ಶುಕ್ರವಾರ, ಅಕ್ಟೋಬರ್ 7, 2022
24 °C
ಆಸ್ಪತ್ರೆಗೆ ಭೇಟಿ ನೀಡಿದ್ದ ಡಾ.ಸ್ಮಿತಾ ನೇತೃತ್ವದ ಸಮಿತಿ

ವಿಮ್ಸ್ ವೈದ್ಯರು, ಸಿಬ್ಬಂದಿ ಸಮಗ್ರ ವಿಚಾರಣೆ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ತೀವ್ರ ನಿಗಾ ಘಟಕದಲ್ಲಿ (ಐಸಿಯು)  ವಿದ್ಯುತ್‌ ಸ್ಥಗಿತಗೊಂಡು ಸಂಭವಿಸಿದೆ ಎನ್ನಲಾದ ಸಾವುಗಳ ಕುರಿತು ಬೆಂಗಳೂರು ಬಿಎಂಸಿಯ ಪ್ರಾಧ್ಯಾಪಕಿ ಡಾ.ಸ್ಮಿತಾ ನೇತೃತ್ವದ ಸಮಿತಿ ಶುಕ್ರವಾರ ಸಮಗ್ರ ವಿಚಾರಣೆ ನಡೆಸಿತು.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ.ಸಿದ್ದಿಕಿ ಅಹಮದ್‌, ಬಿಎಂಸಿ ಮತ್ತು ಆರ್‌ಐ ಜನರಲ್‌ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಡಾ.ದಿವಾಕರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಯೋಗೇಶ್‌ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಉಮಾ ಕೆ.ಎ. ಸಮಿತಿಯಲ್ಲಿದ್ದಾರೆ.

ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ ಅವರ ಕಚೇರಿಗೆ ಆಗಮಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ವಿಮ್ಸ್‌ ವೈದ್ಯಕೀಯ ಅಧೀಕ್ಷಕ ಯೋಗೇಶ್‌, ಟ್ರಾಮಾ ಕೇರ್‌ ಅಧೀಕ್ಷಕ ಶಿವು ನಾಯಕ್‌, ಆರ್‌ಎಂಒ ಖಾಜಾ ಮೊಹಿದ್ದೀನ್‌, ನರ್ಸಿಂಗ್‌ ಸೂಪರಿಂಟೆಂಡೆಂಟ್‌ ನಾಗರತ್ನ, ಮೆಡಿಸಿನ್‌ ವಿಭಾಗದ ಡಾ. ಮಲ್ಲಿಕಾರ್ಜುನರೆಡ್ಡಿ ಸೇರಿ ವಿವಿಧ ವೈದ್ಯಾಧಿಕಾರಿಗಳ ವಿಚಾರಣೆ ನಡೆಸಿದರು.

ಆ ನಂತರ ಎಂಐಸಿಯು, ಆರ್‌ಐಸಿಯು ವಿಭಾಗಕ್ಕೆ ತೆರಳಿ ವಿದ್ಯುತ್‌ ಪೂರೈಕೆ ಸ್ಥಿತಿಗತಿ ಪರಿಶೀಲಿಸಿದರು. ವಿದ್ಯುತ್‌ ವಾಹಕಗಳ ತಪಾಸಣೆ ಮಾಡಿದರು. ‘ಭೂಮಿಯೊಳಗೆ ಅಳವಡಿಸಿದ್ದ ಕೇಬಲ್‌ ಸ್ಫೋಟಿಸಿದ ಸದ್ದು ಕೇಳಿತೆ? ಸದ್ದು ಕೇಳಿಸಿಕೊಂಡವರು ಯಾರು? ಈ ವಿಷಯವನ್ನು ಯಾರ ಗಮನಕ್ಕೆ ತರಲಾಯಿತು?’ ಎಂಬ ಪ್ರಶ್ನೆ‌ಗಳನ್ನು ಕೇಳಿದರು.

ಜಂಕ್ಷನ್‌ ಬಾಕ್ಸ್‌ಗಳನ್ನು ತೆರೆದು ಸಿ.ಟಿ ಸ್ಕ್ಯಾನ್‌ ಉಪಕರಣಕ್ಕೆ ಎಲ್ಲಿಂದ ಸಂಪರ್ಕ ಕಲ್ಪಿಸಲಾಗಿದೆ? ದೀಪಗಳಿಗೆ ಯಾವ ಕೇಬಲ್‌ ಮೂಲಕ ಸಂಪರ್ಕ ಕೊಡಲಾಗಿದೆ? ಐಸಿಯು ವಿಭಾಗಕ್ಕೆ ಹೋಗಿರುವ ಕೇಬಲ್‌ ಯಾವುದು? ಎಂಬ ಪ್ರಶ್ನೆಗಳಿಗೆ ಎಲೆಕ್ಟ್ರಿಕಲ್‌ ವಿಭಾಗದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಬಳಿಕ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದ್ದ ಐಸಿಯು ವಿಭಾಗಕ್ಕೆ ತೆರಳಿ ‍ಪರಿಶೀಲನೆ ನಡೆಸಿದರು.

ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ರೋಗಿಗಳಿಂದಲೂ ಮಾಹಿತಿ ಪಡೆದರು. ನರ್ಸಿಂಗ್‌ ವಿಭಾಗದ ಅಧೀಕ್ಷಕಿ ನಾಗರತ್ನ, ಘಟನೆ ನಡೆದ ವೇಳೆ ಐಸಿಯುನಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ನರ್ಸ್‌ಗಳಿಂದ ಸಮಿತಿ ಮಾಹಿತಿ ಪಡೆಯಿತು. ಪೂರಕ ದಾಖಲೆಗಳನ್ನು ಸಂಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು