೆಂಬರ್ 2020, 19:25 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ಮುಂದುವರಿಸದಂತೆ ಕೋರಿ ಮಾಜಿ ಶಾಸಕ ಆರ್‌. ರೋಷನ್‌ ಬೇಗ್‌ ಮತ್ತು ಅವರ ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ರೋಷನ್‌ ಬೇಗ್‌, ಅವರ ಪತ್ನಿ ಸಬೀಹಾ ರೋಷನ್‌ ಮತ್ತು ಪುತ್ರ ರುಮಾನ್‌ ಬೇಗ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಅವರಿದ್ದ ಏಕಸದಸ್ಯ ಪೀಠ, ‘ರೋಷನ್‌ ಬೇಗ್‌ ಅವರು ಮಾಜಿ ಶಾಸಕರಾಗಿರುವ ಕಾರಣದಿಂದ ಅವರ ವಿರುದ್ಧ ವಿಚಾರಣೆ ಆರಂಭಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದೂ ಸ್ಪಷ್ಟಪಡಿಸಿದೆ.

ಬೇಗ್‌ ಮತ್ತು ಕುಟುಂಬದವರ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ಕುರಿತು ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. 2012ರಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2014ರಲ್ಲಿ ಪ್ರಕರಣ ಮುಕ್ತಾಯಗೊಳಿಸಲು ಶಿಫಾರಸು ಮಾಡಿ ‘ಬಿ’ ವರದಿ ಸಲ್ಲಿಸಿದ್ದರು.

2018ರ ಮೇ ತಿಂಗಳಲ್ಲಿ ‘ಬಿ’ ವರದಿ ತಿರಸ್ಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸಬೀಹಾ ರೋಷನ್‌ ಮತ್ತು ರುಮಾನ್‌ ಬೇಗ್‌ ವಿರುದ್ಧ ವಿಚಾರಣೆ ಆರಂಭಿಸಿದ್ದರು. ರೋಷನ್‌ ಬೇಗ್‌ ಶಾಸಕರಾಗಿದ್ದ ಕಾರಣದಿಂದ ಅವರ ವಿರುದ್ಧ ವಿಚಾರಣೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ಸಲ್ಲಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

ಆರೋಪಿತರು ₹ 56.71 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಮಾಹಿತಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ವರದಿಯಲ್ಲಿದೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೈಕೋರ್ಟ್‌ಗೆ ತಿಳಿಸಿದರು.

‘ಸಕಾರಣ ಇದ್ದಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ‘ಬಿ’ ವರದಿಯನ್ನು ತಿರಸ್ಕರಿಸಬಹುದು. ಈ ಪ್ರಕರಣದಲ್ಲಿ ನ್ಯಾಯಾಧೀಶರು ಕಾನೂನಿನ ಪ್ರಕಾರವೇ ನಡೆದುಕೊಂಡಿದ್ದಾರೆ. ತನಿಖಾಧಿಕಾರಿಯು ಸಲ್ಲಿಸುವ ‘ಬಿ’ ವರದಿಯನ್ನು ನ್ಯಾಯಾಧೀಶರು ಸ್ವೀಕರಿಸುವುದು ಕಡ್ಡಾಯವಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ಈ ಪ್ರಕರಣದಲ್ಲಿ ಅಕ್ರಮ ಆಸ್ತಿಯ ಮೊತ್ತವು ಶೇಕಡ 10ರಷ್ಟಿದೆ ಎಂಬ ಅಭಿಪ್ರಾಯದ ಆಧಾರದಲ್ಲಿ ‘ಬಿ’ ವರದಿ ಸಲ್ಲಿಸಲಾಗಿದೆ. ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ತೆಗೆದುಕೊಂಡ ತೀರ್ಮಾನವನ್ನು ಅದಕ್ಕೆ ಬೆಂಬಲವಾಗಿ ಉಲ್ಲೇಖಿಸಲಾಗಿದೆ. ಆದರೆ, ಸುಪ್ರೀಂಕೋರ್ಟ್‌ನ ತೀರ್ಮಾನವು ಆ ಪ್ರಕರಣಕ್ಕೆ ಸೀಮಿತವಾಗಿತ್ತು. ಎಲ್ಲ ಪ್ರಕರಣಗಳಿಗೂ ಅದನ್ನು ಅನ್ವಯಿಸಲೇಬೇಕೆಂಬ ನಿಯಮವಿಲ್ಲ. ಆಸ್ತಿಯ ಮೌಲ್ಯ ಮತ್ತು ತೀರ್ಪನ್ನು ತಪ‍್ಪಾಗಿ ಅರ್ಥೈಸಿಕೊಂಡು ತನಿಖಾಧಿಕಾರಿ ‘ಬಿ’ ವರದಿ ಸಲ್ಲಿಸಿದ್ದಾರೆ’ ಎಂದು ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT