ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಅಕ್ರಮದ ತನಿಖೆಗೆ ತಂಡ

ಕುಲಪತಿ- ಕುಲಸಚಿವರ ಶೀತಲ ಸಮರವೂ ತನಿಖೆ ವ್ಯಾಪ್ತಿಗೆ
Last Updated 3 ಫೆಬ್ರುವರಿ 2021, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹಲವು ಅಕ್ರಮಗಳು ನಡೆದಿವೆ‘ ಎಂಬ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ತ್ರಿಸದಸ್ಯ ತಂಡವನ್ನೂ ರಚಿಸಲಾಗಿದ್ದು, ನಾಲ್ಕು ದಿನಗಳೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಆರತಿ ಆನಂದ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ವೆಂಕಟೇಶಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯ ಲೆಕ್ಕಾಧಿಕಾರಿ ಮಹೇಶ್‌ ಅವರನ್ನು ಒಳಗೊಂಡ ತನಿಖಾ ತಂಡವನ್ನು ಸರ್ಕಾರ ರಚಿಸಿದೆ.

ವಿವಿ ಅಪಹಾಸ್ಯಕ್ಕೆ ಈಡಾಗಿದೆ: ಕುಲಪತಿ ಮತ್ತು ಕುಲಸಚಿವರ ನಡುವಿನ‌ ಶೀತಲಸಮರ, ವಿತ್ತಾಧಿಕಾರಿಯನ್ನು ನಿಯಮಬಾಹಿರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಬೋಧಕೇತರ ಸಿಬ್ಬಂದಿಯ ಪ್ರತಿಭಟನೆಗೆ ಪ್ರಚೋದನೆ ಮತ್ತಿತರ ಅಂಶಗಳು ತನಿಖಾ ವ್ಯಾಪ್ತಿಯಲ್ಲಿವೆ.

'ವಿಶ್ವವಿದ್ಯಾಲಯದಲ್ಲಿನ ಆಡಳಿತಾ
ತ್ಮಕ ಜಡತ್ವವನ್ನು ಹೋಗಲಾಡಿಸಿ, ಅವ್ಯವಸ್ಥೆಯನ್ನು ಸರಿಪಡಿಸಿ, ಆರ್ಥಿಕ ಶಿಸ್ತನ್ನು ಸರಿಪಡಿಸುವ ಉದ್ದೇಶದಿಂದ ಈ ವಿಶೇಷ ತಂಡ ರಚಿಸಲಾಗಿದೆ' ಎಂದು ಸರ್ಕಾರ ಹೇಳಿದೆ.

'ಆರ್ಥಿಕ ವ್ಯವಹಾರದಲ್ಲಿ ನಡೆದ ಗಂಭೀರ ಪ್ರಮಾದಗಳಿಂದ ವಿಶ್ವವಿದ್ಯಾಲಯವು ಸಾರ್ವಜನಿಕ ಮತ್ತು ಮಾಧ್ಯಮಗಳ ದೃಷ್ಟಿಯಲ್ಲಿ ಅಪಹಾಸ್ಯಕ್ಕೆ ಈಡಾಗುವಂತಾಗಿದೆ' ಎಂದೂ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.

ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ತಂಡವು ಎಲ್ಲ ಕಾರ್ಯಗಳ ಪರಿವೀಕ್ಷಣೆ ನಡೆಸಲು ಅವಕಾಶ ನೀಡುವಂತೆಯೂ ಕುಲಪತಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ತಿದ್ದಿದ ಹಗರಣ, ಕುಲಪತಿ- ಕುಲಸಚಿವರ ನಡುವಿನ ಶೀತಲ ಸಮರ, ಲೆಕ್ಕಪತ್ರಗಳಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ವಿತ್ತಾಧಿಕಾರಿ ನೀಡಿದ ವರದಿ, ಬೋಧಕೇ
ತರ ಸಿಬ್ಬಂದಿ ಮುಷ್ಕರದ ಹಿಂದಿರುವ ಪ್ರಚೋದನೆ ಇತ್ಯಾದಿ ಅಂಶಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದನ್ನು ಸ್ಮರಿಸಬಹುದು.

ತನಿಖೆ ನಡೆಸಲು ಸೂಚಿಸಿರುವ ಅಂಶಗಳು

* ಬೋಧಕ ಹಾಗೂ ಬೋಧಕೇತರ ನೌಕರರ ಮುಂಬಡ್ತಿ ಪ್ರಕ್ರಿಯೆಗಳಲ್ಲಿ ಲೋಪಗಳನ್ನು ಎಸಗಿರುವ ಹಾಗೂ ನಿಯಮ ಉಲ್ಲಂಘಿಸಿರುವ ಬಗ್ಗೆ

* ಹಣಕಾಸು ಅಧಿಕಾರಿಯು ವಿಶ್ವವಿದ್ಯಾಲಯ ಲೆಕ್ಕಪತ್ರಗಳ ನಿರ್ವಹಣೆ/ಹಣಕಾಸು ವಹಿವಾಟುಗಳಲ್ಲಿನ ಲೋಪದೋಷಗಳ ಕುರಿತಂತೆ ವ್ಯಕ್ತಪಡಿಸಿರುವ ಆಕ್ಷೇಪಣೆ

* ವಿಶ್ವವಿದ್ಯಾಲಯದ ಕುಲಪತಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ ವಿರುದ್ಧವಾಗಿ ಉಲ್ಲಂಘನೆ ಮಾಡಿರುವ ಹಾಗೂ ಸಿಂಡಿಕೇಟ್ ಸಭೆಗಳನ್ನು ನಿಯಮಿತವಾಗಿ ನಡೆಸದ ಬಗ್ಗೆ

*ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಕುರಿತು

* ವಿಶ್ವವಿದ್ಯಾಲಯದ 50 ವಿಭಾಗಗಳಿಗೆ ಅಧ್ಯಕ್ಷರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿರುವ ಬಗ್ಗೆ

* ಘಟಿಕೋತ್ಸವವನ್ನು ಸರಿಯಾದ ಸಮಯಕ್ಕೆ ನಡೆಸದಿರುವ ಬಗ್ಗೆ

* ಕುಲಸಚಿವರು ಹಾಗೂ ವಿತ್ತಾಧಿಕಾರಿಗಳು ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದಿರುವ ಕುರಿತು

* ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ

ಉತ್ತರ ಪತ್ರಿಕೆಗಳ ಹಗರಣ: ಚುರುಕಾಗದ ತನಿಖೆ

ಗುತ್ತಿಗೆ ಪಡೆದ ಏಜೆನ್ಸಿಯೇ ಉತ್ತರ ಪತ್ರಿಕೆಗಳನ್ನು ತಿದ್ದಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿಲ್ಲ. ಪೊಲೀಸ್ ಠಾಣಾ ವ್ಯಾಪ್ತಿ ಮೀರಿದ ಈ ಪ್ರಕರಣವನ್ನು ಉನ್ನತ ತನಿಖಾ ತಂಡಕ್ಕೆ ವಹಿಸಬೇಕಿತ್ತು. ಆ ಕೆಲಸವೂ ಆಗಿಲ್ಲ.

'ವಿಶ್ವವಿದ್ಯಾಲಯದಿಂದ ಎಲ್ಲ ಪ್ರಕ್ರಿಯೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಅಡ್ವೊಕೇಟ್‌ ಜನರಲ್‌ ಅವರು ಪರಿಶೀಲನೆ ನಡೆಸುವ ಸಾಧ್ಯತೆ ಇದೆ' ಎಂದು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

ತನಿಖಾ ತಂಡ ಪುನರ್ ರಚನೆ ?

ತನಿಖಾ ತಂಡದಲ್ಲಿರುವ ಅಧಿಕಾರಿಗಳು ಕುಲಸಚಿವರು ಮತ್ತು ಕೆಎಎಸ್ ದರ್ಜೆಯವರು. ಕುಲಪತಿ ವಿರುದ್ಧ ಮತ್ತು ಐಎಎಸ್ ಅಧಿಕಾರಿಯಾಗಿರುವ ಕೆ. ಜ್ಯೋತಿ ಅವರ ವಿಚಾರಣೆ ನಡೆಸಬೇಕಾಗುತ್ತದೆ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯೂ ಆಗಲಿದೆ.

ಜ.29ರಂದೇ ತಂಡವನ್ನು ರಚಿಸಲಾಗಿದೆ. ನಾಲ್ಕು ದಿನದೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಆದರೆ, ಶಿಷ್ಟಾಚಾರದ ಉಲ್ಲಂಘನೆ ಆಗುತ್ತದೆ ಎಂಬ ಕಾರಣದಿಂದ ತಂಡವು ಇನ್ನೂ ತನಿಖೆ ಆರಂಭಿಸಿಲ್ಲ. ತನಿಖಾ ತಂಡವನ್ನು ಪುನರ್‌ರಚಿಸಿ, ಐಎಎಸ್ ಮಟ್ಟದ ಅಧಿಕಾರಿಗೆ ತನಿಖೆಯ ನೇತೃತ್ವ ವಹಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT